ಭ್ರಷ್ಟಾಚಾರದ ಆರೋಪ ಇದೆ ಎಂದು ಎ ಐ ಸಂಚಾರ ಕ್ಯಾಮೆರಾ ಅಳವಡಿಕೆ ಯೋಜನೆಯನ್ನು ನಿರುತ್ತೇಜನಗೊಳಿಸಲಾಗದು : ಕೇರಳ ಹೈಕೋರ್ಟ್

ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡುವಂತೆ ಕೋರಿ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿ ತೀರ್ಪು ನೀಡುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
surveillance cam, kerala hc
surveillance cam, kerala hc
Published on

ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆಹಚ್ಚಲು ರಸ್ತೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸುವುದು ವಿನೂತನ ಹೆಜ್ಜೆಯಾಗಿದ್ದು ಸರ್ಕಾರವು ಭ್ರಷ್ಟಾಚಾರ ಎಸಗಿದೆ ಎಂದೋ ಅಥವಾ ಪಾರದರ್ಶಕತೆಯ ಕೊರತೆ ಇದೆ ಎಂದೋ ಅರೋಪಿಸಿದ ಮಾತ್ರಕ್ಕೆ ಕ್ಯಾಮೆರಾ ಅಳವಡಿಕೆ ಕಾರ್ಯವನ್ನು ನಿರುತ್ತೇಜನಗೊಳಿಸಲಾಗದು ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಮೋಹನನ್‌ ವಿ ವಿ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಆರೋಪಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕಿರುವ ವಿಷಯಗಳಾಗಿವೆ. ಆದರೆ ಹೊಸ ಯೋಜನೆ ಎದುರಿಸುತ್ತಿರುವ ಆರೋಪಗಳೇನೇ ಇದ್ದರೂ ಸಂಚಾರ ಉಲ್ಲಂಘನೆ ಪತ್ತೆ ಹಚ್ಚಲು ಎ ಐ ಕ್ಯಾಮೆರಾಗಳನ್ನು ಬಳಸುವುದು ವಿನೂತನ ವಿಧಾನವಾಗಿದೆ ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

"ಕ್ಯಾಮೆರಾ ಮತ್ತಿತರ ಉಪಕರಣಗಳನ್ನು ಖರೀದಿಸುವ ನಿರ್ಧಾರದಲ್ಲಿ ಪಾರದರ್ಶಕತೆಯ ಬಗ್ಗೆ ಆಕ್ಷೇಪಣೆಗಳಿರಬಹುದು. ಭ್ರಷ್ಟಾಚಾರದ ಆರೋಪಗಳು ಕೂಡ ಕೇಳಿಬರುತ್ತಿವೆ. ಅದು ಪ್ರತ್ಯೇಕವಾಗಿ ವ್ಯವಹರಿಸಬೇಕಾದ ವಿಭಿನ್ನ ಪ್ರಕರಣ. ಆ ಕಾರಣಕ್ಕಾಗಿ, ಮೋಟಾರು ವಾಹನ ಇಲಾಖೆ ಆರಂಭಿಸಿರುವ ವಿನೂತನ ಸಾಹಸವನ್ನು ನಿರುತ್ತೇಜನಗೊಳಿಸಲಾಗದು. ಯೋಜನೆಯನ್ನು ಇತ್ತೀಚೆಗೆ ಜಾರಿಗೊಳಿಸಿರುವುದರಿಂದ ತಾಂತ್ರಿಕ ಲೋಪದೋಷಗಳಿರಬಹುದು. ಖಂಡಿತವಾಗಿಯೂ ಅದನ್ನು ಸರಿಪಡಿಸಬೇಕು. ಆದರೆ ತಂತ್ರಜ್ಞಾನದ  ಹೊಸ ಯುಗದಲ್ಲಿ ಎಐ ಕಣ್ಗಾವಲು ಕ್ಯಾಮೆರಾಗಳ ಅಳವಡಿಕೆ, ರಸ್ತೆ ನಿಯಮ ಉಲ್ಲಂಘನೆ ಪತ್ತೆ ಹಚ್ಚವ ನಿಟ್ಟಿನಲ್ಲಿ ಇರಿಸುವ ಇದೊಂದು ವಿನೂತನ ಹೆಜ್ಜೆ,’’ ಎಂದು ನ್ಯಾಯಾಲಯ ನುಡಿದಿದೆ.

ʼಸುರಕ್ಷಿತ ಕೇರಳಕ್ಕಾಗಿ ಸ್ವಯಂಚಾಲಿತ ಸಂಚಾರ ಜಾರಿ ವ್ಯವಸ್ಥೆʼ  ಯೋಜನೆಯದಡಿ ಸಾರಿಗೆ ಇಲಾಖೆ ರಾಜ್ಯದಲ್ಲಿ ಎ ಐ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ.

ಯೋಜನೆಗೆ ವಿರೋಧಪಕ್ಷಗಳಿಂದಲೂ ಟೀಕೆ ವ್ಯಕ್ತವಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳು ಇಂತಹ ವಿನೂತನ ಯೋಜನೆ ಜಾರಿಗೆ ತಂದಿದ್ದಕ್ಕಾಗಿ ರಾಜ್ಯ ಸರ್ಕಾರ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.

ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡುವಂತೆ ಕೋರಿ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ತೀರ್ಪು ನೀಡುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.  

ಕುತೂಹಲಕಾರಿ ಸಂಗತಿ ಎಂದರೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದಾದ್ಯಂತ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಬಳಸುವ ʼಸೇಫ್‌ ಕೇರಳʼ ಯೋಜನೆ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಕೋರಿ ರಾಜ್ಯದ ಕೆಲ ಕಾಂಗ್ರೆಸ್‌ ನಾಯಕರು ಸಲ್ಲಿಸಿದ್ದ ಬೇರೊಂದು ಅರ್ಜಿಯನ್ನು ಇತ್ತೀಚೆಗೆ ಆಲಿಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಮುಂದಿನ ಆದೇಶದವರೆಗೆ ಯೋಜನೆಗೆ ಹಣ ಪಾವತಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

Kannada Bar & Bench
kannada.barandbench.com