ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣಾ ರಾವ್ ವಿರುದ್ಧದ ಅತ್ಯಚಾರ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ತಾಯಿ ಮತ್ತು ಮಗುವನ್ನು ಅನಾಥವಾಗಿಸಲು ಬಿಡಲಾಗದು ಎಂದು ಕಟುವಾಗಿ ನುಡಿದಿದೆ. ಅಲ್ಲದೇ, ಈ ಪ್ರಕರಣಕ್ಕೆ ತಡೆ ನೀಡದರೆ ಕೃತ್ಯ ಬೆಂಬಲಿಸಿದಂತೆ ಎಂದು ಕಿಡಿಕಾರಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆ ಕೋರಿ ಕೃಷ್ಣರಾವ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಬುಧವಾರ ನಡೆಸಿತು.
ಕೃಷ್ಣಾ ರಾವ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಮದುವೆಯಾಗುವುದಾಗಿ ನಂಬಿಸಿ ಮದುವೆಯಾಗದೇ ಇರುವ ಪ್ರಕರಣ ಇದಾಗಿದೆ. ಕ್ರಿಮಿನಲ್ ಪ್ರಕರಣದಿಂದಾಗಿ ಇಡೀ ಕುಟುಂಬ ವಿನಾಶದ ಹಂತ ತಲುಪಿದೆ. ಒಂಭತ್ತನೇ ತರಗತಿ ಓದುವಾಗ ಸಂತ್ರಸ್ತೆ ಮತ್ತು ಕೃಷ್ಣಾ ರಾವ್‌ಗೆ ಪ್ರೀತಿಯಾಗಿತ್ತು. ಆನಂತರ ಮಗುವಾಗಿದೆ. ರಾಜಕೀಯ ಎದುರಾಳಿಗಳು ಇದನ್ನು ಬಳಕೆ ಮಾಡಿಕೊಂಡು ಕೃಷ್ಣಾ ರಾವ್ ತಂದೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಕೃಷ್ಣಾ ರಾವ್ ಅವರ ತಂದೆ-ತಾಯಿ, ಸಂಬಂಧಿಕರನ್ನು ಆರೋಪಿಗಳನ್ನಾಗಿಸಲಾಗಿದೆ. ಕ್ರಿಮಿನಲ್ ಪ್ರಕರಣದಿಂದಾಗಿ ಎರಡೂ ಕುಟುಂಬಗಳು ಒಟ್ಟಿಗೆ ಕುಳಿತು ಮಾತನಾಡಲಾಗದ ಸನ್ನಿವೇಶ ಸೃಷ್ಟಿಯಾಗಿದೆ. ತಾತ್ಕಾಲಿಕವಾಗಿ ತಡೆ ನೀಡಿದರೆ ಎರಡೂ ಕುಟುಂಬ ಮಾತನಾಡಬಹುದು. ಕೃಷ್ಣಾರಾವ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮಗು ತನ್ನದಲ್ಲ ಎಂದು ಆತ ಹೇಳುತ್ತಿಲ್ಲ. ಇದರಲ್ಲಿ ಪೋಷಕರ ಪಾತ್ರವಿಲ್ಲ” ಎಂದರು.
ಆಗ ಪೀಠವು “ಸಂತ್ರಸ್ತೆಯನ್ನು ಮದುವೆಯಾಗಲು ಒಪ್ಪಿದರೆ ಪ್ರಕರಣ ರದ್ದುಪಡಿಸಲಾಗುವುದು. ಇದು ಪದೇ ಪದೇ ಅತ್ಯಾಚಾರ ಮಾಡಿದ ಪ್ರಕರಣವಾಗಿದೆ. ತಾಯಿ ಮತ್ತು ಮಗುವನ್ನು ಅನಾಥವಾಗಿಸಲಾಗದು. ಎಲ್ಲದಕ್ಕೂ ಅಂತ್ಯವಾಡಲು ಸಂತ್ರಸ್ತೆಯನ್ನು ಮದುವೆಯಾಗುವುದು ಉತ್ತಮ. ಬೇರೊಬ್ಬರನ್ನು ಮದುವೆಯಾಗಬೇಕೆ? ಒಂಭತ್ತನೇ ತರಗತಿ ವಿದ್ಯಾರ್ಥಿನಿ ಜೊತೆಗೆ ಸಂಬಂಧ ಹೊಂದುವುದು ಪೋಕ್ಸೊ ಕಾಯಿದೆ ಅಡಿ ಅಪರಾಧ. ಮಗು ನಿಮ್ಮದು ಎಂದ ಮೇಲೆ ಜವಾಬ್ದಾರಿ ಇರಬೇಕಲ್ಲವೇ? ತಂದೆ ಎಂದು ಒಪ್ಪಿಕೊಂಡ ಮೇಲೆ ಮಗುವಿಗೆ ಮಾಸಿಕ ಜೀವನಾಂಶ ನೀಡುತ್ತಿದ್ದೀರಾ? ಪ್ರಕರಣಕ್ಕೆ ತಡೆ ನೀಡಿದರೆ ನಿಮ್ಮ ಕೃತ್ಯ ಬೆಂಬಲಿಸಿದಂತೆ. ಮಗುವಿನ ಜೀವನಾಂಶಕ್ಕೆ ಮಾಸಿಕ ಹತ್ತು ಸಾವಿರ ರೂಪಾಯಿ ನೀಡಿದರೆ ಪ್ರಕರಣಕ್ಕೆ ತಡೆ ನೀಡಲಾಗುವುದು” ಎಂದಿತು.
ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಒಂದು ಹಂತದಲ್ಲಿ ಗರ್ಭಪಾತ ಮಾಡಿಸಲು ಮುಂದಾಗಿದ್ದರು” ಎಂದರು. ಇದಕ್ಕೆ ಪಿ ಪಿ ಹೆಗ್ಡೆ ಅವರು “ಎರಡೂ ಕಡೆಯವರು ಸೇರಿ ಗರ್ಭಪಾತ ಮಾಡಿಸಲು ಮುಂದಾಗಿದ್ದರು. ಆದರೆ, ಸಾಧ್ಯವಾಗಲಿಲ್ಲ” ಎಂದರು.
ಅಂತಿಮವಾಗಿ, ಶುಕ್ರವಾರ ವಿಚಾರಣೆ ನಡೆಸುವುದಾಗಿ ಹೇಳಿ, ಮುಂದೂಡಿತು.