[ನಾಪತ್ತೆ ಪ್ರಕರಣ] ಸಂಬಂಧಿತ ಪ್ರದೇಶ ಠಾಣೆ ವ್ಯಾಪ್ತಿಗೆ ಒಳಪಡದು ಎಂದು ದೂರು ನಿರಾಕರಿಸುವಂತಿಲ್ಲ: ಹೈಕೋರ್ಟ್‌

ತಂತ್ರಜ್ಞಾನ ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ನಾಪತ್ತೆ ಅಥವಾ ಕಣ್ಮರೆಯಾಗುತ್ತಿರುವ ವ್ಯಕ್ತಿಗಳ ಕುರಿತ ದೂರುಗಳ ಸ್ವೀಕಾರ–ಪರಿಹಾರದ ನಿಟ್ಟಿನಲ್ಲಿ ಮಾರ್ಗಸೂಚಿಗಳೂ ಬದಲಾಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ.
[ನಾಪತ್ತೆ ಪ್ರಕರಣ] ಸಂಬಂಧಿತ ಪ್ರದೇಶ ಠಾಣೆ ವ್ಯಾಪ್ತಿಗೆ ಒಳಪಡದು ಎಂದು ದೂರು ನಿರಾಕರಿಸುವಂತಿಲ್ಲ: ಹೈಕೋರ್ಟ್‌
Published on

ನಾಪತ್ತೆ ಪ್ರಕರಣಗಳಲ್ಲಿ ನಾಪತ್ತೆಯಾದವರ ಬಗ್ಗೆ ದೂರು ಸ್ವೀಕರಿಸುವಾಗ ಪೊಲೀಸರು ಸಂಬಂಧಿಸಿದ ಪ್ರದೇಶ ನಮ್ಮ ಠಾಣೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನಿರಾಕರಣೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಆದೇಶಿಸಿದೆ.

2023ರಲ್ಲಿ ಪುತ್ರಿ ನಾಪತ್ತೆಯಾಗಿದ್ದು, ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಹುಬ್ಬಳಿಯ ರಾಮಕೃಷ್ಣ ಭಟ್‌ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಸಿ ಎಂ ಪೂಣಚ್ಚ ನೇತೃತ್ವದ ವಿಭಾಗೀಯ ಪೀಠವು ಇಂತಹ ದೂರುಗಳು ಬಂದಾಗ ಪೊಲೀಸರು ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ನಾಪತ್ತೆ ಅಥವಾ ಕಣ್ಮರೆಯಾಗುತ್ತಿರುವ ವ್ಯಕ್ತಿಗಳ ಕುರಿತ ದೂರುಗಳ ಸ್ವೀಕಾರ–ಪರಿಹಾರದ ನಿಟ್ಟಿನಲ್ಲಿ ಮಾರ್ಗಸೂಚಿಗಳೂ ಬದಲಾಗುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರ 2009ರಲ್ಲಿ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಮತ್ತು 2016ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೊರಡಿಸಿರುವ ಎಸ್‌ಒಪಿ ಆಧರಿಸಿ ರಾಜ್ಯ ಸರ್ಕಾರ ಅಗತ್ಯ ಸುತ್ತೋಲೆ ಅಥವಾ ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಪ್ರಸಕ್ತ ಪ್ರಕರಣದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.

ಮಾರ್ಗಸೂಚಿಗಳು ಇಂತಿವೆ:

  • ನಾಪತ್ತೆಯಾಗಿರುವ ವ್ಯಕ್ತಿಗಳ ಬಗ್ಗೆ ದೂರುಗಳನ್ನು ಪ್ರಾಮಾಣಿಕವಾಗಿ ದಾಖಲು ಮಾಡಿಕೊಳ್ಳಬೇಕು.

  • ಸಂಬಂಧಿಸಿದ ಶಾಸನಬದ್ಧ ಪ್ರಾಧಿಕಾರಗಳು ಕಾಣೆಯಾದ ಮಹಿಳೆ, ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದೆಯೇ ಅಥವಾ ಯಾವುದೇ ಇತರ ವ್ಯಕ್ತಿಗೆ ಸಂಬಂಧಿಸಿದೆಯೇ ಎಂಬುದನ್ನು ನಿರ್ದಿಷ್ಟವಾಗಿ ಗಮನಿಸಿದ ನಂತರ ಮಾನವ ಕಳ್ಳ ಸಾಗಣೆ ಘಟಕ ಅಥವಾ ಕೋಶಕ್ಕೆ ಮಾಹಿತಿ ನೀಡಬೇಕು.

  • ಯಾವುದೇ ಸಂದರ್ಭಗಳಲ್ಲಿಯೂ ಯಾವುದೇ ಪೊಲೀಸ್‌ ಅಧಿಕಾರಿಗಳು ಇಂತಹ ಯಾವುದೇ ದೂರುಗಳನ್ನು ತಿರಸ್ಕರಿಸಬಾರದು ಮತ್ತು ಪ್ರತಿಯೊಂದು ದೂರನ್ನು ತಕ್ಷಣವೇ ಪರಿಗಣಿಸಬೇಕು.

  • ವ್ಯಕ್ತಿಯ ಮೃತದೇಹ ನಂತರದಲ್ಲಿ ಪತ್ತೆಯಾದರೆ, ತನಿಖಾ ಅಧಿಕಾರಿಗಳು ಡಿಎನ್‌ಎ ವಿಶ್ಲೇಷಣೆ ಮೂಲಕ ಹೋಲಿಕೆ ಮಾಡಲು ಸಾಧ್ಯವಾಗುವಂತೆ ಕಾಣೆಯಾದ ವ್ಯಕ್ತಿಯ ಕುಟುಂಬದ ಸದಸ್ಯರ ವಿಧಿ ವಿಜ್ಞಾನ ಪುರಾವೆಗಳನ್ನು ಪಡೆದುಕೊಳ್ಳಬೇಕು.

  • ಕಾಣೆಯಾದ ವ್ಯಕ್ತಿಯ ಇತ್ತೀಚಿನ ಛಾಯಾಚಿತ್ರ ಸಂಗ್ರಹಿಸಿ ಅದರ ಪ್ರತಿಗಳನ್ನು ಎಯುಟಿಎಚ್‌ಯು, ಸಿಐಡಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗಳಿಗೂ ಒದಗಿಸಬೇಕು.

  • ಕಾಣೆಯಾದವರ ದೂರಿನ ವಿವರಗಳನ್ನು ದೂರು ದಾಖಲಾದ 24 ಗಂಟೆಗಳ ಒಳಗೆ ಬೀಟ್‌ ಪೊಲೀಸ್‌ ಸಿಬ್ಬಂದಿ ಮತ್ತು ಹೊಯ್ಸಳ ಮುಂತಾದ ಮೊಬೈಲ್‌ ಪೊಲೀಸ್‌ ಘಟಕಗಳಿಗೆ ಡಿಜಿಟಲ್ ರೂಪದಲ್ಲಿ ರವಾನಿಸಬೇಕು.

  • ಕಾಣೆಯಾದವರ ವಿವರಗಳನ್ನು (ಆ ನಿಟ್ಟಿನಲ್ಲಿ ಅಗತ್ಯ ಒಪ್ಪಿಗೆ ಪಡೆದ ನಂತರ) ಮಾನ್ಯತೆ ಪಡೆದ ದಿನಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಹಾಗೂ ಆಡಿಯೋ ಮತ್ತು ವಿಡಿಯೋ ಸುದ್ದಿ ಜಾಲತಾಣಗಳ ಮೂಲಕ ಪ್ರಕಟಿಸಬೇಕು.

  • ಕಾಣೆಯಾದವರ ದೂರಿನ ವಿವರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪೋರ್ಟಲ್‌ಗಳಲ್ಲಿ ಹಾಗೂ ಇತರ ಪೋರ್ಟಲ್‌ಗಳಲ್ಲಿಯೂ ಅಪ್‌ಲೋಡ್‌ ಮಾಡಬೇಕು.

Attachment
PDF
Ramakrishna Vs DGP
Preview
Kannada Bar & Bench
kannada.barandbench.com