ಗರ್ಭಧರಿಸುವ, ಧರಿಸದೆ ಇರುವ ಮಹಿಳೆಯ ವಂಶಾಭಿವೃದ್ಧಿ ಆಯ್ಕೆಯ ಹಕ್ಕನ್ನು ನಿಯಂತ್ರಿಸಲಾಗದು: ಕೇರಳ ಹೈಕೋರ್ಟ್

ಒಪ್ಪಿತ ಲೈಂಗಿಕ ಸಂಪರ್ಕದಿಂದಾಗಿದ್ದ ತನ್ನ 26 ವಾರಗಳ ಗರ್ಭಪಾತ ಮಾಡಿಸಿಕೊಳ್ಳಲು 23 ವರ್ಷದ ಎಂಬಿಎ ಪದವೀಧರೆಗೆ ಕೇರಳ ಹೈಕೋರ್ಟ್‌ ಅನುಮತಿಸಿದೆ.
Pregnancy
Pregnancy

ಗರ್ಭ ಧರಿಸುವ ಅಥವಾ ಧರಿಸದೇ ಇರುವ ಮಹಿಳೆಯ ಸಂತಾನೋತ್ಪತ್ತಿ ಆಯ್ಕೆಯ ಹಕ್ಕಿನ ವಿಚಾರದಲ್ಲಿ ಯಾವುದೇ ನಿರ್ಬಂಧ ಇರದು ಎಂದು ಕೇರಳ ಹೈಕೋರ್ಟ್‌ ಈಚೆಗೆ ಹೇಳಿದೆ.

ಸಂವಿಧಾನದ 21 ವಿಧಿಯ ಅಡಿ ಸಂತಾನೋತ್ಪತ್ತಿ ಆಯ್ಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಇದೆ. ಇದು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಸುಚಿತಾ ಶ್ರೀವಾಸ್ತವ ವರ್ಸಸ್‌ ಚಂಡೀಗಢ ಆಡಳಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ ಜಿ ಅರುಣ್‌ ನೇತೃತ್ವದ ಏಕಸದಸ್ಯ ಪೀಠವು ತಿಳಿಸಿತು.

“ಗರ್ಭಧರಿಸುವ ಅಥವಾ ಗರ್ಭಧರಿಸದೆ ಇರುವ ತನ್ನ ಆಯ್ಕೆಯ ಹಕ್ಕನ್ನು ಚಲಾಯಿಸಲು ಮಹಿಳೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇದು ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

20 ವಾರ ಮೀರಿದ ಗರ್ಭಾವಸ್ಥೆಯನ್ನು ಗರ್ಭಪಾತದ ಮೂಲಕ ಅಂತ್ಯಗೊಳಿಸುವ ಆಯ್ಕೆಯಿಂದ ಅವಿವಾಹಿತ ಮಹಿಳೆಯನ್ನು ಹೊರಗಿಡುವುದು ಸಂವಿಧಾನ 14ನೇ ವಿಧಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಆದೇಶ ಮಾಡಿದ್ದನ್ನು ನ್ಯಾಯಾಲಯವು ಉಲ್ಲೇಖಿಸಿತು.

ಸಹಪಾಠಿಯೊಂದಿಗೆ ನಡೆಸಿದ ಒಪ್ಪಿತ ಲೈಂಗಿಕ ಸಂಪರ್ಕದಿಂದಾಗಿ ಗರ್ಭ ಧರಿಸಿದ್ದನ್ನು ತೆಗೆಸಲು ಕೋರಿ 23 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಪೀಠವು ಆದೇಶ ಮಾಡಿತು.

ಗರ್ಭನಿರೋಧಕ ವಿಫಲವಾಗಿದ್ದರಿಂದ ಗರ್ಭ ಧರಿಸಿದ್ದು, ಅಲ್ಟ್ರಾ ಸೌಂಡ್‌ ಸ್ಕ್ಯಾನ್‌ ಮಾಡಿಸಿದ ಬಳಿಕ ಗರ್ಭಧರಿಸುವ ವಿಚಾರ ತಿಳಿದಿದೆ. ನಿಯಂತ್ರಿತವಾಗಿ ಮುಟ್ಟಾಗದಿರುವುದರಿಂದ ತಪಾಸಣೆಗೆ ವೈದ್ಯರ ಬಳಿಗೆ ತೆರಳಿದಾಗ ಅವರು ಸ್ಕ್ಯಾನ್‌ ಮಾಡಿಸಲು ತಿಳಿಸಿದರು. ಆಗ ಈ ವಿಚಾರ ತಿಳಿಯಿತು. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಯಾತನೆ ಅನುಭವಿಸುತ್ತಿದ್ದು, ಲೈಂಗಿಕ ಸಂಬಂಧ ಹೊಂದಿದ್ದ ಸಹಪಾಠಿಯು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದಾನೆ ಎಂದು ಆಕೆ ಮನವಿಯಲ್ಲಿ ವಿವರಿಸಿದ್ದಾಳೆ.

ಗರ್ಭಧಾರಣೆಯನ್ನು ಮುಂದವರಿಸಿದರೆ ಮಾನಸಿಕ ವೇದನೆ ಹೆಚ್ಚಾಗಲಿದ್ದು, ಮಗು ಪಡೆಯುವುದು ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ಅಡ್ಡಿಯಾಗಲಿದೆ. ಗರ್ಭಾವಸ್ಥೆಯು 24 ವಾರ ದಾಟಿರುವುದರಿಂದ ಯಾವುದೇ ಆಸ್ಪತ್ರೆ ಗರ್ಭಪಾತ ಮಾಡಿಸಲು ಸಿದ್ಧವಿಲ್ಲ. ಹೀಗಾಗಿ, ನ್ಯಾಯಾಲಯ ಮೆಟ್ಟಿಲೇರಿದ್ದಾಗಿ ಆಕೆ ಮನವಿಯಲ್ಲಿ ಉಲ್ಲೇಖಿಸಿದ್ದಳು.

ಇದನ್ನು ಪರಿಗಣಿಸಿರುವ ಪೀಠವು ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಿದ್ದು, ಪ್ರಕ್ರಿಯೆ ನಡೆಸಲು ವೈದ್ಯಕೀಯ ತಂಡ ರಚಿಸುವಂತೆ ಸಂಬಂಧಿತ ಆಸ್ಪತ್ರೆಗೆ ನಿರ್ದೇಶಿಸಿದೆ. ಒಂದೊಮ್ಮೆ ಮಗು ಜೀವಂತವಾಗಿ ಉಳಿದರೆ ಮಗುವಿಗೆ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯವು ಆಸ್ಪತ್ರೆಗೆ ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com