Yasin Malik and death penalty
Yasin Malik and death penalty

ಮಲಿಕ್‌ ಮತ್ತು ಲಾಡೆನ್‌ ನಡುವಿನ ಹೋಲಿಕೆ ತರವಲ್ಲ, ಲಾಡೆನ್ ವಿಚಾರಣೆಯನ್ನು ಎದುರಿಸಲಿಲ್ಲ: ದೆಹಲಿ ಹೈಕೋರ್ಟ್

ಮಲಿಕ್ ಜಾಣತನದಿಂದ ತಪ್ಪೊಪ್ಪಿಕೊಳ್ಳುವ ಮೂಲಕ ಮರಣದಂಡನೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಇಂದು ನಡೆದ ವಿಚಾರಣೆ ವೇಳೆ ಎನ್ಐಎ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆರೋಪಿಸಿದರು.
Published on

ಭಯೋತ್ಪಾದನೆಗೆ ನಿಧಿ ಸಂಗ್ರಹಿಸಿದ ಆರೋಪದಡಿ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಮಲಿಕ್‌ಗೆ ಸೋಮವಾರ ನೋಟಿಸ್‌ ಜಾರಿ ಮಾಡಿದ್ದು ಪ್ರತಿಕ್ರಿಯೆ ಕೇಳಿದೆ.

ಎನ್‌ಐಎ ಮಲಿಕ್‌ ಅವರನ್ನು ಭಯೋತ್ಪಾದಕ ಬಿನ್‌ ಲಾಡೆನ್‌ಗೆ ಹೋಲಿಸಿರುವುದು ಸರಿಯಲ್ಲ ಎಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ಪೀಠ ತಿಳಿಸಿದೆ.

Also Read
ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಎನ್ಐಎ ಅರ್ಜಿ

 “ನಾವು ಈ ಸಂಭಾವಿತ ವ್ಯಕ್ತಿಯನ್ನು ಬಿನ್‌ ಲಾಡೆನ್‌ಗೆ ಹೋಲಿಸುವುದು ಸೂಕ್ತವಲ್ಲ. ಏಕೆಂದರೆ ಲಾಡೆನ್‌ ಎಂದಿಗೂ ವಿಚಾರಣೆಯನ್ನು ಎದುರಿಸಲಿಲ್ಲ”ಎಂದು ಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ “ಮಲಿಕ್‌ ತಪ್ಪೊಪ್ಪಿಕೊಂಡ ಮಾತ್ರಕ್ಕೆ ಆತ ಮರಣದಂಡನೆಯಿಂದ ಮುಕ್ತರಾಗಲು ಸಾಧ್ಯವಿಲ್ಲ” ಎಂದರು. ಜಾಣತನದಿಂದ ತಪ್ಪೊಪ್ಪಿಕೊಳ್ಳುವ ಮೂಲಕ ಮರಣದಂಡನೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಅವರು ವಾದಿಸಿದರು.

“ಯಾವುದೇು ಉಗ್ರ, ಭಯೋತ್ಪಾದನಾ ಚಟುವಟಿಕೆ ನಡೆಸಿ ನ್ಯಾಯಾಲಯದೆದುರು ತಪ್ಪೊಪ್ಪಿಕೊಂಡರೆ ಆಗ ನ್ಯಾಯಾಲಯಗಳು ಜೀವಾವಧಿ ಶಿಕ್ಷೆ ನೀಡಲಾಗುವುದು ಎಂದುಬಿಡುವ ವ್ಯಾಪಕ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಎಲ್ಲರೂ ನ್ಯಾಯಾಲಯಕ್ಕೆ ಬಂದು ತಪ್ಪೊಪ್ಪಿಕೊಳ್ಳುವ ಮೂಲಕ ವಿಚಾರಣೆಯಿಂದ ನುಣುಚಿಕೊಳ್ಳುತ್ತಾರೆ. ಏಕೆಂದರೆ ಅವರು ವಿಚಾರಣೆ ಎದುರಿಸಿದರೆ ನೇಣೇ ಗತಿಯಾಗಿಬಿಡುತ್ತದೆ” ಎಂದು ಎಸ್‌ಜಿ ವಾದಿಸಿದರು.

ಒಂದು ವೇಳೆ ಒಸಾಮಾ ಬಿನ್‌ ಲಾಡೆನ್‌ನನ್ನು ಈ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿದ್ದರೆ ಪ್ರಸ್ತುತ ಪ್ರಕರಣದಲ್ಲಿ ಮಲಿಕ್‌ ಮಾಡಿದಂತೆಯೇ ಆತ ಕೂಡ ತಪ್ಪೊಪ್ಪಿಕೊಂಡುಬಿಡುತ್ತಿದ್ದ” ಎಂದು ಮೆಹ್ತಾ ಹೇಳಿದರು.

ಆದರೆ ಮಲಿಕ್‌ಗೂ ಲಾಡೆನ್‌ಗೂ ವ್ಯತ್ಯಾಸ ಇದೆ ಎಂದ ನ್ಯಾಯಾಲಯ ಮಲಿಕ್‌ಗೆ ನೋಟಿಸ್‌ ಜಾರಿಗೊಳಿಸಿ ಪ್ರಕರಣವನ್ನು ಆಗಸ್ಟ್‌ಗೆ ಮುಂದೂಡಿತು.

Kannada Bar & Bench
kannada.barandbench.com