
ರಾಷ್ಟ್ರೀಯ ಹೆದ್ದಾರಿ 544ರಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಮತ್ತು ಸಂಚಾರ ದಟ್ಟಣೆ ಅಧಿಕವಾಗಿರುವುದರಿಂದ ನಾಲ್ಕು ವಾರಗಳ ಕಾಲ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಿಸದಂತೆ ಕೇರಳ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನಿತರರು ಮತ್ತು ಒ ಜೆ ಜಗದೀಶ್ ಮತ್ತಿತರರ ನಡುವಣ ಪ್ರಕರಣ].
ಎನ್‌ಎಚ್‌ಎಐ ಅಧಿಕಾರಿಗಳು ತಾನು ಹೆದ್ದಾರಿ ಸ್ಥಿತಿ ಸುಧಾರಿಸುವ ಸಂಬಂಧ ನೀಡಿದ್ದ ನಿರ್ದೇಶನಗಳನ್ನು ಎನ್‌ಎಚ್‌ಎಐ ಅಧಿಕಾರಿಗಳು ಪಾಲಿಸದೇ ಇದ್ದುದರಿಂದಾಗಿ ಕೇರಳ ಹೈಕೋರ್ಟ್ ಇಂತಹ ಆದೇಶ ನೀಡುವಂತಾಯಿತು ಎಂದು ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಕಟುವಾಗಿ ಹೇಳಿತು.
ಅಲ್ಲದೆ ಸಂಚಾರ ಸುಗಮವಾಗುವ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವಂತೆ ಹೈಕೋರ್ಟ್‌ಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತು.
ಈಗಾಗಲೇ ವಾಹನ ತೆರಿಗೆ ಪಾವತಿಸಿದ ಪ್ರಯಾಣಿಕರಿಗೆ ಹದಗೆಟ್ಟ ರಸ್ತೆಗಳಲ್ಲಿ ಟೋಲ್ ಕೂಡ ಪಾವತಿಸುವಂತೆ ಒತ್ತಾಯಿಸಬಾರದು ಎಂದು ಅದು ಹೇಳಿತು.
ಪ್ರಜಾಪ್ರಭುತ್ವದಲ್ಲಿ, ರಸ್ತೆ ಬಳಸಲು ಮೋಟಾರು ವಾಹನ ತೆರಿಗೆ ಪಾವತಿಸುತ್ತಿದ್ದರೂ, ನಿರ್ಮಿಸು, ಕಾರ್ಯಾಚರಿಸು ಹಾಗೂ ವರ್ಗಾಯಿಸು ( ಬಿಲ್ಡ್ ಆಪರೇಟ್ ಮತ್ತು ಟ್ರಾನ್ಸ್‌ಫರ್ - ಬಿಒಟಿ) ಎಂಬ ಒಪ್ಪಂದದ ಮೇಲೆ ಬಳಕೆದಾರರಿಂದ ಶುಲ್ಕ ಸಂಗ್ರಹಕ್ಕಾಗಿ ರಸ್ತೆ ನಿರ್ಮಿಸಲಾಗುತ್ತದೆ ಇದು ಮುಕ್ತ ಮಾರುಕಟ್ಟೆಗೆ ಸಂಬಂಧಿಸಿದ ನೋವಿನ ಸಂಗತಿ ಎಂದು ನ್ಯಾಯಾಲಯ ಹೇಳಿತು.
ಈಗಾಗಲೇ ವಾಹನ ತೆರಿಗೆ ಪಾವತಿಸಿರುವ ನಾಗರಿಕರು ಗುಂಡಿ ಗಟಾರಗಳಿರುವ ರಸ್ತೆಗಳಲ್ಲಿ ಹಣ ಪಾವತಿಸದೆ ಸಂಚರಿಸಲು ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯ ಮಾರ್ಮಿಕವಾಗಿ ನುಡಿಯಿತು.
ಕೇರಳ ಹೈಕೋರ್ಟ್ ನೀಡಿದ್ದ ತೀರ್ಪು 2015 ರ ಮುಂಚಿನ ತೀರ್ಪುಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿತು.
ಎನ್ಎಚ್ಎಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಗುತ್ತಿಗೆದಾರರನ್ನು ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಪ್ರತಿನಿಧಿಸಿದ್ದರು. ಮೂಲ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಜಯಂತ್ ಮುತ್ತುರಾಜ್ ವಾದ ಮಂಡಿಸಿದರು.
ರಾಷ್ಟ್ರೀಯ ಹೆದ್ದಾರಿ 544ರ ಕಾಮಗಾರಿ ಅಪೂರ್ಣವಾಗಿದ್ದರೂ, ಜೊತೆಗೆ ಅಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದರೂ ಕೇರಳದ ತ್ರಿಶೂರ್ ಜಿಲ್ಲೆಯ ಪಲಿಯೆಕ್ಕರ ಟೋಲ್ ಪ್ಲಾಜಾದಲ್ಲಿ ಪ್ರಯಾಣಿಕರಿಂದ ಟೋಲ್ ಸಂಗ್ರಹಿಸುತ್ತಿರುವುದು ಏಕೆ ಎಂದು ಕಳೆದ ವಿಚಾರಣೆ ವೇಳೆ ಎನ್‌ಎಚ್‌ಎಐಗೆ ಸುಪ್ರೀಂ ಕೋರ್ಟ್ ಹೇಳಿತ್ತು.
ಫೆಬ್ರವರಿಯಲ್ಲಿಯೇ ಪರಿಹಾರ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದ್ದರೂ ಎನ್‌ಎಚ್‌ಎಐ ಕ್ರಮ ಕೈಗೊಂಡಿಲ್ಲ ಎಂದಿದ್ದ ಸರ್ವೋಚ್ಚ ನ್ಯಾಯಾಲಯ ಅಧಿಕಾರಿಗಳು ಗುತ್ತಿಗೆದಾರರು ತಮ್ಮೊಳಗೆ ವ್ಯಾಜ್ಯ ನಡೆಸುವ ಬದಲು ಸಾರ್ವಜನಿಕರ ತೊಂದರೆ ಪರಿಹರಿಸುವತ್ತ ಗಮನ ಹರಿಸಬೇಕು ಎಂಬುದಾಗಿ ಕಿವಿಮಾತು ಹೇಳಿತ್ತು.
[ಆದೇಶದ ಪ್ರತಿ]