

ಅಸ್ಪಷ್ಟ ನೋಟಿಸ್ ನೀಡಿ ರಾಜಸ್ಥಾನದ ಅಜ್ಮೀರ್ ಷರೀಫ್ ದರ್ಗಾಕ್ಕೆ ಸಂಬಂಧಿಸಿದ ಕಟ್ಟಡಗಳ ನೆಲಸಮ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾಗುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.
ಅಜ್ಮೀರ್ ದರ್ಗಾವು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿ ಸ್ಥಳವಾಗಿದ್ದು ದೇಶ ವಿದೇಶಗಳಿಂದ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ದರ್ಗಾ ಸಂಬಂಧಿಸಿದ ಕಟ್ಟಡಗಳ ಪ್ರಸ್ತಾವಿತ ನೆಲಸಮ ಪ್ರಕ್ರಿಯೆಗೂ ಮುನ್ನ ಸಂಬಂಧಪಟ್ಟವರಿಗೆ ನೋಟಿಸ್ ನೀಡಬೇಕು. ಸ್ವಾಭಾವಿಕ ನ್ಯಾಯದ ತತ್ವಗಳನ್ನು ಪಾಲಿಸಬೇಕು ಎಂದು ನ್ಯಾಯಮೂರ್ತಿ ಸಚಿನ್ ದತ್ತ ಹೇಳಿದರು.
ಸರ್ಕಾರ ಬುಲ್ಡೋಜರ್‌ನೊಂದಿಗೆ ತೆರಳಿ ಏಕಾಏಕಿ ನೆಲಸಮ ಮಾಡುವಂತಿಲ್ಲ. ಸರ್ಕಾರದ ನೋಟಿಸ್ ಅಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿತು.
ನವೆಂಬರ್ 22 ರಂದು ಹೊರಡಿಸಲಾದ ಆದೇಶವನ್ನು ಹಿಂಪಡೆಯಲು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ನಜೀಮ್ ದರ್ಗಾ ಸಮಿತಿಯ ಕಚೇರಿಗೆ ನಿರ್ದೇಶನ ನೀಡುವಂತೆ ಕೋರಿ ದರ್ಗಾದ ಆನುವಂಶಿಕ ಪಾಲಕರಾದ ಸೈಯದ್ ಮಹರಾಜ್ ಮಿಯಾ ಅವರು ಅರ್ಜಿ ಸಲ್ಲಿಸಿದ್ದರು.
ನ್ಯಾಯಯುತ ವಿಚಾರಣೆ ನಡೆಸದೆಯೇ ದರ್ಗಾ ಆವರಣದ ಒಳಗೆ ಮತ್ತು ಹೊರಗೆ ಇರುವ ಹಲವಾರು ಶಾಶ್ವತ ಮತ್ತು ತಾತ್ಕಾಲಿಕ ಕಟ್ಟಡಗಳನ್ನು, ದರ್ಗಾದ ಪಾಲಕರು ಇರುವ ಸ್ಥಳವನ್ನು ಕೆಡವಲು ಸರ್ಕಾರ ಆದೇಶಿಸಿದೆ ಎಂದು ದೂರಲಾಗಿತ್ತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಶಾದಾನ್ ಫರಾಸತ್ ಮತ್ತು ವಕೀಲ ಛಯಾನ್ ಸರ್ಕಾರ್ ವಾದ ಮಂಡಿಸಿದರು. ಕೆಡವಲು ಹೊರಟಿರುವ ಕಟ್ಟಡಗಳು ಅತಿಕ್ರಮಣ ಮಾಡಿ ನಿರ್ಮಿಸಿದವುಗಳಲ್ಲ ಎಂದರು.
ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ಅಮಿತ್ ತಿವಾರಿ ವಾದ ಮಂಡಿಸಿ, ಅರ್ಜಿದಾರರು ಅಕ್ರಮವಾಗಿ ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ವಾದಿಸಿದರು.
ಈ ಮಧ್ಯೆ ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಅಜ್ಮೀರ್ ಷರೀಫ್ ದರ್ಗಾ ಸಮಿತಿ ರಚಿಸುವಂತೆ ನವೆಂಬರ್ 6 ರಂದೇ ತಾನು ನಿರ್ದೇಶನ ನೀಡಿದ್ದರೂ ಈವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯ ಗಮನಿಸಿತು.
ಸಮಿತಿ ರಚನೆ ತಡೆಹಿಡಿಯುವಂತಿಲ್ಲ. ಸರ್ಕಾರ ಸಮಿತಿ ರಚಿಸಬೇಕು. ಮೂರು ತಿಂಗಳೊಳಗೆ ಸಮಿತಿ ರಚಿಸಬೇಕು ಎಂದು ಹೇಳಿದ್ದೇವೆ ಎಂದ ಮಾತ್ರಕ್ಕೆ ತೊಂಬತ್ತನೇ ದಿನ ಸಮಿತಿ ರಚಿಸಿ ಎಂದರ್ಥವಲ್ಲ ಎಂಬುದಾಗಿ ಕಿಡಿಕಾರಿತು. ಆ ಮೂಲಕ, ದರ್ಗಾ ಸಮಿತಿ ರಚಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರಕ್ಕೆ ಸೂಚಿಸಿದ ಅದು ಆವರಣದಲ್ಲಿರುವ ಕಟ್ಟಡ ತೆರವುಗೊಳಿಸುವ ಮುನ್ನ ಶೋಕಾಸ್ ನೋಟಿಸ್ ಜಾರಿ ಮಾಡುವಂತೆಯೂ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಫೆಬ್ರವರಿ 23, 2026 ರಂದು ನಡೆಯಲಿದೆ.