

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಡಿ (ಪೋಕ್ಸೊ) ಹೂಡಿದ್ದ ಪ್ರಕರಣ ರದ್ದುಗೊಳಿಸಲು ಕೋರಿ ಆರೋಪಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ನಿರಾಕರಿಸಿರುವ ದೆಹಲಿ ಹೈಕೋರ್ಟ್ ಅಪ್ರಾಪ್ತರ ವಿವಾಹಗಳಿಗೆ ನ್ಯಾಯಾಂಗ ಅನುಮೋದನೆ ನೀಡಲಾಗದು ಎಂದಿದೆ [ಪ್ರಿನ್ಸ್ ಕುಮಾರ್ ಶರ್ಮಾ ಮತ್ತಿತರರು ಹಾಗೂ ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಲೈಂಗಿಕ ಸಂಭೋಗ ಸಾಬೀತಾದರೆ ಪೋಕ್ಸೊ ಕಾಯಿದೆಯಡಿ ಅಪರಾಧ ಅಖೈರಾಗುತ್ತದೆ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಅಭಿಪ್ರಾಯಪಟ್ಟರು.
ಅಪ್ರಾಪ್ತ ವಯಸ್ಕರು ನೀಡುವ ಲೈಂಗಿಕ ಸಮ್ಮತಿಯನ್ನು ಮಾನ್ಯಗೊಳಿಸಲು ಶಾಸಕಾಂಗ ನಿರಾಕರಿಸಿರುವಾಗ ಈ ನ್ಯಾಯಾಲಯ ಸಂವಿಧಾನದ 226ನೇ ವಿಧಿಯಡಿ ನ್ಯಾಯಾಧೀಶರೇ ಸಮಾನತೆಯ ಹೆಸರಿನಲ್ಲಿ ಸಮ್ಮತಿಯ ಲೈಂಗಿಕ ಸಂಬಂಧಗಳಲ್ಲಿ ತೊಡಗಿದ್ದ ಪ್ರೌಢಾವಸ್ಥೆ ಹೊಸ್ತಿಲಿನಲ್ಲಿರುವವರ ಸಂಬಂಧಗಳಿಗೆ ವಿನಾಯಿತಿ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದಲ್ಲಿ ಪತ್ನಿಯ ಕೌಟುಂಬಿಕ ಹಿಂಸಾಚಾರದ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಘಟನೆ ನಡೆದಾಗ ಆರೋಪಿಯ ಪತ್ನಿ ಅಪ್ರಾಪ್ತೆ ಹಾಗೂ ಗರ್ಭಿಣಿಯಾಗಿದ್ದಳು. ಮಗುವಿಗೆ ಜನ್ಮ ನೀಡಿದ ಬಳಿಕ ದೂರು ಹಿಂಪಡೆದಿದ್ದಳು. ನಮ್ಮ ಕುಟುಂಬ ಈಗ ಒಂದಾಗಿದೆ ಎಂದಿದ್ದರು.
ಆದರೆ ಜೋಡಿ ನಂತರ ಅನ್ಯೋನ್ಯವಾಗಿದ್ದರೂ ಅದನ್ನು ಆಧರಿಸಿ ಪೋಕ್ಸೊ ಕಾಯಿದೆಯಡಿ ಈ ಹಿಂದೆ ನಡೆದಿದ್ದ ಅಪರಾಧವನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗದು. ಕೌಟುಂಬಿಕ ಒತ್ತಡದ ಕಾರಣಕ್ಕೆ ತಾವು ಅನ್ಯೋನ್ಯವಾಗಿ ಇರುವುದಾಗಿ ಪತ್ನಿ ಹೇಳಿಕೆ ನೀಡಿರಬಹುದು ಎಂಬುದಾಗಿ ಪೀಠ ಹೇಳಿದೆ.
ಹೀಗಾಗಿ ಪತಿಯ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಅದು ಇಂತಹ ಪ್ರಕರಣಗಳನ್ನು ರದ್ದುಪಡಿಸಲು ಆರಂಭಿಸಿದರೆ, ಅಪ್ರಾಪ್ತರ ಮದುವೆ ಅಥವಾ ಕಿರಿಯ ವಯಸ್ಸಿನಲ್ಲೇ ನಡೆಯುವ ಶಾರೀರಿಕ ಸಂಬಂಧವನ್ನು ನಂತರ ಮದುವೆ ಅಥವಾ ಸಹಜೀವನದ ಮೂಲಕ “ಮಾನ್ಯ ಮಾಡಬಹುದು ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ" ಎಂದಿದೆ.
ಬಾಧಿತೆ ತನ್ನ ಕುಟುಂಬವನ್ನು ರಕ್ಷಿಸಬೇಕೆಂಬ ಇಚ್ಛೆಯನ್ನು ಈ ನ್ಯಾಯಾಲಯ ನಿರ್ಲಕ್ಷಿಸುವುದಿಲ್ಲ. ವಾಸ್ತವವಾಗಿ ಪರಿಸ್ಥಿತಿಗಳು ನ್ಯಾಯಾಲಯದ ಸಹಾನುಭೂತಿ ಎಡೆ ಮಾಡಿಕೊಡುತ್ತವೆ. ಆದರೆ ನ್ಯಾಯಾಲಯ ಕಾನೂನು ಪಾಲಿಸಬೇಕಿದ್ದು ಯುಕ್ತಾಯುಕ್ತತೆಯ ಆಕರ್ಷಣೆ ಬಲವಾಗಿದ್ದರೂ ಕಾನೂನಿನ ಆಕರ್ಷಣೆ ಅದಕ್ಕಿಂತಲೂ ಹೆಚ್ಚು ಬಲವಾಗಿರುವ ಕಠಿಣ ಪ್ರಕರಣಗಳ ಸಾಲಿನಲ್ಲಿ ಈ ಪ್ರಕರಣವಿದೆ.ಬಾಧಿತೆ ಸಂಬಂಧವನ್ನು ಸಹಮತದಿಂದ ನಡೆದಿದ್ದು ಎಂದು ಹೇಳುತ್ತಿದ್ದಾಳೆ ಎಂಬ ಕಾರಣಕ್ಕೆ ನ್ಯಾಯದಾನ ಮಾಡುವ ಹೆಸರಿನಲ್ಲಿ ಕಾನೂನು ವಿನಾಯಿತಿ ನೀಡಲಾಗದು ಎಂದಿತು.