
ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿರುವ ಕರ್ನಾಟಕ ಹೈಕೋರ್ಟ್, ಪುರುಷರ ಕ್ಲಬ್‌ಗಳಾಗಿರುವ ಹಳೆಯ ವಕೀಲರ ಸಂಘಗಳು ಮಹಿಳೆಯರಿಗೆ ಅವಕಾಶ ಮಾಡಿಕೊಡಬೇಕು. ಅವುಗಳನ್ನು ದೀರ್ಘಾವಧಿಗೆ ಬಾಯ್ಸ್ ಕ್ಲಬ್ ಆಗಿರಲು ಬಿಡಲಾಗದು ಎಂದು ಶುಕ್ರವಾರ ಮಾರ್ಮಿಕವಾಗಿ ನುಡಿದಿದೆ.
ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಆದೇಶಿಸಬೇಕು ಎಂದು ಕೋರಿ ಕೆ ಮೋಹನ್‌ಕುಮಾರಿ ಸೇರಿ ಎಂಟು ಮಹಿಳೆಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ತುಮಕೂರು ವಕೀಲರ ಸಂಘವೇ ಮೀಸಲಾತಿ ಕಲ್ಪಿಸಿದ್ದರೆ ಇದು ಸಮಸ್ಯೆಯಾಗುತ್ತಿರಲಿಲ್ಲ. ಈಗ ಮೀಸಲಾತಿ ಜಾರಿ ಮಾಡಲಿಲ್ಲ ಎಂದರೆ ಯಾವಾಗ ಮಾಡ್ತೀರಿ? ಬೈಲಾಗೆ ತಿದ್ದುಪಡಿ ಮಾಡಬೇಕು. ದೀರ್ಘಾವಧಿವರೆಗೆ ಈ ಸಂಸ್ಥೆಗಳನ್ನು ಬಾಯ್ಸ್ ಕ್ಲಬ್ ಆಗಿರಲು ಬಿಡಲಾಗದು. ಇದುವರೆಗೆ ಬೇಡಿಕೆ ಇಲ್ಲದಿದ್ದರಿಂದ ಬದಲಾವಣೆಯಾಗಿರಲಿಲ್ಲ. ಬೇಡಿಕೆ ಇಡದೇ ಆಡಳಿತಗಾರರು ಯಾವುದನ್ನೂ ಬಿಟ್ಟುಕೊಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಳೆಯ ಪುರುಷರ ಕ್ಲಬ್ ಮಹಿಳೆಯರಿಗೆ ಅವಕಾಶ ಮಾಡಿಕೊಡಬೇಕು. ಮಹಿಳೆಯರು ಸಮಾನರಾಗಿದ್ದು, ಕಾನೂನಿನ ಅನ್ವಯವೂ ಸಮಾನರಾಗಿರಬೇಕು” ಎಂದು ಪ್ರತಿಪಾದಿಸಿತು.
ಮುಂದುವರಿದು, “ತುಮಕೂರು ಜಿಲ್ಲಾ ವಕೀಲರ ಸಂಘಕ್ಕೆ ಏಪ್ರಿಲ್ 5ರಂದು ನಿಗದಿಯಾಗಿದ್ದ ಚುನಾವಣೆಗೆ ತಡೆ ವಿಧಿಸಲಾಗಿದೆ. ವಕೀಲರ ಸಂಘಗಳು ಪ್ರಗತಿಪರವಾಗಿರಬೇಕೆ ವಿನಾ ಪ್ರತಿಗಾಮಿಯಾಗಿರಬಾರದು. ಮಾತಿಗಿಂತ ಕ್ರಿಯೆ ಮಾತನಾಡಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು ಎಂದು ಬಲವಾಗಿ ನಂಬುತ್ತೇನೆ. ಪಂಚಾಯತ್ ರಾಜ್‌ನಲ್ಲಿ ಮಹಿಳಾ ಮೀಸಲಾತಿಗಾಗಿ ಸಾಕಷ್ಟು ಹೋರಾಟ ಮಾಡಲಾಗಿತ್ತು. ಈಗ ಹಲವು ಮಹಿಳೆಯರು ಸದಸ್ಯರಾಗಿದ್ದಾರೆ. ಅವರು ಕೆಲಸ ಮಾಡುತ್ತಿಲ್ಲವೇ? ಆರಂಭಿಕ ಸಮಸ್ಯೆಗಳು ಇರುತ್ತವೆ. ಅವುಗಳನ್ನು ಮೆಟ್ಟಿನಿಲ್ಲಬೇಕು. ಮೊದಲ ಬಾರಿಗೆ ಬರುತ್ತಿರುವುದರಿಂದ ಸಮಸ್ಯೆಗಳು ಇರುವುದು ಸಹಜ. ಪ್ರಗತಿಯ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಮಹಿಳಾ ವಕೀಲರ ಹಕ್ಕಿಗೆ ಸಂಬಂಧಿಸಿದ ಬೀಜವನ್ನು ಕಳೆದ ಚುನಾವಣೆಯಲ್ಲಿ ಇಲ್ಲಿ ಬಿತ್ತಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ದಾರಿ ತೋರಿದೆ. ಈ ಸಂಬಂಧ ಆದೇಶ ಮಾಡಲಾಗುವುದು. ನೀವು ದಾರಿ ಮಾಡಲೇಬೇಕೆಂದರೆ ಮಾಡಬಹುದು. ಮಹಿಳೆಯರಿಗೆ ಮನೆಯಲ್ಲಿ ಹಣಕಾಸಿನ ಚುಕ್ಕಾಣಿ ನೀಡುವುದರಿಂದ ಹೇಗೆ ಮನೆ ನಿಯಂತ್ರಣದಲ್ಲಿರುತ್ತದೋ ಹಾಗೆ ಮಹಿಳೆಯರ ಕೈಗೆ ಸಂಘದ ಚುಕ್ಕಾಣಿ ನೀಡಿದರೆ ಆಗ ಉದ್ಧಾರವಾಗುತ್ತದೆ. ಮಹಿಳೆಯರಿಗೆ ಕೊಟ್ಟು ನೋಡಿ, ಎಲ್ಲವೂ ಸರಿಯಾಗಿರುತ್ತದೆ. ಅವರಿಗೆ ಅಧಿಕಾರ ನೀಡಿ, ಮನೆ ನಡೆಸಿದಂತೆ ಅವರು ನಡೆಸುತ್ತಾರೆ. ಮಾತಿನಿಂದ ಏನೂ ನಡೆಯುವುದಿಲ್ಲ. ವಾಸ್ತವ ಬೇರೆಯದೇ ಇದೆ. ಸೋಮವಾರ ಆದೇಶ ಮಾಡಲಾಗುವುದು” ಎಂದಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ವಿದ್ಯಾಶ್ರೀ ಮತ್ತು ಪ್ರತೀಕ್ ಚಂದ್ರಮೌಳಿ ಅವರು “ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೆಂಗಳೂರು ವಕೀಲರ ಸಂಘವು ಈಚೆಗೆ ನಡೆದ ಚುನಾವಣೆಯಲ್ಲಿ ಶೇ.33 ಮೀಸಲಾತಿ ಜಾರಿಗೊಳಿಸಿದೆ. ತುಮಕೂರು ಜಿಲ್ಲಾ ವಕೀಲರ ಸಂಘಕ್ಕೂ ಇದನ್ನೇ ಅನ್ವಯಿಸಬೇಕು. ಬೈಲಾ ತಿದ್ದುಪಡಿಯಾಗಿಲ್ಲ, ಮುಂದೆ ಮೀಸಲಾತಿ ಕಲ್ಪಿಸಲಾಗುವುದು ಎಂದರೆ ಎರಡು ವರ್ಷ ಕಾಯಬೇಕಾಗುತ್ತದೆ. 5.3.2025ರಂದು ತುಮಕೂರು ಜಿಲ್ಲಾ ವಕೀಲರ ಸಂಘಕ್ಕೆ ಮನವಿ ನೀಡಿದ್ದು, ಬೈಲಾಗೆ ತಿದ್ದುಪಡಿ ತರಲು ಅವರಿಗೆ ಸಾಕಷ್ಟು ಕಾಲಾವಕಾಶವಿತ್ತು. ಬೈಲಾದಲ್ಲೇ ಸಂಘದ ಸದಸ್ಯರನ್ನು ಸಶಕ್ತಗೊಳಿಸಬೇಕು ಎಂದು ಹೇಳಲಾಗಿದೆ. ವಾಸ್ತವದಲ್ಲಿ ನಿಲುವು ಬೇರೆಯದೇ ಇದೆ” ಎಂದು ಆಕ್ಷೇಪಿಸಿದರು.
ತುಮಕೂರು ಜಿಲ್ಲಾ ವಕೀಲರ ಸಂಘ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ವಕೀಲ ಎಚ್ ವಿ ಪ್ರವೀಣ್‌ಗೌಡ ಮತ್ತಿತರರು “ಬೈಲಾದಲ್ಲಿ ತಿದ್ದುಪಡಿಯಾಗಿಲ್ಲ. ಹೊಸ ಆಡಳಿತ ಮಂಡಳಿ ರಚನೆಯಾಗಿ ಬೈಲಾಗೆ ತಿದ್ದುಪಡಿಯಾದ ಬಳಿಕ ಅನುಮತಿಸಲಾಗುವುದು. ಆರು ತಿಂಗಳು ಅಥವಾ ವರ್ಷದ ಹಿಂದೆ ಆಗಿದ್ದರೆ ಮಾಡಬಹುದಿತ್ತು” ಎಂದು ಆಕ್ಷೇಪಿಸಿದರು. ಇದನ್ನು ನ್ಯಾಯಾಲಯವು ಒಪ್ಪಲಿಲ್ಲ.