ಚುನಾವಣೆಗೂ ಮುನ್ನ ಸಾರ್ವಜನಿಕ ಹಣ ಬಳಸಿಕೊಂಡು ಉಚಿತ ಕೊಡುಗೆಗಳ ಆಶ್ವಾಸನೆ ನೀಡುವ/ವಿತರಿಸುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆ ವಾಪಸ್ ಪಡೆದು ಅವುಗಳ ನೋಂದಣಿ ರದ್ದುಗೊಳಿಸಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರ, ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಕೋರಿದ್ದರು. ಅರ್ಜಿದಾರರು ಎತ್ತಿರುವ ವಿಷಯವು ಗಂಭೀರ ಪ್ರಶ್ನೆ ಹುಟ್ಟು ಹಾಕುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಇದೊಂದು ಗಂಭೀರ ಸಮಸ್ಯೆಯಾಗಿದ್ದು ಉಚಿತ ಕೊಡುಗೆಗಳ ಬಜೆಟ್ ಎಂಬದು ಸಾಮಾನ್ಯ ಬಜೆಟ್ ಅನ್ನೂ ಮೀರಿಸುವಂತಿದೆ. ಇದು ಭ್ರಷ್ಟಾಚಾರವಲ್ಲದಿದ್ದರೂ ಅಸಮಾನ ವೇದಿಕೆ ಸೃಷ್ಟಿಸುತ್ತದೆ” ಸಿಜೆಐ ಟೀಕಿಸಿದರು. ಆದರೆ ಅರ್ಜಿದಾರರು ಕೇವಲ ಕಾಂಗ್ರೆಸ್, ಶಿರೋಮಣಿ ಅಕಾಲಿದಳ ಹಾಗೂ ಎಎಪಿ ಪಕ್ಷಗಳನ್ನು ಮಾತ್ರ ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಬಗ್ಗೆಯೂ ನ್ಯಾಯಾಲಯ ಗಮನ ಹರಿಸಿತು. ನೀವು ಅಫಿಡವಿಟ್‌ನಲ್ಲಿ ಇಬ್ಬರ ಹೆಸರನ್ನು ಮಾತ್ರ ಉಲ್ಲೇಖಿಸಿದ್ದೀರಿ ಎಂದು ಸಿಜೆಐ ಆಕ್ಷೇಪಿಸಿದರೆ ನ್ಯಾ. ಕೊಹ್ಲಿ ಅವರು “ನೀವು ನಿಮಗೆ ಬೇಕಾದಂತೆ ಆಯ್ಕೆ ಮಾಡಿಕೊಂಡಿದ್ದೀರಿ” ಎಂದರು.
ಇಷ್ಟಾದರೂ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಕಾನೂನು ಸಮಸ್ಯೆಯನ್ನು ಪರಿಗಣಿಸಿ ನ್ಯಾಯಾಲಯವು ನೋಟಿಸ್ ನೀಡಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, “ಪ್ರತಿ ವ್ಯಕ್ತಿ ತಲಾ ₹ 3 ಲಕ್ಷ ಸಾಲದ ಹೊರೆ ಹೊತ್ತಿರುವ ರಾಜ್ಯಗಳಿದ್ದು ಈಗಲೂ ಪುಕ್ಕಟೆ ಕೊಡುಗೆಗಳನ್ನು ನೀಡಲಾಗುತ್ತಿದೆ. ಚುನಾವಣಾ ಆಯೋಗ ಹಲ್ಲುಗಳಿಲ್ಲದ ಕಾನೂನು ರೂಪಿಸಿದೆ. ಪ್ರತಿ ಪಕ್ಷವೂ ಇದನ್ನು ಮಾಡುತ್ತಿದೆ. (ಉದಾಹರಣೆಗೆ) ಪಂಜಾಬನ್ನೇ ನೋಡಿ” ಎಂದು ಹೇಳಿದರು. ಆಗ ಸಿಜೆಐ "ನೀವು ಒಂದು ರಾಜ್ಯವನ್ನು ಏಕೆ ಹೆಸರಿಸುತ್ತಿದ್ದೀರಿ" ಎಂದು ಕೇಳಿದರು. ಇಷ್ಟಾದರೂ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ನಾಲ್ಕು ವಾರಗಳ ಬಳಿಕ ವಿಚಾರಣೆ ನಡೆಸಲು ಪ್ರಕರಣವನ್ನು ಪಟ್ಟಿ ಮಾಡಿತು.