ಬಸವರಾಜನ್ ದಂಪತಿ ವಿರುದ್ಧದ ಪ್ರಕರಣ ರದ್ದು; ಮಹಿಳಾ ತನಿಖಾಧಿಕಾರಿ ನೇಮಕ ಕೋರಿದ್ದ ಬಸವಪ್ರಭು ಸ್ವಾಮೀಜಿ ಅರ್ಜಿ ವಜಾ

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ವಿಚಾರಣಾಧೀನ ನ್ಯಾಯಾಲಯದ ಮುಂದಿನ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಬಸವರಾಜನ್‌ ದಂಪತಿ ಕೋರಿದ್ದರು. ತನಿಖೆಯ ಹೊಣೆಯನ್ನು ಹಿರಿಯ ಮಹಿಳಾ ಅಧಿಕಾರಿಗೆ ವಹಿಸುವಂತೆ ಸ್ವಾಮೀಜಿ ಕೋರಿದ್ದರು.
Soubhagya, S K Basavarajan and Murugha Mutt, Chitradurga
Soubhagya, S K Basavarajan and Murugha Mutt, Chitradurga

ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012) ಪ್ರಕರಣಕ್ಕೆ ಪ್ರತಿಯಾಗಿ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ವಿರುದ್ಧ ಪಿತೂರಿ ಹಾಗೂ ಸಂಚು ಹೆಣೆದ ಆರೋಪದಡಿ ದಾಖಲಾಗಿದ್ದ ದೂರನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರದ್ದುಗೊಳಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ವಿಚಾರಣಾಧೀನ ನ್ಯಾಯಾಲಯದ ಮುಂದಿನ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಬಸವರಾಜನ್‌ ಮತ್ತು ಸೌಭಾಗ್ಯ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅಲ್ಲದೇ, ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ಬಸವರಾಜನ್‌ ದಂಪತಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ಹೊಣೆಯನ್ನು ಹಿರಿಯ ಮಹಿಳಾ ಅಧಿಕಾರಿಗೆ ವಹಿಸುವಂತೆ ಕೋರಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷ ಅವರು ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಶರಣರ ವಿರುದ್ಧ ಹೊರಿಸಲಾಗಿರುವ ಬಾಲಕಿಯರ ಮೇಲಿನ ಅತ್ಯಾಚಾರದ ಆಪಾದನೆಗಳಿಗೆ ರಕ್ಷಣೆ ಪಡೆಯಲು ಇಂತಹ ಪ್ರತಿ ದೂರು ದಾಖಲಿಸಲಾಗಿದೆ ಎಂಬ ವಾದವನ್ನು ಪೀಠ ಮಾನ್ಯ ಮಾಡಿದೆ.

ಪ್ರಕರಣದ ಹಿನ್ನೆಲೆ: ಪೋಕ್ಸೊ ಪ್ರಕರಣದಲ್ಲಿ ಶರಣರ ಬಂಧನವಾದ ನಂತರ, ಸುಳ್ಳು ಕೇಸು ದಾಖಲಿಸಲು ಸಂತ್ರಸ್ತ ಬಾಲಕಿಗೆ ಅಥಣಿ ತಾಲ್ಲೂಕಿನ ಜುಂಜರವಾಡ ಗ್ರಾಮದ ನಿವಾಸಿಯಾದ ಮಠದ ಶಾಲಾ ಶಿಕ್ಷಕ ಬಸವರಾಜೇಂದ್ರ ಮತ್ತು ಗಾಯತ್ರಿ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಆಡಿಯೊ ವೈರಲ್ ಆಗಿತ್ತು. ಈ ಸಂಬಂಧ ಬಸವರಾಜೇಂದ್ರ ಅವರನ್ನು ಪೊಲೀಸರು ನವೆಂಬರ್ 10ರಂದು ಬಂಧಿಸಿದ್ದರು. 

Also Read
ಬಸವರಾಜನ್‌ ದಂಪತಿ ವಿರುದ್ಧದ ಪ್ರಕರಣದ ತನಿಖಾ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಇದೇ ಪ್ರಕರಣದಲ್ಲಿ ಶರಣರ ವಿರುದ್ಧ ಪಿತೂರಿ ನಡೆಸಿ ಸಂಚು ರೂಪಿಸಿದ ಆರೋಪದಡಿ ಮಾಜಿ ಶಾಸಕರೂ ಆದ ಬಸವರಾಜನ್ ಮತ್ತು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನೂ ಪೊಲೀಸರು ಬಂಧಿಸಿದ್ದರು. ನಂತರ ಇಬ್ಬರೂ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. 

Also Read
ಬಸವರಾಜನ್‌ ದಂಪತಿ ವಿರುದ್ಧ ಪ್ರಕರಣ: 'ಪೋಕ್ಸೊ ಪ್ರಕರಣದ ವಿಚಾರಣೆ ದಿಕ್ಕು ತಪ್ಪುವುದಿಲ್ಲವೇ?' ಹೈಕೋರ್ಟ್‌ ಪ್ರಶ್ನೆ

ದಂಪತಿ ವಿರುದ್ಧ 2022ರ ನವೆಂಬರ್ 9ರಂದು ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 120ಬಿ (ಅಪರಾಧ ಎಸಗಲು ಕ್ರಿಮಿನಲ್ ಪಿತೂರಿ), 384 (ಸುಲಿಗೆ), 420 (ವಂಚನೆಯ ಅಪರಾಧ), 366 ಎ (ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಶದಲ್ಲಿ ಇರಿಸಿಕೊಳ್ಳುವುದು) ಅಡಿಯಲ್ಲಿ ದೂರು ದಾಖಲಿಸಿದ್ದರು.

Related Stories

No stories found.
Kannada Bar & Bench
kannada.barandbench.com