ಡಿಕೆಶಿ ವಿರುದ್ಧದ ಪ್ರಕರಣ: ಸಿಬಿಐ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ವಿಭಾಗೀಯ ಪೀಠ ತಡೆ

ಏಕಸದಸ್ಯ ಪೀಠವು 2023ರ ಏಪ್ರಿಲ್‌ 20ರಂದು ವಜಾ ಮಾಡಿರುವ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿದೆ.
D K Shivakumar, CBI and Karnataka HC
D K Shivakumar, CBI and Karnataka HC

ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಅನುಮತಿಸಿದ್ದ ಆದೇಶ ವಜಾ ಮಾಡಲು ನಿರಾಕರಿಸಿದ್ದ ಕರ್ನಾಟಕ ಏಕಸದಸ್ಯ ಪೀಠದ ಆದೇಶಕ್ಕೆ ಮುಂದಿನ ವಿಚಾರಣೆಯವರೆಗೆ ವಿಭಾಗೀಯ ಪೀಠ ತಡೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸೋಮವಾರ ನಡೆಸಿತು.

ಏಕಸದಸ್ಯ ಪೀಠವು 2023ರ ಏಪ್ರಿಲ್‌ 20ರಂದು ವಜಾ ಮಾಡಿರುವ ಆದೇಶಕ್ಕೆ ಮುಂದಿನ ವಿಚಾರಣೆ ತಡೆ ನೀಡಲಾಗಿದೆ ಎಂದು ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿದೆ.

ಶಿವಕುಮಾರ್‌ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಶಿವಕುಮಾರ್‌ ಅವರ ಸಂಬಂಧಿ ಹಾಗೂ ಎಚ್‌ಎಎಲ್‌ ಉದ್ಯೋಗಿಯಾಗಿರುವ ಶಶಿಕುಮಾರ್‌ ಅವರು ಸಿಬಿಐ ತನಿಖೆಗೆ ಅನುಮತಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಮತ್ತೊಂದು ಪೀಠ ವಜಾ ಮಾಡಿರುವುದು ಈ ಪ್ರಕರಣದ ಮೇಲೆ ಪರಿಣಾಮ ಉಂಟು ಮಾಡುವುದಿಲ್ಲ. ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆ 1946ರ ಅಡಿ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿಸಿರುವುದು ಆಡಳಿತಾತ್ಮಕ ಆದೇಶವೇ ವಿನಾ ಇದನ್ನು ವ್ಯಾಪಕವಾಗಿ ಮರುರೂಪಿಸುವ ಅವಶ್ಯತೆ ಇಲ್ಲ. ಶಶಿಕುಮಾರ್ ಆರೋಪಿಯಾದರೆ ಈ ಪ್ರಕರಣವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಇರುತ್ತದೆ ಎಂದು ಪೀಠ ಹೇಳಿದೆ” ಎಂದು ವಾದಿಸಿದ್ದರು.

ಡಿ ಕೆ ಶಿವಕುಮಾರ್‌ ಅವರ ವಿರುದ್ಧ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ ಅನುಮತಿಸಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು 2019ರ ಸೆಪ್ಟೆಂಬರ್‌ 25ರಂದು ಅನುಮತಿಸಿತ್ತು. ರಾಜ್ಯ ಗೃಹ ಇಲಾಖೆಯ ಆದೇಶವನ್ನು ವಜಾ ಮಾಡಬೇಕು ಎಂದು ಕೋರಿ ಡಿ ಕೆ ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು 2023ರ ಏಪ್ರಿಲ್‌ 20ರಂದು ನ್ಯಾ. ಆರ್‌ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿತ್ತು. ಈಗ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠದಲ್ಲಿ ಡಿ ಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಡಿ ಕೆ ಶಿವಕುಮಾರ್‌ ಅವರು ಗಣಿಗಾರಿಕೆ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮ ಸೇರಿದಂತೆ ಹಲವು ತೊಡಗಿಕೊಂಡಿದ್ದು, ಅವರಿಗೆ ದೆಹಲಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ 2017ರ ಆಗಸ್ಟ್‌ 2ರಂದು ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಈ ವೇಳೆ 8.59 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಡಿ ಕೆ ಶಿವಕುಮಾರ್‌ ಅವರಿಗೆ ಸೇರಿದ ಸ್ಥಳದಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದರ ಬೆನ್ನಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಇದರ ಬಳಿಕ ಜಾರಿ ನಿರ್ದೇಶನಾಲಯ ಪ್ರಕರಣ ಶಿವಕುಮಾರ್‌ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು. ಇದನ್ನು ಆಧರಿಸಿ 2019ರ ಸೆಪ್ಟೆಂಬರ್‌ 3ರಂದು ಶಿವಕುಮಾರ್‌ ಅವರನ್ನು ಬಂಧಿಸಲಾಗಿತ್ತು. ಆನಂತರ 2019ರ ಸೆಪ್ಟೆಂಬರ್‌ 9ರಂದು ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರವು ಅನುಮತಿಸಿತ್ತು.

ಜಾರಿ ನಿರ್ದೇಶನಾಲಯದ ಪತ್ರದಲ್ಲಿನ ಅಂಶಗಳನ್ನು ಉಲ್ಲೇಖಿಸಿ, ವಿವೇಚನೆ ಬಳಸದೇ ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ಅನುಮತಿಸಿದೆ. ಇದನ್ನು ಆಧರಿಸಿ ಸಿಬಿಐ, ಡಿ ಕೆ ಶಿವಕುಮಾರ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಇದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ಡಿ ಕೆ ಶಿವಕುಮಾರ್‌ ಪರ ಹಿರಿಯ ವಕೀಲ ಉದಯ್‌ ಹೊಳ್ಳ ವಾದಿಸಿದ್ದರು. ಇದನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ತಿರಸ್ಕರಿಸಿತ್ತು.

ಮತ್ತೊಂದೆಡೆ ಸಿಬಿಐ ತನಿಖೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದ್ದು, ಈ ಪ್ರಕರಣವು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. 2013ರ ಏಪ್ರಿಲ್‌ 1ರಿಂದ 2018ರ ಏಪ್ರಿಲ್‌ 30ರ ಅವಧಿಯಲ್ಲಿ ಶಿವಕುಮಾರ್‌ ಮತ್ತು ಅವರ ಕುಟುಂಬ ಸದಸ್ಯರ ಬಳಿ 74.8 ಕೋಟಿ ಅಕ್ರಮ ಆಸ್ತಿ ಇದ್ದು, ಇದಕ್ಕೆ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಲು ಅವರು ವಿಫಲರಾಗಿದ್ದಾರೆ ಎಂಬುದು ಸಿಬಿಐ ವಾದವಾಗಿದೆ.

Related Stories

No stories found.
Kannada Bar & Bench
kannada.barandbench.com