RSS Leader Kalladka Prabhakar Bhat and Karnataka HC
RSS Leader Kalladka Prabhakar Bhat and Karnataka HC

ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್‌ ವಿರುದ್ಧದ ಪ್ರಕರಣಕ್ಕೆ ತಡೆ

ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3)ರ ಅಡಿ ನೋಟಿಸ್‌ ನೀಡಿ, ಆರೋಪಿಯನ್ನು ಆಲಿಸದ ಹೊರತು ಬಂಧಿಸುವಂತಿಲ್ಲ ಎಂದು ತೆಲಂಗಾಣ ಹೈಕೋರ್ಟ್‌ ರೂಪಿಸಿರುವ ಮಾರ್ಗಸೂಚಿಗಳನ್ನು ಈಚೆಗೆ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ ಎಂದಿರುವ ಹೈಕೋರ್ಟ್‌.
Published on

ಕೋಮು ದ್ವೇಷದ ಮಾತುಗಳನ್ನಾಡಿದ ಸಂಬಂಧ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರವಾದ ವಿಡಿಯೋ ಆಧರಿಸಿ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಪ್ರಭಾಕರ್‌ ಭಟ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಾದ ಆಲಿಸಿದ ಪೀಠವು “ಪ್ರಭಾಕರ್‌ ಭಟ್‌ ಭಾಷಣ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಸಂಬಂಧಿತ ಪ್ರಕರಣದಲ್ಲಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ನೋಟಿಸ್‌ ನೀಡಿ, ಆರೋಪಿಯನ್ನು ಆಲಿಸದ ಹೊರತು ಬಂಧಿಸುವಂತಿಲ್ಲ ಎಂದು ತೆಲಂಗಾಣ ಹೈಕೋರ್ಟ್‌ ರೂಪಿಸಿರುವ ಮಾರ್ಗಸೂಚಿಗಳನ್ನು ಈಚೆಗೆ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಹಾಲಿ ಪ್ರಕರಣದಲ್ಲಿ ಈ ಪ್ರಕ್ರಿಯೆ ಪಾಲಿಸಲಾಗಿಲ್ಲ. ಸತ್ಯೇಂದರ್‌ ಕುಮಾರ್‌ ಆಂಟಿಲ್‌ ಪ್ರಕರಣದ ತೀರ್ಪು ಆಧರಿಸಿ, ಪ್ರಭಾಕರ್‌ ಭಟ್‌ ವಿರುದ್ಧದ ಎಲ್ಲಾ ತನಿಖೆ ಮತ್ತು ಪ್ರಕ್ರಿಯೆಗೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಭಾಕರ್‌ ಭಟ್‌ ವಿರುದ್ಧದ ದೂರಿನಲ್ಲಿ, ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿದ್ದ ಪ್ರಭಾಕರ್‌ ಭಟ್‌ ಅವರು ಮುಸ್ಲಿಮ್‌, ಕ್ರಿಶ್ಚಿಯನ್‌ ಸಮುದಾಯಗಳ ವಿರುದ್ಧ ದ್ವೇಷ ಹರಡುವಂತ ಭಾಷಣ ಮಾಡಿದ್ದಾರೆ. ಮೊದಲಿಗೆ ಮೊಘಲರು ಆನಂತರ ಕ್ರಿಶ್ಚಿಯನ್ನರು ದಾಳಿ ನಡೆಸಿದ್ದಾರೆ. ಪ್ರತ್ಯೇಕ ಪಾಕಿಸ್ತಾನ ನೀಡದೇ ಇದ್ದರೆ ಹಿಂದೂಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿದ್ದರು. ದೇವಸ್ಥಾನ ಒಡೆದು, ಗೋವು ಕತ್ತರಿಸಿ, ತಾಯಂದಿರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಲಕ್ಷಾಂತರ ಹಿಂದೂಗಳ ಹತ್ಯೆ ಮಾಡಿದ್ದಾರೆ. ಆವತ್ತಿನ ಚಿತ್ರ ಮತ್ತೆ ಇಂದೂ ಕಾಣುತ್ತಿದೆ ಎಂದು 12.01.2026ರಂದು ಭಾಷಣ ಮಾಡಿದ್ದರು. ಈ ಭಾಷಣವನ್ನು ವಿಕಸನ ಟಿವಿಯು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿತ್ತು ಎಂದು ಆರೋಪಿಸಲಾಗಿತ್ತು.

ಇದನ್ನು ಆಧರಿಸಿ ಕಲ್ಲಡ್ಕ ಪ್ರಭಾಕರ್‌ ಭಟ್‌, ವಿಕಸನ ಯೂಟ್ಯೂಬ್‌ ಮತ್ತು ಕಾರ್ಯಕ್ರಮದ ಸಂಘಟಕರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 196,299,302,353(2) ಜೊತೆಗೆ 3(5) ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com