ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಹಲ್ಲೆ ಸಮರ್ಥಿಸಿದ್ದ ಪ್ರಮೋದ್ ಮಧ್ವರಾಜ್ ವಿರುದ್ಧದ ಪ್ರಕರಣದ ರದ್ದು

'ನಮ್ಮ ಮನೆಗೆ ಕಳ್ಳರು ಬಂದಾಗ, ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಏನು ಮಾಡುತ್ತೇವೆ? ಕಳ್ಳರನ್ನು ಕಟ್ಟಿ ಹಾಕಲೇಬೇಕು.‌ ಕಳ್ಳಿಗೆ ಮಚ್ಚು-ಖಡ್ಗದಲ್ಲಿ ಹೊಡೆದೆವಾ? ಕೆನ್ನೆಗೆ ಎರಡು ಬಾರಿಸಲಾಗಿದೆ ಅಷ್ಟೇ' ಎಂದಿದ್ದ ಮಧ್ವರಾಜ್.‌
ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಹಲ್ಲೆ ಸಮರ್ಥಿಸಿದ್ದ ಪ್ರಮೋದ್ ಮಧ್ವರಾಜ್ ವಿರುದ್ಧದ ಪ್ರಕರಣದ ರದ್ದು
Published on

ಮಲ್ಪೆ‌ ಬಂದರಿನಲ್ಲಿ ಕಳ್ಳತನ ಮಾಡಿ‌ ಸಿಕ್ಕಿಬಿದ್ದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣವನ್ನು ಸಮರ್ಥಿಸಿ ಮಾತನಾಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.

ಪ್ರಕರಣ ರದ್ದತಿ ಕೋರಿ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನು ಕೆಲವರು 2025ರ ಮಾರ್ಚ್ 18ರಂದು ಮರಕ್ಕೆ ಕಟ್ಟಿ ಹಾಕಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಪ್ರಕರಣವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಬಗೆಹರಿಸಲು ಮಲ್ಪೆ ಮೀನುಗಾರರ ಸಂಘ ಹಾಗೂ ಇತರರು 2025ರ ಮಾರ್ಚ್ 22ರಂದು ಮಲ್ಪೆಯ ಬಂದರಿನಲ್ಲಿ ಸಭೆ‌‌ ಹಮ್ಮಿಕೊಂಡಿದ್ದರು.

ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಮೋದ್ ಮಧ್ಯರಾಜ್ 'ನಮ್ಮ ಮನೆಗೆ ಕಳ್ಳರು ಬಂದಾಗ, ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಏನು ಮಾಡುತ್ತೇವೆ? ಕಳ್ಳರನ್ನು ಕಟ್ಟಿ ಹಾಕಲೇಬೇಕು.‌ ಕಳ್ಳಿಗೆ ಮಚ್ಚು-ಖಡ್ಗದಲ್ಲಿ ಹೊಡೆದೆವಾ? ಕೆನ್ನೆಗೆ ಎರಡು ಬಾರಿಸಲಾಗಿದೆ ಅಷ್ಟೇ' ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಮೋದ್ ಮಧ್ವರಾಜ್ ವಿರುದ್ಧ ದ್ವೇಷ ಭಾವನೆ ಮೂಡಿಸುವ ಹಾಗೂ ದೊಂಬಿ ಸೃಷ್ಟಿಸಲು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 191(1) ಮತ್ತು 192 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

Kannada Bar & Bench
kannada.barandbench.com