

“ಪಾಕಿಸ್ತಾನ್ ಜಿಂದಾಬಾದ್” ಎಂದವರ ವಿರುದ್ದದ ಪ್ರಕರಣವನ್ನೇ ವಜಾ ಮಾಡಲಾಗಿದೆ ಎಂದಿರುವ ಕರ್ನಾಟಕ ಹೈಕೋರ್ಟ್, ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಕೋಮು ದ್ವೇಷ ಪ್ರಕರಣಕ್ಕೆ ಮಂಗಳವಾರ ತಡೆ ನೀಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಬೆಳಗಿನ ಜಾವದ ಬದಲು ಮಧ್ಯಾಹ್ನ ನಿಗದಪಡಿಸಿದ್ದಕ್ಕೆ ʼನಮಾಜ್‌ಗೆ ಸಮಯʼ ಎಂದು ಟ್ವೀಟ್ ಮಾಡಿದ ಆರೋಪದ ಸಂಬಂಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಕಾನೂನು ಪ್ರಕ್ರಿಯೆ ರದ್ದತಿ ಕೋರಿ ಮಿಥುನ್ ಚಕ್ರವರ್ತಿ ದೇವಿದಾಸ್ ಸೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ರಜಾಕಾಲೀನ ಪೀಠ ನಡೆಸಿತು.
“ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಎಲ್ಲಾ ಪರೀಕ್ಷೆಗಳು ಬೆಳಿಗಿನ ಜಾವ ನಿಗದಿ ಮಾಡಲಾಗಿದೆ. ಶುಕ್ರವಾರ ಏಕೆ? ಓಹ್.. ನಮಾಜ್‌ಗೆ ಸಮಯʼ ಎಂದು ಟ್ವೀಟ್ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಕೋಮು ದ್ವೇಷ ಏನಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು “ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದ್ದು, ಪ್ರತಿವಾದಿ ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸಲು ಮತ್ತು ಮಧ್ಯಂತರ ತಡೆ ತೆರವು ಕೋರುವ ಸ್ವಾತಂತ್ರ್ಯ ಹೊಂದಿದ್ದಾರೆ” ಎಂದು ಆದೇಶಿಸಿತು.
ಇದಕ್ಕೂ ಮುನ್ನ, ಸೂಲಿಬೆಲೆ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಐಪಿಸಿ ಸೆಕ್ಷನ್ 505 ಅಡಿ ಆರೋಪ ಮಾಡಲಾಗಿದೆ. ಆದರೆ, ಸೂಕ್ತ (ಮ್ಯಾಜಿಸ್ಟ್ರೇಟ್) ಅನುಮತಿ ಪಡೆದಿರುವ ದಾಖಲೆ ಸಲ್ಲಿಸಲಾಗಿಲ್ಲ. ಸಂಜ್ಞೇ ತೆಗೆದುಕೊಂಡಿರುವ ಆದೇಶ ಊರ್ಜಿತವಾಗಲ್ಲ” ಎಂದರು.
ಆಗ ಪೀಠವು “ಪ್ರತಿಬಾರಿಯೂ ಸರ್ಕಾರ ಇದನ್ನೇ ಮಾಡುತ್ತಲ್ಲ. ಯಾರು ಹೇಳಿದರು ಅವರೊಬ್ಬ ಕಾನೂನು ಉಲ್ಲಂಘನೆಯ ಚಾಳಿ ಹೊಂದಿರುವಾತ ಎಂದು? ಎಷ್ಟು ಪ್ರಕರಣದಲ್ಲಿ ಸೂಲಿಬೆಲೆ ದೋಷಿ ಎಂದು ತೀರ್ಮಾನವಾಗಿದೆ?” ಎಂದಿತು.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕಿ ಅಸ್ಮಾ ಕೌಸರ್ ಅವರು “ಸೂಲಿಬೆಲೆ ಪದೇಪದೇ ಕಾನೂನು ಉಲ್ಲಂಘಿಸುವ ಚಾಳಿ ಹೊಂದಿದ್ದು ಅವರ ವಿರುದ್ದ ಸದ್ಯ ಮೂರು ಪ್ರಕರಣ ಬಾಕಿ ಇವೆ. 2024ರ ಫೆಬ್ರವರಿ 8ರಲ್ಲಿ ಪ್ರಕರಣ ದಾಖಲಾಗಿದ್ದು, ಈಗ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಾಲಿ ಪ್ರಕರಣವು ಮೊದಲ ಬಾರಿಗೆ ವಿಚಾರಣೆಗೆ ನಿಗದಿಯಾಗಿದ್ದು, ಸೂಚನೆ ಪಡೆಯಲು ಕಾಲಾವಕಾಶ ನೀಡಬೇಕು” ಎಂದರು.
ಬಳಿಕ ನ್ಯಾಯಮೂರ್ತಿ ಶ್ರೀಶಾನಂದ ಅವರು “ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೂ ಜಾಮೀನು ನೀಡಿದ್ದು, ಆನಂತರ ಪ್ರಕರಣವನ್ನೂ ರದ್ದುಪಡಿಸಿದ್ದೇನೆ. ಅದು ನಮ್ಮ ದೇಶದ ವಿರುದ್ಧ ಕೋಮು ದ್ವೇಷವಾಗುತ್ತದೆ. ಹಾಲಿ ಪ್ರಕರಣದಲ್ಲಿ ಅದು ನಮಾಜ್ ಸಮಯ ಎಂದು ಸೂಲಿಬೆಲೆ ಹೇಳಿದ್ದಾರೆ. ಅವರು (ಮುಸ್ಲಿಮರು) ನಮಾಜ್ ಮಾಡುವುದಕ್ಕೆ ಖುಷಿಯಾಗಬೇಕು. ನೀವು ಮಾಡುತ್ತೀರಾ (ಕೌಸರ್ ಕುರಿತು)? ಯಾವ ಶುಕ್ರವಾರ ಆಗುತ್ತದೋ ಆ ದಿನ ಮಾಡಿ, ಇಲ್ಲವಾದರೆ ಇಲ್ಲ. ಆ ಜನಗಳ ಧಾರ್ಮಿಕ ಭಾವನೆಗೆ ಇರುವ ಶ್ರದ್ಧೆ ಅದು. ಒಮ್ಮೆ ಮೆಕ್ಕಾ-ಮದೀನಾಗೆ ಹೋಗಿ ಮರಳಿದರೆ ಹಜ್ ಯಾತ್ರೆ ಪೂರೈಸಿದರು ಎಂದರ್ಥ. ಕಡ್ಡಾಯವಾಗಿ ಐದು ನಮಾಜ್ ಮಾಡಬೇಕಿದ್ದು, ಅಂಥ ಸ್ನೇಹಿತರು ನನಗೆ ಇದ್ದಾರೆ. ಪ್ರತಿಯೊಂದು ಧರ್ಮದಲ್ಲಿರೋದನ್ನು ತಿಳಿದುಕೊಳ್ಳಬೇಕು. ತಿಳಿಯದೇ ಮಾತನಾಡುವುದು ಕಷ್ಟವಾಗುತ್ತದೆ. ಎಲ್ಲಾ ಪರೀಕ್ಷೆಗಳನ್ನು ಬೆಳಿಗ್ಗೆ ಇಟ್ಟು, ಒಂದನ್ನು ಮಾತ್ರ ಮಧ್ಯಾಹ್ನ ಇಟ್ಟಿದ್ದೀರಿ ಏಕೆ ಎಂಬ ಪ್ರಶ್ನೆ ಸೂಲಿಬೆಲೆಗೆ ಬಂದಿದೆ. ಆ ಕುರಿತು ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಹಬ್ಬ ಆಗಿರುವುದಕ್ಕೆ ರಜೆ ಕೊಟ್ಟಿದ್ದಾರೆ ಎಂದು ಹೇಳಿದರೆ ಅದು ಕೋಮು ದ್ವೇಷವಾಗುತ್ತದೆಯೇ?” ಎಂದು ಪ್ರಶ್ನಿಸಿದರು.
ಮುಂದುವರಿದು, “ನಮ್ಮ ದೇಶದಲ್ಲಿ ರಾಮನವಮಿ, ಕೃಷ್ಣಾಷ್ಟಮಿಗೆ ರಜೆ ಇಲ್ಲ. ಹೆಣ್ಣು ಮಕ್ಕಳು ಒದ್ದಾಡುತ್ತಾರೆ ಎಂದು ಗೌರಿ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಹೈಕೋರ್ಟ್‌ನಲ್ಲಿ ರಜೆ ಮಾಡಿದ್ದೇವೆ. ಹೈಕೋರ್ಟ್‌ನಲ್ಲಿ ಪುರುಷರಿಗಿಂತ ಮಹಿಳಾ ಉದ್ಯೋಗಿಗಳು ಜಾಸ್ತಿ ಇರುವುದರಿಂದ ಹಾಗೆ ಮಾಡಲಾಗಿದೆ. ಇದರ ಬದಲು ಇನ್ನೊಂದು ದಿನ ಕೆಲಸ ಮಾಡಲಾಗುತ್ತದೆ. ಗೌರಿ ಹಬ್ಬ, ವರ ಮಹಾಲಕ್ಷ್ಮಿಗೆ ರಜೆ ಕೊಟ್ಟಿದ್ದಾರೆ, ಈ ನ್ಯಾಯಮೂರ್ತಿಗಳು ಹಿಂದೂ ಪರ ಎಂದು ನಾಳೆ ಯಾರೋ ಟ್ವೀಟ್ ಮಾಡಿದರೆ ಅವರ ಮೇಲೆ ಕೇಸ್ ಹಾಕಲಾಗುತ್ತದೆಯೇ? ವೇಳಾಪಟ್ಟಿಗೆ ಸಂಬಂಧಿಸಿದಂತೆ ಅವರು ತಮ್ಮ ಭಾವನೆ ವ್ಯಕ್ತಪಡಿಸಿರುವುದು ಕ್ರಿಮಿನಲ್ ಅಪರಾಧವಾಗುತ್ತದೆಯೇ? ಯಾವ ವಿಚಾರ? ಏನು ಭಾವನೆ ಎಂಬುದನ್ನು ನೋಡಬೇಕಲ್ಲಾ? ದಿನ ಬೆಳಗಾದರೆ ಅಂಥ ಹತ್ತು ಟ್ವೀಟ್ ಬರುತ್ತದೆಯಲ್ಲವೇ? ಎಲ್ಲದಕ್ಕೂ ಕೇಸ್ ಹಾಕಿದ್ದೀರಾ, ಇವನೊಬ್ಬನ ಮೇಲೆ ಕೇಸ್ ಹಾಕಿದ್ದೀರಾ? ಸಾವಿರಾರು ಟ್ವೀಟ್‌ಗಳು ಪಹಲ್ಗಾಮ್ ದಾಳಿ ಬೆಂಬಲಿಸಿದ್ದವು, ಏನು ಮಾಡಿದಿರಿ? ಏನು ಕ್ರಮ ಕೈಗೊಂಡಿದ್ದೀರಿ?” ಎಂದು ಪ್ರಶ್ನಿಸಿದರು.