

ಪತಿ, ಪತ್ನಿ ಸೇರಿದಂತೆ ಇತರೆ ಕುಟುಂಬಸ್ಥರ ನಡುವಿನ ಕೌಟುಂಬಿಕ ಕಲಹದ ಆರೋಪ ಸಂಬಂಧ ಐಪಿಸಿ ಸೆಕ್ಷನ್ 498ಎ (ಪತಿ ಮತ್ತವರ ಕುಟುಂಬಸ್ಥರಿಂದ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ) ಅಡಿಯಲ್ಲಿ ನೆರೆಹೊರೆಯವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ವರದಕ್ಷಿಣೆ ಕುರುಕುಳ ನೀಡಲು ಪತಿ ಮತ್ತವರ ಮನೆಯವರಿಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಪತಿ ಮನೆಯ ನೆರೆ ಹೊರೆಯವರಾಗಿದ್ದ ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಹಾಲಕ್ಷ್ಮಿಪುರದ ಭೋವಿಪಾಳ್ಯದ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ನಡೆಸಿತು.
ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಪತಿ, ಪತ್ನಿ ಸೇರಿದಂತೆ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಬಹುದು. ಇದರ ಅಡಿ ಇತರರನ್ನು ಸೆಳೆಯುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಆರೋಪದ ಅಂಶ ಉಲ್ಲೇಖವಾಗಿಲ್ಲ. ಪತ್ನಿಯನ್ನು ಹಿಂಸಿಸುವಂತೆ ಪತಿಗೆ ಪ್ರಚೋದನೆ ನೀಡಿರುವುದಕ್ಕೆ ಸಂಬಂಧಿಸಿದಂತೆ ವಾದಿಸಲಾಗಿದೆ. ಆದರೆ, ಸೆಕ್ಷನ್ 498ಎ ಅಡಿಯಲ್ಲಿ ಕುಟುಂಬದ ವ್ಯಾಖ್ಯಾನದಲ್ಲಿ ನೆರೆಹೊರೆಯವರನ್ನು ಸೇರ್ಪಡೆ ಮಾಡಲು ಅವಕಾಶವಿಲ್ಲ ಎಂದು ಹೇಳಿದೆ.
ಪತಿಯ ಕುಟುಂಬದ ನೆರೆಹೊರೆಯವರು ಪತಿಯ ಸಂಬಂಧಿಕರಲ್ಲ ಮತ್ತು ಐಪಿಸಿ ಸೆಕ್ಷನ್ 498ಎ ಅಡಿಯ ಅಪರಾಧಕ್ಕೆ ನೆರೆಹೊರೆಯವರನ್ನು ಸಿಲುಕಿಸುವುದಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಹೇಳಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದ್ದು, ನ್ಯಾಯದ ಉಲ್ಲಂಘನೆಗೆ ಕಾರಣವಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲ ಕೆ ಚಂದನ್ ಅವರು “ಅರ್ಜಿದಾರೆ ವಿರುದ್ಧ ದೂರು ದಾಖಲಿಸುವ ಸಂದರ್ಭದಲ್ಲಿ ದೂರುದಾರರ ವೈವಾಹಿಕ ಸಂಬಂಧ ಹದಗೆಟ್ಟಂತಿದೆ. ಆದರೆ, ಅವರ ನೆರೆಹೊರೆಯವರಾಗಿರುವ ಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದರೆ, ದೂರುದಾರರ ಕೌಟುಂಬಿಕ ವ್ಯವಹಾರಗಳಿಗೂ ತಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ” ಎಂದಿದ್ದರು.
ದೂರುದಾರರೆ ಪತ್ನಿಯ ಪರ ಸರ್ಕಾರದ ವಕೀಲ ಕೆ ನಾಗೇಶ್ವರಪ್ಪ ಅವರು “ಅರ್ಜಿದಾರರು ತಮ್ಮ ಪತಿಗೆ ಕುಮ್ಮಕ್ಕು ನೀಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಚಾರಣಾ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಿ ದೋಷಮುಕ್ತರಾಗಿ ಹೊರಬರಬೇಕಾಗಿದ್ದು ಅರ್ಜಿಯನ್ನು ವಜಾಗೊಳಿಸಬೇಕು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರದ ಮಹಾಲಕ್ಷ್ಮಿಪುರದ ಭೋವಿಪಾಳ್ಯದ ನಿವಾಸಿಯಾಗಿರುವ ದೂರುದಾರರು, ವರದಕ್ಷಿಣೆ ಕಿರುಕುಳ ಆರೋಪದಲ್ಲಿ ತನ್ನ ಪತಿ, ಅತ್ತೆ, ಮಾವ, ನಾದಿನಿ ಮತ್ತು ಪಕ್ಕದ ಮನೆಯ ಮಹಿಳೆ (ಅರ್ಜಿದಾರೆ) ವಿರುದ್ಧ ಮಹಾಲಕ್ಷ್ಮಿಪುರಂ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅರ್ಜಿದಾರೆಯು ಚಾಡಿ ಮಾತುಗಳನ್ನಾಡಿದ್ದಾರೆ ಎನ್ನಲಾಗಿತ್ತೇ ಹೊರತು ನಿರ್ದಿಷ್ಟ ಆರೋಪಗಳನ್ನು ಮಾಡಿರಲಿಲ್ಲ. ಹೀಗಾಗಿ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಅರ್ಜಿದಾರೆಯು ಹೈಕೋರ್ಟ್ ಮೆಟ್ಟಿಲೇರಿದ್ದರು.