[ನೋಟು ಅಮಾನ್ಯೀಕರಣ] ಪ್ರಕರಣ ಕೇವಲ ಅಕೆಡೆಮಿಕ್ ಕಸರತ್ತು ಮಾತ್ರವೇ ಅಗಲಿದೆಯೇ ಎಂದು ಮೊದಲು ನಿರ್ಧರಿಸಲಿರುವ ಸುಪ್ರೀಂ
ನೋಟು ಅಮಾನ್ಯೀಕರಣದ ಮೂಲಕ ಕೇಂದ್ರ ಸರ್ಕಾರವು ರೂ. 500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು 2016ರಲ್ಲಿ ಚಲಾವಣೆಯಿಂದ ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಪ್ರಕರಣದ ವಿಚಾರಣೆಯನ್ನು ನಡೆಸುವುದು ಕೇವಲ ಅಕೆಡೆಮಿಕ್ ಕಸರತ್ತು ಮಾತ್ರವೇ ಆಗಿ ಉಳಿಯಲಿದೆಯೇ, ಅಸಲಿಗೆ ಅದು ಆಲಿಸಲು ಅರ್ಹವೇ ಎನ್ನುವುದನ್ನು ಮೊದಲು ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಹೇಳಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾ. ಎಸ್ ಅಬ್ದುಲ್ ನಜೀರ್ ನೇತೃತ್ವದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯಂ ಮತ್ತು ಬಿ ವಿ ನಾಗರತ್ನ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು ಬುಧವಾರ ನಡೆಸಿತು.
ವಿಚಾರಣೆಯ ಅರಂಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, "ಈ ಪ್ರಕರಣದಲ್ಲಿ ಏನೂ ಉಳಿದಿಲ್ಲ. ಇದನ್ನು ಕೇವಲ ಅಕೆಡೆಮಿಕ್ ಕಸರತ್ತಾಗಿ ಮಾತ್ರವೇ ಆಲಿಸಬಹುದಾಗಿದೆ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಬಿ ಆರ್ ಗವಾಯಿ ಅವರು, "ಇಷ್ಟೊಂದು ಅಗಾಧ ಪ್ರಮಾಣದ ಪ್ರಕರಣಗಳು ಬಾಕಿ ಇರುವಾಗ ಐವರು ನ್ಯಾಯಮೂರ್ತಿಗಳ ಪೀಠವೊಂದು ಅಕೆಡೆಮಿಕ್ ಕಸರತ್ತಿನಲ್ಲಿ ತೊಡಗುವುದೇ..." ಎಂದರು. ಮುಂದುವರೆದ ಪೀಠವು "ಇದೊಂದು ಅಕೆಡೆಮಿಕ್ ಕಸರತ್ತು ಮಾತ್ರವೇ ಅಗಲಿದೆಯೇ, ಈ ಪ್ರಕರಣ ಆಲಿಸಲು ಸೂಕ್ತವೇ ಎನ್ನುವುದನ್ನು ನಾವು ಮೊದಲು ನಿರ್ಧರಿಸಲಿದ್ದೇವೆ," ಎಂದಿತು.
ನ್ಯಾಯಾಲಯದ ಮುಂದೆ ಇದಾಗಲೇ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಅಗಾಧವಾಗಿರುವಾಗ ಸಾಂವಿಧಾನಿಕ ಪೀಠವೊಂದು ತನ್ನ ಅಮೂಲ್ಯ ಸಮಯವನ್ನು ಅಕೆಡೆಮಿಕ್ ಕಸರತ್ತಾಗಿ ಮಾತ್ರವೇ ಉಳಿದಿರುವ ಪ್ರಕರಣಕ್ಕೆ ನೀಡುವುದು ಎಷ್ಟು ವಿವೇಚನಾಯುತ ಎಂದು ಕೇಳಿದ ಪೀಠವು ಅಕ್ಟೋಬರ್ 12ಕ್ಕೆ ವಿಚಾರಣೆಯನ್ನು ಮುಂದೂಡಿತು.