ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಆಯ್ಕೆಯನ್ನು ಪ್ರಶ್ನಿಸಿ ಸಮಾಜವಾದಿ ಪಕ್ಷದ ತಿರಸ್ಕೃತ ಅಭ್ಯರ್ಥಿ, ಗಡಿ ಭದ್ರತಾಪಡೆಯ ಮಾಜಿ ಯೋಧ ತೇಜ್ ಬಹದ್ದೂರ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ತೀರ್ಪು ನೀಡಲಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ), ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿರುವ ತ್ರಿಸದಸ್ಯ ಪೀಠ ಮಧ್ಯಾಹ್ನ 12 ಗಂಟೆಗೆ ತೀರ್ಪು ನೀಡಲಿದೆ.
ನವೆಂಬರ್ 18 ರಂದು ನಡೆದ ವಿಚಾರಣೆ ವೇಳೆ ಪ್ರಕರಣವನ್ನು ಮುಂದೂಡಲು ಅಥವಾರ ಬೇರೆ ಪೀಠಕ್ಕೆ ರವಾನಿಸಲು ಅರ್ಜಿದಾರರು ಪದೇ ಪದೇ ಮನವಿ ಮಾಡಿದ್ದರ ಹೊರತಾಗಿಯೂ ಸಿಜೆಐ ಬೊಬ್ಡೆ ಅವರು ನ. 24ಕ್ಕೆ ತೀರ್ಪು ನೀಡುವುದಾಗಿ ತಿಳಿಸಿದ್ದರು. ವಾರಾಣಸಿ ಕ್ಷೇತ್ರದಿಂದ ತಮ್ಮ ಸ್ಪರ್ಧೆಯನ್ನು ಅನೂರ್ಜಿತಗೊಳಿಸಿರುವುದನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಅರ್ಜಿ ಸಲ್ಲಿಸಿದ್ದರು. ಮೊದಲು ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದ ಅವರು ನಂತರ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದರು. ತಮ್ಮ ಸ್ಪರ್ಧೆಗೆ ಅವಕಾಶ ನೀಡದೇ ಇದ್ದುದರಿಂದ ಮೋದಿ ಸುಲಭವಾಗಿ ಜಯಗಳಿಸಿದರು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಕಳೆದ ಫೆಬ್ರವರಿ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹೋರಾಟಗಾರರಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ), ಶಸ್ತ್ರಾಸ್ತ್ರ ಕಾಯಿದೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯಿದೆಯ (ಪಿಡಿಪಿಪಿಎ) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್ ಮತ್ತು ಶರ್ಜೀಲ್ ಅವರು ನ್ಯಾಯಾಂಗ ಬಂಧನದಲ್ಲಿದ್ದರೆ, ಫೈಜಾನ್ ಖಾನ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ದೆಹಲಿ ಪೊಲೀಸರ ಪ್ರಕಾರ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಆಳ ಪಿತೂರಿಯ ಭಾಗವಾಗಿದ್ದು ಇದನ್ನು ಆರೋಪಿಗಳು ರೂಪಿಸಿದ್ದರು.
ವಿಚಾರಣಾ ನ್ಯಾಯಾಲಯ ವಿಚಾರಣೆಯೊಂದಿಗೆ ಮುಂದುವರೆಯಲು ಸಾಧ್ಯವಾಗದಿದ್ದರೆ, ಅದು ಆರೋಪಿಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತೆಯೇ ಅಥವಾ ಅಲ್ಲವೇ ಎಂಬುದನ್ನು ತಿಳಿಸುವಂತೆ ಅಲಾಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಕಾನೂನು ಇಲಾಖೆಯ ಮತ್ತು ವಿಚಾರಣಾ ನ್ಯಾಯಾಲಯವನ್ನು ಕೇಳಿದೆ. ಕೋವಿಡ್ -19 ಪರಿಸ್ಥಿತಿಯ ಕಾರಣದಿಂದ ವಿಚಾರಣಾ ನ್ಯಾಯಾಲಯವು ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಾಗದಿದ್ದಾಗ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡುವುದು ತಾರ್ಕಿಕವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚಾರಣಾ ನ್ಯಾಯಾಲಯದ ವಸ್ತುಸ್ಥಿತಿ ವರದಿಯನ್ನು ದಾಖಲೆಗೆ ಪರಿಗಣಿಸಿದ ನಂತರ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರಿದ್ದ ಏಕ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಲಾಗಿದೆ.
ಸುಪ್ರಿಂಕೋರ್ಟ್ ಆಡಳಿತಾಂಗದ (ಜನರಲ್ ಬ್ರಾಂಚ್) ಅಧಿಕಾರಿಯೊಬ್ಬರು ನ. 21 ರಂದು ಕೋವಿಡ್‌ಗೆ ಬಲಿಯಾಗಿದ್ದು ಈ ಮೂಲಕ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದ ನೌಕರರೊಬ್ಬರು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದಂತಾಗಿದೆ.
ಒಂದು ವಾರದ ಹಿಂದೆ ಉದ್ಯೋಗಿ ರಾಜೇಂದ್ರ ರಾವತ್ ಅವರಿಗೆ ಕೋವಿಡ್ ದೃಢಪಟ್ಟಿತ್ತು. ವರ್ಚುವಲ್ ಕಲಾಪಗಳಿಗೆ ಆಸ್ಪದವಿದ್ದರೂ ಸುಪ್ರೀಂಕೋರ್ಟ್ ಅಧಿಕಾರಿಗಳು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಿರಬೇಕಾಗುತ್ತದೆ. ಮೃತರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದು ಅವರಿಗೆ ಕೃಪಾಧನ (ಎಕ್ಸ್‌ಗ್ರೇಷಿಯಾ) ನೀಡುವ ಸಂಬಂಧ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ರೆಜಿಸ್ಟ್ರಿ ಮೂಲಗಳು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿವೆ.