ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ತುರ್ತು ವಿಲೇವಾರಿ: ಸರ್ಕಾರಿ ಅಭಿಯೋಜಕರ ನೇಮಕಾತಿ ವಿವರ ಬಯಸಿದ ಹೈಕೋರ್ಟ್

ಇತರೆ ರಾಜ್ಯಗಳ ಶಾಸಕರು/ಸಂಸದರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ವ್ಯಾಪ್ತಿಯ ಕುರಿತು ಏಕಸದಸ್ಯ ಪೀಠದ ನ್ಯಾಯಾಧೀಶರು ಪರಿಗಣಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿ ವಿವರಿಸಿದ್ದಾರೆ.
Karnataka High Court, MPs and MLAs
Karnataka High Court, MPs and MLAs

ವಿಶೇಷ ನ್ಯಾಯಾಲಯಗಳಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ನಡೆಸಲು ನೇಮಿಸಲಾಗಿರುವ ಸರ್ಕಾರಿ ಅಭಿಯೋಜಕರ ಮಾಹಿತಿಯನ್ನೊಳಗೊಂಡ ದಾಖಲೆಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣ ಸೂಕ್ಷ್ಮವಾಗಿದ್ದು, ಅವುಗಳನ್ನು ನಡೆಸಲು ನೇಮಿಸಲಾಗಿರುವ ಸರ್ಕಾರಿ ಅಭಿಯೋಜಕರನ್ನು ಆಯ್ಕೆ ಮಾಡುವ ಸಂಬಂಧ ಅನುಸರಿಸಲಾಗಿರುವ ನಿಯಮವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ಸಂಬಂಧ ಕಾರ್ಯ ವಿಧಾನ ರಚಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವುದನ್ನು ಆಧರಿಸಿ ಸ್ವಯಂಪ್ರೇರಿತ ಮನವಿ ದಾಖಲಿಸಿಕೊಳ್ಳುವಂತೆ ಹೈಕೋರ್ಟ್‌ ಈಚೆಗೆ ರಿಜಿಸ್ಟ್ರಿಗೆ ಸೂಚಿಸಿತ್ತು.

ರಾಜ್ಯ ಸರ್ಕಾರದ ಅಧಿಸೂಚನೆಯ ಮೂಲಕ ಸ್ಥಾಪಿಸಲಾದ ವಿಶೇಷ ನ್ಯಾಯಾಲಯವು ಸಂಸದರು ಮತ್ತು ಶಾಸಕರೇ ದೂರುದಾರರು/ಪ್ರಾಥಮಿಕ ಮಾಹಿತಿದಾರರಾಗಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವ್ಯಾಪ್ತಿ ಹೊಂದಿವೆಯೇ ಎಂಬುದರ ಕುರಿತು ಅಮಿಕಸ್‌ ಕ್ಯೂರಿ ಮತ್ತು ಹಿರಿಯ ವಕೀಲ ಆದಿತ್ಯ ಸೋಂಧಿ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರ ವಾದವನ್ನು ನ್ಯಾಯಾಲಯ ಆಲಿಸಿತು.

ಶಾಸಕರು/ ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಕುರಿತಾದ ನಿರ್ಧಾರವನ್ನು ಏಕಸದಸ್ಯ ಪೀಠವು ಅಕ್ಟೋಬರ್‌ 15ರಂದು ತೆಗೆದುಕೊಂಡಿದೆ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ಈ ವೇಳೆ ತರಲಾಯಿತು. ಚುನಾಯಿತ ಪ್ರತಿನಿಧಿಗಳು ಸಲ್ಲಿಸಿದ ದೂರುಗಳನ್ನು ಆಧರಿಸಿ ವಿಚಾರಣೆಗೆ ಆದೇಶಿಸಲಾಗಿರುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಏಕಸದಸ್ಯ ಪೀಠ ಆದೇಶಿಸಿದೆ ಎಂದು ವಿಭಾಗೀಯ ಪೀಠಕ್ಕೆ ವಿವರಿಸಲಾಯಿತು. ಇದು ನ್ಯಾಯಾಲಯದ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ಪ್ರಕರಣವಾಗಿರುವುದರಿಂದ ಆದೇಶದ ಕುರಿತು ಆಳಕ್ಕೆ ಹೋಗುವುದು ಸಮ್ಮತವಲ್ಲ ಎಂದು ಪೀಠ ಹೇಳಿತು.

Also Read
ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಪಿಐಎಲ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ

ಇತರೆ ರಾಜ್ಯಗಳ ಶಾಸಕರು/ಸಂಸದರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ವ್ಯಾಪ್ತಿಯನ್ನು ವಿಶೇಷ ನ್ಯಾಯಾಲಯ ಹೊಂದಿದೆಯೇ ಎಂಬ ವಿಚಾರವು ಮತ್ತೊಂದು ಏಕಸದಸ್ಯ ಪೀಠದ ಮುಂದೆ ತೀರ್ಪಿಗೆ ಬಾಕಿ ಇದೆ ಎಂದು ಸೋಂಧಿ ನ್ಯಾಯಾಲಯದ ಗಮನಸೆಳೆದರು. ಮೇಲಿನ ವಿಚಾರಗಳ ಕುರಿತು ಸುಪ್ರೀಂ ಕೋರ್ಟ್‌ ಅಮಿಕಸ್‌ ಕ್ಯೂರಿಗೆ (ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ) ತಿಳಿಸುವಂತೆ ಸೋಂಧಿ ಅವರಿಗೆ ಹೈಕೋರ್ಟ್‌ ಸೂಚಿಸಿದ್ದು, ಸುಪ್ರೀಂ ಕೋರ್ಟ್‌ ಆ ಬಗ್ಗೆ ಗಮನಹರಿಸಲಿದೆ ಎಂದು ಹೇಳಿದೆ.

ಇದೆಲ್ಲದರ ನಡುವೆ ಚುನಾಯಿತ ಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಪ್ರಕರಣ ವಿಚಾರಣೆ ನಡೆಸಲು ತುರ್ತಾಗಿ ಮತ್ತೊಂದು ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. ಇದರ ಜೊತೆಗೆ ಸಾಕ್ಷಿ ಸಂರಕ್ಷಣಾ ಯೋಜನೆ-2018 ಮತ್ತು ವಿಶೇಷ ನ್ಯಾಯಾಲಯಗಳಲ್ಲಿರುವ ಶಾಸಕ/ಸಂಸದರ ವಿರುದ್ಧ ಪ್ರಕರಣಗಳ ತುರ್ತು ವಿಲೇವಾರಿಯನ್ನು ನ್ಯಾಯಾಲಯ ಪರಿಗಣಿಸಿತು. ಡಿಸೆಂಬರ್‌ 1ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com