

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ಸಂಬಂಧಿತ ಪೀಠದ ಮುಂದೆ ಪಟ್ಟಿ ಮಾಡಲು ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ.
ಎಸ್‌ಸಿ/ಎಸ್‌ಟಿ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಏಕಪಕ್ಷೀಯ ಮಧ್ಯಂತರ ಆದೇಶ, ತನಿಖೆ ಅಥವಾ ವಿಚಾರಣೆಗೆ ತಡೆ ನೀಡಬಾರದು ಎಂದು ಹೈಕೋರ್ಟ್‌ನ ಎಲ್ಲಾ ಪೀಠಗಳಿಗೆ ನಿರ್ದೇಶನ ಅಥವಾ ಸುತ್ತೋಲೆ ಹೊರಡಿಸಬೇಕು ಎಂದು ಕೋರಿ ಬೆಂಗಳೂರಿನ ಸೋಮಶೇಖರ್ ರಾಜವಂಶಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಲೇವಾರಿ ಮಾಡಿದೆ.
ವಾದ ಆಲಿಸಿದ ಪೀಠವು “ಅರ್ಜಿದಾರರು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ಕಾಯಿದೆ ಅಡಿ ಆರಂಭಿಸಿರುವ ಪ್ರಕ್ರಿಯೆಯನ್ನು ಹೈಕೋರ್ಟ್‌ನ ಹಲವು ಪೀಠಗಳು ತಡೆದಿವೆ. ಕಾಯಿದೆಯ ಕಡ್ಡಾಯ ನಿಬಂಧನೆಗೆ ವಿರುದ್ಧವಾಗಿ ತಡೆ ನೀಡಲಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ. ಆದರೆ, ಈ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಬಾರದಿತ್ತು ಎಂದು ಬ್ಲಾಂಕೆಟ್ ಆದೇಶ ಮಾಡಲಾಗದು. ಸಂಬಂಧಿತ ಆದೇಶವನ್ನು ನಿರ್ದಿಷ್ಟ ಪೀಠವೇ ಪರಿಗಣಿಸಬೇಕಿದೆ. ದೋಷಪೂರಿತ ಆದೇಶ ಮಾಡಿದ್ದರೆ ಪಕ್ಷಕಾರರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಹಾರವಿದೆ” ಎಂದು ನ್ಯಾಯಾಲಯ ಹೇಳಿದೆ.
ಮುಂದುವರಿದು, “ಅರ್ಜಿದಾರರು ಉಲ್ಲೇಖಿಸಿರುವಂತೆ ಕೆಲವು ಪ್ರಕರಣಗಳಲ್ಲಿ ಸುದೀರ್ಘವಾಗಿ ತಡೆಯಾಜ್ಞೆ ಮುಂದುವರಿದಿದೆ. ಈ ವಿಚಾರದ ಕುರಿತು ಪ್ರಕರಣಗಳನ್ನು ಸಂಬಂಧಿತ ನ್ಯಾಯಾಲಯದ ಮುಂದೆ ಆದ್ಯತೆಯ ಮೇಲೆ ಪಟ್ಟಿ ಮಾಡುವ ಕುರಿತು ಈ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ” ಎಂದು ಆದೇಶಿಸಿರುವ ನ್ಯಾಯಾಲಯ ಅರ್ಜಿ ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ಕೆಲವು ತಡೆಯಾಜ್ಞೆಗಳನ್ನು ಹೊರಡಿಸಿ ವರ್ಷಗಳೇ ಆಗಿವೆ. ಕೆಲವು ಪ್ರಕರಣಗಳಲ್ಲಿ ನಾಲ್ಕು ವರ್ಷಗಳೇ ಆಗಿವೆ. 24 ತಾಸುಗಳಲ್ಲಿ ತಡೆಯಾಜ್ಞೆ ನೀಡಿರುವ ಪ್ರಕರಣಗಳೂ ಇವೆ. ನೋಟಿಸ್ ಜಾರಿ ಮಾಡಿಲ್ಲ, ಪ್ರತಿವಾದಿಗಳನ್ನು ಆಲಿಸದೆಯೇ ಆದೇಶ ಮಾಡಲಾಗಿದೆ. ಅಸಕ್ತ ಸಮುದಾಯಗಳನ್ನು ರಕ್ಷಿಸಲು ರೂಪಿಸಿರುವ ಕಾಯಿದೆ ಇದಾಗಿದ್ದು, ಕಡ್ಡಾಯವಾಗಿ ನಿಬಂಧನೆಗಳ ಅನುಸಾರ ಆದೇಶ ಮಾಡಬೇಕಿದೆ. ಹೀಗಾಗಿ, ಎಸ್‌ಸಿ/ಎಸ್‌ಟಿ ಕಾಯಿದೆಯ ಕಡ್ಡಾಯ ನಿಬಂಧನೆಗಳನ್ನು ಪಾಲಿಸುವ ಸಂಬಂಧ ಸುತ್ತೋಲೆ ಹೊರಡಿಸಬೇಕು” ಎಂದು ಕೋರಿದರು.
“ಎಸ್‌ಸಿ/ಎಸ್‌ಟಿ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆಯ ನಿಬಂಧನೆಗಳನ್ನು ಸರಿಯಾಗಿ ಪಾಲಿಸಬೇಕು. ಸೆಕ್ಷನ್ 53ಎ ಅಡಿ ಕಡ್ಡಾಯವಾಗಿ ನೋಟಿಸ್ ನೀಡಬೇಕು ಎಂದಿದೆ. ಅಂತೆಯೇ ನೋಟಿಸ್ ನೀಡಬೇಕು” ಎಂದರು.
ಆಗ ಪೀಠವು “ಸಮನ್ವಯ ಪೀಠಗಳು ಮಾಡಿರುವ ಆದೇಶಗಳೆಲ್ಲವೂ ನ್ಯಾಯಾಂಗ ಆದೇಶಗಳಾಗಿವೆ. ಕಾಯಿದೆ ಅಸ್ತಿತ್ವದಲ್ಲಿರುವುದರಿಂದ ಎಲ್ಲರೂ ಪಾಲಿಸಲೇಬೇಕು. ಈ ಕಾಯಿದೆ ಅಡಿ ಪ್ರಕರಣಗಳು ದಾಖಲಾಗುತ್ತಿದ್ದು, ಕಾಯಿದೆಯ ದುರುಪಯೋಗವೂ ಆಗುತ್ತಿದೆ. ಈ ಕಾಯಿದೆ ದುರುಪಯೋಗವಾಗುತ್ತಿಲ್ಲ ಎಂದೇನಿಲ್ಲ. 2020ರಿಂದ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ಸಕ್ಷಮ ಪೀಠದ ಮುಂದೆ ಪಟ್ಟಿ ಮಾಡಲು ಸುತ್ತೋಲೆ ಹೊರಡಿಸಲಾಗುವುದು” ಎಂದಿತು.