ಮತಕ್ಕಾಗಿ ಹಣದ ಆಮಿಷ: ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್‌ ರೆಡ್ಡಿ ಅರ್ಜಿ ವಿಚಾರಣೆ ಜ. 5ಕ್ಕೆ ಮುಂದೂಡಿದ ಸುಪ್ರೀಂ

ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿಯನ್ನು ಕಾಂಗ್ರೆಸ್‌ ಪಕ್ಷ ಮಣಿಸಿದ್ದು ರೇವಂತ್‌ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ.
ರೇವಂತ್ ರೆಡ್ಡಿ ಮತ್ತು ಸುಪ್ರೀಂ ಕೋರ್ಟ್
ರೇವಂತ್ ರೆಡ್ಡಿ ಮತ್ತು ಸುಪ್ರೀಂ ಕೋರ್ಟ್ಫೇಸ್ ಬುಕ್

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಆರೋಪಿಯಾಗಿರುವ 2015ರ ಮತಕ್ಕಾಗಿ ಹಣ ನೀಡಿದ ಪ್ರಕರಣ ಮುಕ್ತಾಯಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2024ರ ಜನವರಿ 5ರಂದು ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ನ್ಯಾಯಪೀಠ ಸೋಮವಾರ ಈ ಕುರಿತು ಆದೇಶ ಹೊರಡಿಸಿದೆ.

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿಯನ್ನು ಕಾಂಗ್ರೆಸ್‌ ಪಕ್ಷ ಮಣಿಸಿದ್ದು ರೇವಂತ್‌ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2021ರಲ್ಲಿ ತೆಲಂಗಾಣ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದ ಸುಪ್ರೀಂ ಕೋರ್ಟ್‌ ರೇವಂತ್‌ ಅವರ ವಿರುದ್ಧದ ವಿಚಾರಣೆಗೆ ತಡೆ ನೀಡಿತ್ತು. ಸೆಪ್ಟೆಂಬರ್ 2021ರಲ್ಲಿ ಪ್ರಕರಣವನ್ನು ಕಡೆಯ ಬಾರಿಗೆ ವಿಚಾರಣೆ ನಡೆಸಲಾಗಿತ್ತು.

ತೆಲಂಗಾಣದಲ್ಲಿ 2015ರ ಎಂಎಲ್‌ಸಿ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲು ರೆಡ್ಡಿ ಅವರು ವಿಧಾನ ಪರಿಷತ್ತಿನ ಪಕ್ಷೇತರ ಸದಸ್ಯರೊಬ್ಬರಿಗೆ ರೂ. 50 ಲಕ್ಷ ಹಣ ಪಾವತಿಸಿದ್ದಾರೆ. ಮತದಾನದ ನಂತರ ಇನ್ನೂ ರೂ. 5 ಕೋಟಿ ನೀಡುವುದಾಗಿ ಆ ಸದಸ್ಯನಿಗೆ ರೇವಂತ್‌ ಆಮಿಷ ಒಡ್ಡಿದ್ದರು ಎಂದು ಭ್ರಷ್ಟಾಚಾರ ನಿಗ್ರಹ ದಳ ಆರೋಪಿಸಿತ್ತು.

ಒಂದೇ ದಿನ ಎಲ್ಲಾ ಸಾಕ್ಷಿಗಳ ಪಾಟಿ ಸವಾಲಿಗೆ ಅನುಮತಿಸಬೇಕು ಎಂದು ಕೋರಿ ರೇವಂತ್‌ ಸಲ್ಲಿಸಿದ್ದ ಮನವಿಯನ್ನು ಕಳೆದ ಅಕ್ಟೋಬರ್‌ನಲ್ಲಿ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌ ತೆಲಂಗಾಣ ಹೈಕೋರ್ಟ್ ಮುಂದೆ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿತ್ತು.

Related Stories

No stories found.
Kannada Bar & Bench
kannada.barandbench.com