ಶಾಸಕ ಮುನಿರತ್ನ ಪ್ರಕರಣ: 'ಷೆಡ್‌ನಲ್ಲಿ ನೆಲೆಸಿದ್ದ ಕುಟುಂಬಗಳ ತೆರವಿಗೆ ಆದೇಶಿಸಿದ್ದು ಯಾರು?' ಕೋರ್ಟ್‌ ಪ್ರಶ್ನೆ

ಪ್ರಕರಣದಲ್ಲಿ ಯಾರು ತೆರವು ಕಾರ್ಯಾಚರಣೆ ನಡೆಸಿದರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಪ್ರಾಸಿಕ್ಯೂಷನ್‌ ಸಮರ್ಪಕವಾಗಿ ಉತ್ತರಿಸಿಲ್ಲ. ಇದರಿಂದ ಮಧ್ಯಂತರ ಆದೇಶವನ್ನು ಮತ್ತೆ ವಿಸ್ತರಿಸಬೇಕಾಗಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ.
BJP MLA Munirathna
BJP MLA Munirathna
Published on

ಬೆಂಗಳೂರಿನ ಎಚ್‌ಎಂಟಿ ವಾರ್ಡ್‌ನ ಪೀಣ್ಯದ ಎಸ್‌ಆರ್‌ಎಸ್‌ ರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್‌ ಪ್ರದೇಶದಲ್ಲಿ ಷೆಡ್‌ಗಳನ್ನು ನಿರ್ಮಿಸಿಕೊಂಡಿದ್ದ 53 ಕುಟುಂಬಗಳನ್ನು ತೆರವುಗೊಳಿಸಲು ಯಾರ ಆದೇಶವಿತ್ತು ಎಂಬುದರ ಬಗ್ಗೆ ರಾಜ್ಯ ಸರ್ಕಾರ ವಿವರಣೆ ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿದೆ.

ತೆರವು ಕಾರ್ಯಾಚರಣೆ ವೇಳೆ ಮಾದಿಗ ಸಮುದಾಯದ ಮಹಿಳೆಯನ್ನು ನಿಂದಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಮುನಿರತ್ನ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ನಡೆಸಿದರು.

ಮುನಿರತ್ನ ಪರ ವಕೀಲ ಎಸ್‌ ಎಸ್‌ ಶ್ರೀನಿವಾಸ ರಾವ್‌ ಅವರು “ಈ ಪ್ರಕರಣದಲ್ಲಿ ಮುನಿರತ್ನ ಮುಗ್ಧರಾಗಿದ್ದು, ಮೇಲಿಂದ ಮೇಲೆ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಅವರು ಸಾರ್ವಜನಿಕರ ಕೆಲಸ ಮಾಡುವುದೇ ಕಷ್ಟವಾಗಿದೆ” ಎಂದರು.

“ಬಿಬಿಎಂಪಿಯು ಒಕ್ಕಲೆಬ್ಬಿಸುವ ಕಾರ್ಯಾಚರಣೆಯನ್ನು ಕಾನೂನುಬದ್ಧವಾಗಿ ನಡೆಸಿದೆ. ಆದರೆ, ಮಾಧ್ಯಮಗಳಲ್ಲಿ ಮುನಿರತ್ನ ವ್ಯಕ್ತಿತ್ವಕ್ಕೆ ಹಾನಿ ಮಾಡಲು ಅಪಪ್ರಚಾರ ಮಾಡಲಾಗುತ್ತಿದೆ. ದೂರುದಾರರ ಪರ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರು ಆರೋಪಿಸಿರುವಂತೆ ಅಲ್ಲಿ ಕೇವಲ ದಲಿತ ಕುಟುಂಬಗಳು ಮಾತ್ರವೇ ಇರಲಿಲ್ಲ. ಅವರಲ್ಲಿ ಮುಸ್ಲಿಂ ಮತ್ತು ಸಾಮಾನ್ಯ ವರ್ಗದ ಜನರೂ ಇದ್ದರು” ಎಂದರು.

ಇದಕ್ಕೆ ಹನುಮಂತರಾಯ ಅವರು “ಬಿಬಿಎಂಪಿ ಕಾರ್ಯಾಚರಣೆ ನಡೆಸಿದ್ದರೆ ಮುನಿರತ್ನ ಏಕೆ ಅದನ್ನು ಮೌನವಾಗಿ ವೀಕ್ಷಿಸಿದರು? ಕ್ಷೇತ್ರದ ಶಾಸಕರಾಗಿ ನಿರ್ಗತಿಕರಿಗೆ ಏಕೆ ಪುನರ್ವಸತಿ ಕಲ್ಪಿಸಲಿಲ್ಲ” ಎಂದು ಪ್ರಶ್ನಿಸಿದರು.

ಆಗ ಪೀಠವು “ಈ ಪ್ರಕರಣದಲ್ಲಿ ಯಾರು ತೆರವು ಕಾರ್ಯಾಚರಣೆ ನಡೆಸಿದರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್‌ ಸಮರ್ಪಕವಾಗಿ ಉತ್ತರಿಸಿಲ್ಲ. ಇದರಿಂದ ಮಧ್ಯಂತರ ಆದೇಶವನ್ನು ಮತ್ತೆ ವಿಸ್ತರಿಸಬೇಕಾಗಿ ಬಂದಿದೆ. ಪೊಲೀಸ್ ಇಲಾಖೆ ಕ್ಷಮತೆಯಿಂದ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಇದೆ” ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೇ, “ಯಾರ ಆದೇಶದ ಅನ್ವಯ ಒತ್ತುವರಿ ಕಾರ್ಯಾಚರಣೆ ನಡೆಸಲಾಗಿದೆ ಎಂಬುದನ್ನು ತಿಳಿಸಬೇಕು” ಎಂದು ಸರ್ಕಾರಿ ಅಭಿಯೋಜಕಿ ಪಾರ್ವತಿ ಅವರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಎಚ್‌ಎಂಟಿ ವಾರ್ಡ್‌ನ ಪೀಣ್ಯದ ಎಸ್‌ಆರ್‌ಎಸ್‌ ರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್‌ ಪ್ರದೇಶದಲ್ಲಿ ಷೆಡ್‌ಗಳನ್ನು ನಿರ್ಮಿಸಿಕೊಂಡಿದ್ದ ಸುಮಾರು 53 ಉತ್ತರ ಕರ್ನಾಟಕದ ದಲಿತ ಕುಟುಂಬಗಳನ್ನು ಜನವರಿ 20ರಂದು ಮುನಿರತ್ನ ಮತ್ತು ಬೆಂಬಲಿಗರಾದ ವಸಂತಕುಮಾರ್, ಚನ್ನಕೇಶವ, ಗೊರಗುಂಟೆಪಾಳ್ಯದ ನವೀನ, ಶ್ರೀರಾಮ, ಪೀಣ್ಯದ ಕಿಟ್ಟಿ, ಗಂಗಾ ಮತ್ತು ಇತರರು ಕಾನೂನುಬಾಹಿರವಾಗಿ ಜೆಸಿಬಿ ತಂದು ತೆರವುಗೊಳಿಸಿದ್ದಾರೆ. ಜಾತಿನಿಂದನೆ ಮಾಡಿ ಅಲ್ಲಿದ್ದ ಕೆಲ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗೀತಾ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

Kannada Bar & Bench
kannada.barandbench.com