ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ: ಆರೋಪಿ ಪಿಎಸ್‌ಐಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಆರೋಪಿತ ಪಿಎಸ್‌ಐ ತನ್ನ ಪತ್ನಿಯ ತಂದೆಗೆ ಆಕೆಯ ಸಾವಿನ ಮಾಹಿತಿ ನೀಡಿಲ್ಲ. ಮರಣೋತ್ತರ ವರದಿಯ ಪ್ರಕಾರ ಮೃತದೇಹದಲ್ಲಿ ಕೆಲವು ಗುರುತುಗಳು ಪತ್ತೆಯಾಗಿವೆ ಎಂದಿರು ನ್ಯಾಯಾಲಯ.
High Court of Karnataka
High Court of Karnataka
Published on

ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಬಂಧಿತರಾಗಿರುವ ಪಿಎಸ್‌ಐ ಒಬ್ಬರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಬೆಂಗಳೂರಿನ ಬೇಗೂರು ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಚಿಕ್ಕಬಳ್ಳಾಪುರ ತಾಲ್ಲೂಕಿನ ಚಾಮಲವರಿಪಳ್ಳಿಯ ನಿವಾಸಿಯಾದ ಎಸ್‌ ವಿ ರಮೇಶ್‌ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ಮೊಹಮದ್‌ ನವಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಅರ್ಜಿದಾರ ಪಿಎಸ್‌ಐ ಮತ್ತು ಸಾವನ್ನಪ್ಪಿರುವ ಮಹಿಳೆ ನಡುವೆ ಪ್ರೇಮಾಂಕುರವಾಗಿದ್ದರೂ ಪಿಎಸ್‌ಐಗೆ ಆಕೆಯನ್ನು ಮದುವೆಯಾಗುವ ಇಚ್ಛೆ ಇರಲಿಲ್ಲ. ಹಲವು ಬಾರಿ ಸಮಾಲೋಚನೆಯ ಬಳಿಕ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇಬ್ಬರ ಮದುವೆ ನೋಂದಾಯಿಸಲಾಗಿತ್ತು. ಬಳಿಕ ಪಿಎಸ್‌ಐ ಮತ್ತು ಸಾವನ್ನಪ್ಪಿರುವ ಮಹಿಳೆ ಇಬ್ಬರೂ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಮರಣ ಹೊಂದಿದ್ದು, ಆರೋಪಿತ ಪಿಎಸ್‌ಐ ಮಹಿಳೆಯ ಮೇಲೆ ಹಲವು ಬಾರಿ ದೈಹಿಕ ಹಲ್ಲೆ ನಡೆಸಿದ್ದು, ಆಕೆಗಿಂತಲೂ ಉತ್ತಮ ಹುಡುಗಿ ಸಿಗುತ್ತಿದ್ದಳು ಎಂದು ಆತ ಹಲವು ಬಾರಿ ಹೇಳಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

“ಆರೋಪಿತ ಪಿಎಸ್‌ಐ ತನ್ನ ಪತ್ನಿಯ ತಂದೆಗೆ ಆಕೆಯ ಸಾವಿನ ಮಾಹಿತಿ ನೀಡಿಲ್ಲ. ಮರಣೋತ್ತರ ವರದಿಯ ಪ್ರಕಾರ ಮೃತದೇಹದಲ್ಲಿ ಕೆಲವು ಗುರುತುಗಳು ಪತ್ತೆಯಾಗಿವೆ. ಒಂದೊಮ್ಮೆ ಆರೋಪಿ ಪಿಎಸ್‌ಐಗೆ ಜಾಮೀನು ಮಂಜೂರು ಮಾಡಿದರೆ ಪ್ರಾಸಿಕ್ಯೂಷನ್‌ ಸಾಕ್ಷ್ಯ ತಿರುಚುವ ಸಾಧ್ಯತೆ ಇದೆ ಎಂದು ಪ್ರತಿವಾದಿ ವಕೀಲರು ಸರಿಯಾಗಿ ಹೇಳಿದ್ದಾರೆ. ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಅರ್ಜಿ ವಜಾ ಮಾಡುವಾಗ ಅಪರಾಧದ ಗಂಭೀರತೆ ಮತ್ತು ಸಂಗ್ರಹಿಸಲಾಗಿರುವ ದಾಖಲೆಗಳನ್ನು ಪರಿಗಣಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಸಾವನ್ನಪ್ಪಿರುವ ಮಹಿಳೆಯ ತಂದೆಯ ಪರವಾಗಿ ವಾದಿಸಿದ ವಕೀಲ ಕೆಬಿಕೆ ಸ್ವಾಮಿ ಅವರು “ಆರೋಪಿ/ಮೇಲ್ಮನವಿದಾರ ಪಿಎಸ್‌ಐ ಕೆಲಸ ಮಾಡುತ್ತಿದ್ದ ಪೊಲೀಸ್‌ ಠಾಣೆಯು ಹತ್ತಿರದಲ್ಲೇ ಇದ್ದು, ಸಾವಿನ ವಿಚಾರವನ್ನು ಪೊಲೀಸರಿಗೆ ತಿಳಿಸಿಲ್ಲ. ಘಟನೆ ನಡೆದ ಬಳಿಕ ಆರೋಪಿಯು 14 -15 ತಾಸು ಪತ್ತೆಯಾಗಿಲ್ಲ. ಆರೋಪಿಯ ವಿರುದ್ಧದ ಸಾಕ್ಷ್ಯವನ್ನು ನಾಶ ಮಾಡಲಾಗಿದೆ. ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಿರುವ ಬಾಹ್ಯ ಮತ್ತು ಆಂತರಿಕ ಗಾಯಗಳು ಆರೋಪಿಯತ್ತ ಬೆರಳು ಮಾಡುತ್ತವೆ. ಆರೋಪಿಯು ಮರಣ ಘೋಷಣಾ ಪತ್ರವನ್ನು ತಿರುಚಿದ್ದಾರೆ” ಎಂದು ವಾದಿಸಿದ್ದರು.

ಮೇಲ್ಮನವಿದಾರ, ಆರೋಪಿತ ಪಿಎಸ್‌ಐ ಪರವಾಗಿ ವಕೀಲೆ ಪಿ ಎಲ್‌ ವಂದನಾ ವಕಾಲತ್ತು ಹಾಕಿದ್ದು, ಅವರ ಪರವಾಗಿ ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ ವಾದಿಸಿದ್ದು, “ಆರೋಪಿ ತನ್ನ ಸಾವಿಗೆ ಕಾರಣನಲ್ಲ ಎಂದು ಸಾವಿಗೂ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಆರೋಪಿ ರಮೇಶ್‌ ಅವರು ಪಿಎಸ್‌ಐ ಆಗಿದ್ದು, ವರದಕ್ಷಿಣೆಗಾಗಿ ಪೀಡಿಸುವ ಅಗತ್ಯ ಇರಲಿಲ್ಲ. ಸಾವನ್ನಪ್ಪಿರುವ ಮಹಿಳೆ ಮತ್ತು ಆರೋಪಿ ರಮೇಶ್‌ ಅವರು ಹತ್ತು ವರ್ಷಗಳಿಂದ ಚಿರಪರಿಚಿತರಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಸಾವನ್ನಪ್ಪಿರುವ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಅವರಿಗೆ ಗೊತ್ತಿತ್ತು. ರಮೇಶ್‌ಗೆ ಇಷ್ಟವಾಗದಿದ್ದರೆ ಆಕೆಯನ್ನು ಅವರು ವಿವಾಹವಾಗುತ್ತಿರಲೇ ಇಲ್ಲ. ಭಾವನೆಗಳ ಅಲೆಯಲ್ಲಿ ಸಾವನ್ನಪ್ಪಿರುವ ಮಹಿಳೆಯ ತಂದೆಯು ಆಧಾರರಹಿತ ಆರೋಪ ಮಾಡಿದ್ದಾರೆ. ಆರೋಪ ಪಟ್ಟಿ ಸಲ್ಲಿಸುವಾಗ ರಮೇಶ್‌ ಅವರ ಸಹೋದರ ಮತ್ತು ಅವರಿಗೆ ಬಾಡಿಗೆಗೆ ಮನೆ ನೀಡಿದ್ದ ಮಾಲೀಕನ ವಿರುದ್ಧದ ಆರೋಪ ಕೈಬಿಡಲಾಗಿದೆ. ಆರೋಪಿಯು ಆರು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಪೂರ್ಣಗೊಂಡು ಆರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ಜಾಮೀನು ನೀಡಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಬಿ.ಇಡಿ ಪದವಿ ಮಾಡುತ್ತಿದ್ದಾಗಿನಿಂದಲೂ ಪುತ್ರಿ ವಿ ಶಿಲ್ಪಾ ಮತ್ತು ಆರೋಪಿ ರಮೇಶ್‌ ಸ್ನೇಹಿತರಾಗಿದ್ದು, ಪ್ರೇಮಿಸಿ 2023ರ ಜುಲೈ 6ರಂದು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದರು. ಮದುವೆಯಾಗಿದ್ದ ಅವರು ಎಂಟು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ನಡುವೆ ಆರೋಪಿ ರಮೇಶ್‌ ಮತ್ತು ಆತನ ಮನೆಯವರು ಶಿಲ್ಪಾ ಜಾತಿ ನಿಂದನೆ ಮಾಡಿದ್ದು, ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ಹಲವು ಬಾರಿ ಪಂಚಾಯಿತಿಯು ನಡೆದಿತ್ತು. ಶಿಲ್ಪಾಗಿಂತಲೂ ಉತ್ತಮ ವಧು ತನಗೆ ಸಿಗುತ್ತಿದ್ದಳು ಎಂದು ರಮೇಶ್‌ ಚಿತ್ರ ಹಿಂಸೆ ನೀಡಿದ್ದಾನೆ. 2023ರ ಜೂನ್‌ 2ರಂದು ಕರೆ ಮಾಡಿದಾಗ ಆಕೆ ಸ್ಪಂದಿಸಿಲ್ಲ. ಮಾರನೇಯ ದಿನ ಅವರು ವಾಸಿಸುತ್ತಿದ್ದ ಬಾಡಿಗೆ ಮನೆ ಮಾಲೀಕ ಶಿಲ್ಪಾಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು. ಅಲ್ಲಿಗೆ ಭೇಟಿ ನೀಡಿದಾಗ ಶಿಲ್ಪಾ ಸಾವನ್ನಪ್ಪಿರುವ ವಿಚಾರ ಅರಿವಿಗೆ ಬಂದಿತ್ತು ಎಂದು ವೆಂಕಟರಾಯಪ್ಪ ದೂರು ನೀಡಿದ್ದರು.

ಇದರ ಆಧಾರದಲ್ಲಿ ರಮೇಶ್‌ ವಿರುದ್ಧ 498ಎ, 504, 506, 302, 304B, 201 ಜೊತೆಗೆ 34, ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 3 (1)(r), 3(2)(v) ಅಡಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಪೂರ್ಣಗೊಂಡ ಬಳಿಕ ರಮೇಶ್‌ ವಿರುದ್ಧ 498ಎ, 304ಬಿ ಮತ್ತು ವರದಕ್ಷಿಣೆ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 3 ಮತ್ತು 4 ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ 3(2)(v) ಅಡಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.

Attachment
PDF
Ramesh S V Vs State of Karnataka.pdf
Preview
Kannada Bar & Bench
kannada.barandbench.com