ಎನ್‌ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಜಾತಿ ಪ್ರಮಾಣಪತ್ರ ನಕಲಿ ಎಂದು ಆರೋಪಿಸಿದ್ದ ಮಹಾರಾಷ್ಟ್ರ ರಾಜಕಾರಣಿ ನವಾಬ್ ಮಲಿಕ್ ಸ್ಥಾನಮಾನ ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಮುಂಬೈ ಜಾತಿ ಪರಿಶೀಲನಾ ಸಮಿತಿಯ ಆದೇಶ ಆಕ್ಷೇಪಿಸಿ ವಾಂಖೆಡೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಂಪೂರ್ಣ ವ್ಯಾಜ್ಯ ಕಾರಣ ಮುಂಬೈನಲ್ಲಿದ್ದು ಅರ್ಜಿಯನ್ನು ಹೈಕೋರ್ಟ್‌ನ ಮೂಲ ಭಾಗ ಆಲಿಸಬೇಕೆ ವಿನಾ ಮೇಲ್ಮನವಿ ಭಾಗವಲ್ಲ ಎಂದು ಮಲಿಕ್ ಪರ ವಕೀಲರು ಪ್ರಾಥಮಿಕ ಆಕ್ಷೇಪಣೆ ವ್ಯಕ್ತಪಡಿಸಿದ ಬಳಿಕ ಅರ್ಜಿಯನ್ನು ತಿದ್ದುಪಡಿ ಮಾಡಲು ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ಮಾಧವ್ ಜಾಮ್ದಾರ್ ಅವರಿದ್ದ ಪೀಠ ವಾಂಖೆಡೆ ಪರ ವಕೀಲರಿಗೆ ಎರಡು ದಿನಗಳ ಕಾಲಾವಕಾಶ ನೀಡಿತು. ಪ್ರಕರಣ ಜುಲೈ 4, 2022 ರಂದು ಮತ್ತೆ ವಿಚಾರಣೆಗೆ ಬರಲಿದೆ.
ವಾಂಖೆಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಲಿಕ್ ಹಾಗೂ ಇತರ ಮೂವರು ನವೆಂಬರ್ 2021ರಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆಯೋಗಕ್ಕೆ (ಎನ್‌ಎಸ್‌ಸಿಎಸ್) ದೂರು ದಾಖಲಿಸಿದ್ದರು. ಎನ್‌ಸಿಎಸ್‌ಸಿ ನಿರ್ದೇಶನದಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಮಹಾರಾಷ್ಟ್ರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ, ವಾಂಖೆಡೆ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು.
ಸಮೀರ್ ಜನನ ಪ್ರಮಾಣ ಪತ್ರ ಆಧರಿಸಿ ಸಮೀರ್ ಅವರ ತಂದೆ ಮುಸ್ಲಿಂ ಆಗಿದ್ದು ಅವರು ತಮ್ಮ ಹೆಸರನ್ನು ʼದಾವೂದ್ʼ ಎಂದು ಹೇಳಿಕೊಂಡಿದ್ದರು ಎಂಬುದಾಗಿ ದೂರುದಾರರು ಆರೋಪಿಸಿದ್ದರು. ಆದರೆ ದೂರುದಾರರ ಸ್ಥಾನಮಾನವನ್ನು ಪರಿಗಣಿಸದೆ ಸಮಿತಿ ನೋಟಿಸ್ ನೀಡಬಾರದು ಎಂಬುದು ಸಮೀರ್ ಅವರ ವಾದವಾಗಿತ್ತು.