ಕೆಲವೆಡೆಯ ಜೈಲು ಕೈಪಿಡಿಗಳನ್ನು ಗಮನಿಸಿದರೆ ಕೈದಿಗಳ ನಡುವೆ ಜಾತಿ ತಾರತಮ್ಯಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಹನ್ನೊಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ನೋಟಿಸ್ ನೀಡಿದೆ (ಸುಕನ್ಯಾ ಶಾಂತಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).
ಪ್ರಕರಣ ಗಂಭೀರವಾದುದು ಎಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಪ್ರಕರಣದಲ್ಲಿ ತನಗೆ ಸಹಾಯ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು. ಅಂತೆಯೇ ಎಲ್ಲಾ ರಾಜ್ಯಗಳ ಜೈಲು ಕೈಪಿಡಿಗಳನ್ನು ಸಲ್ಲಿಸುವಂತೆಯೂ ಅದು ನಿರ್ದೇಶಿಸಿತು.
ಪರಿಸ್ಥಿತಿ 'ಸ್ವೀಕಾರಾರ್ಹವಲ್ಲ' ಎಂದ ಎಸ್‌ಜಿ ಮೆಹ್ತಾ ಅದನ್ನು ನಿಭಾಯಿಸಲು ಜಂಟಿ ಪ್ರಯತ್ನಗಳ ಅಗತ್ಯ ಇದೆ ಎಂದರು.
ಪತ್ರಕರ್ತೆ ಸುಕನ್ಯಾ ಶಾಂತಾ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. ಜಾತಿ ಆಧಾರಿತ ತಾರತಮ್ಯ ಜೈಲುಗಳಲ್ಲಿ ಮುಂದುವರೆದಿದ್ದು ದೈಹಿಕ ಶ್ರಮಗಳಿಗೆ ಸಂಬಂಧಿಸಿದಂತೆ ತಾರತಮ್ಯ ನಡೆಯುತ್ತಿದ್ದು ಇದು ವಿಮುಕ್ತ ಬುಡಕಟ್ಟುಗಳಿಗೆ (ಡಿನೋಟಿಫೈಡ್) ಮತ್ತು ರೂಡಿಗತ ಅಪರಾಧಿಗಳು ಎಂದು ವರ್ಗೀಕೃತವಾದವರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದ್ದರು.
ವಿವಿಧ ರಾಜ್ಯಗಳ ಕಾರಾಗೃಹ ಕೈಪಿಡಿಗಳಲ್ಲಿ ಕಂಡುಬರುವ ತಾರತಮ್ಯದ ನಿಯಮಾವಳಿಗಳನ್ನು ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿದಾರರ ಪರ ಹಾಜರಾದ ಹಿರಿಯ ನ್ಯಾಯವಾದಿ ಎಸ್ ಮುರಳೀಧರ್, ದಲಿತರಿಗೆ ಪ್ರತ್ಯೇಕ ಜೈಲುಗಳಿದ್ದು ಉಳಿದ ಜಾತಿಗಳವರನ್ನು ಬೇರೆಡೆ ಬಂಧಿಸಿಟ್ಟ ಉದಾಹರಣೆಗಳಿವೆ. ಜೈಲಿಗೆ ಕಾಲಿಟ್ಟ ಸಮಯದಿಂದಲೇ ಕೈದಿಗಳಿಗೆ ಇಂತಹ ತಾರತಮ್ಯದ ಅನುಭವವಾಗುತ್ತದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವಲ್ಲದೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸರ್ಕಾರಗಳು ಕೂಡ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.