ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೋಟಿಸ್‌ಗೆ ಸಿಎಟಿ ತಡೆ

ಅಖಿಲ ಭಾರತ ಸೇವೆಗಳ ನಿಯಮ–1969ರ (ಶಿಸ್ತು ಹಾಗೂ ಮೇಲ್ಮನವಿ) ಅಡಿಯಲ್ಲಿ 2025ರ ಮೇ 9ರಂದು ನೀಡಲಾಗಿರುವ ನೋಟಿಸ್‌ ಪ್ರಶ್ನಿಸಿ ಅಲೋಕ್‌ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ.
Traffic & Road Safety ADGP Alok Kumar
Traffic & Road Safety ADGP Alok KumarTwitter
Published on

ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಆದೇಶಿಸಿ ಈ ಸಂಬಂಧ ಸರ್ಕಾರ ನೀಡಿದ್ದ ನೋಟಿಸ್‌ಗೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಈಚೆಗೆ ಮಧ್ಯಂತರ ತಡೆ ನೀಡಿದೆ.

ಅಲೋಕ್‌ ಕುಮಾರ್‌ ಸಲ್ಲಿಸಿದ್ದ ಮೂಲ ಅರ್ಜಿಯನ್ನು ರಜಾಕಾಲದ ಪೀಠದಲ್ಲಿದ್ದ ಸಿಎಟಿ ಸದಸ್ಯ ನ್ಯಾಯಮೂರ್ತಿ ಶ್ರೀವಾಸ್ತವ ಅವರು ವಿಚಾರಣೆ ನಡೆಸಿ ಆದೇಶಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ಪೀಠವು, ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿದೆ. 

ಅಖಿಲ ಭಾರತ ಸೇವೆಗಳ ನಿಯಮ–1969ರ (ಶಿಸ್ತು ಹಾಗೂ ಮೇಲ್ಮನವಿ) ಅಡಿಯಲ್ಲಿ 2025ರ ಮೇ 9ರಂದು ನೀಡಲಾಗಿರುವ ನೋಟಿಸ್‌ ಪ್ರಶ್ನಿಸಿ ಅಲೋಕ್‌ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ.

ಎಡಿಜಿಪಿ ಅಲೋಕ್‌ ಕುಮಾರ್‌ ವಿರುದ್ಧ 2019ರಲ್ಲಿ ಕೇಳಿಬಂದಿದ್ದ ದೂರವಾಣಿ ಮಾತುಕತೆ ಧ್ವನಿಮುದ್ರಣ ಸೋರಿಕೆಯ ಪ್ರಕರಣದ ಕುರಿತು ಇಲಾಖಾ ವಿಚಾರಣೆ ನಡೆಸುವಂತೆ 2025ರ ಮೇ 9ರಂದು ಮುಖ್ಯ ಕಾರ್ಯದರ್ಶಿ ನೋಟಿಸ್‌ ನೀಡಿದ್ದರು. ಅದನ್ನು ಪ್ರಶ್ನಿಸಿ ಅಲೋಕ್‌ ಕುಮಾರ್‌ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು.

ಅಲೋಕ್‌ ಕುಮಾರ್‌ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು "ಇದೇ ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ಆರೋಪ ಮಾಡಲಾಗಿತ್ತು. ಈ ಹಿಂದೆ ಸಿಬಿಐ ತನಿಖಾಧಿಕಾರಿಗಳು ಇದೇ ಪ್ರಕರಣವನ್ನು ಮುಕ್ತಾಯಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸದ್ಯ ಅಲೋಕ್‌ ಕುಮಾರ್‌ ಅವರಿಗೆ ಮುಂಬಡ್ತಿ ನೀಡುವುದನ್ನು ತಡೆಹಿಡಿಯುವ ಉದ್ದೇಶದಿಂದ ಹಳೆಯ ಆರೋಪಗಳ ಮೇಲೆ ಮತ್ತೆ ಇಲಾಖಾ ತನಿಖೆಗೆ ಸರ್ಕಾರ ಆದೇಶಿಸಿದೆ" ಎಂದು ಪೀಠಕ್ಕೆ ವಿವರಿಸಿದ್ದರು.

ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ಬೆಂಗಳೂರಿನ ಸಿಎಟಿ ಪೀಠ, ಅಲೋಕ್‌ ಕುಮಾರ್‌ ವಿರುದ್ಧದ ನೋಟಿಸ್‌ಗೆ ಜೂನ್‌ 10ರವರೆಗೆ ತಡೆ ನೀಡಿ ಮಧ್ಯಂತರ ಆದೇಶ ಮಾಡಿದೆ. ಜೊತೆಗೆ, ಅರ್ಜಿಯನ್ನು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ನಿರ್ದೇಶಿಸಿದೆ.

Kannada Bar & Bench
kannada.barandbench.com