ಪ್ರಾಣಿ ಹಿಂಸೆ ಪ್ರಕರಣದಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಆರೋಪಿ ಮಾಲೀಕರಿಗೆ ಮರಳಿಸುವಂತಿಲ್ಲ: ಒರಿಸ್ಸಾ ಹೈಕೋರ್ಟ್

ಜಾನುವಾರುಗಳನ್ನು ಸಾಗಿಸುವಾಗ ಕ್ರೌರ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಮಾಲೀಕರಿಗೆ ನೀಡುವಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಧ್ಯಾನ್ ಫೌಂಡೇಶನ್ ಪ್ರಶ್ನಿಸಿತ್ತು.
Cattle transportation
Cattle transportation Image for representative purpose

ಕ್ರೌರ್ಯಕ್ಕೆ ತುತ್ತಾದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಜಾನುವಾರುಗಳನ್ನು ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯಿದೆಯಡಿ (ಪಿಸಿಎ) ದಾಖಲಿಸಲಾದ ಆರೋಪಿ ಮಾಲೀಕರಿಗೆ ಮರಳಿಸುವಂತಿಲ್ಲ ಎಂದು ಒರಿಸ್ಸಾ ಹೈಕೋರ್ಟ್‌ ಈಚೆಗೆ ಹೇಳಿದೆ [ಧ್ಯಾನ್ ಫೌಂಡೇಶನ್ ಮತ್ತು ಒಡಿಶಾ ಸರ್ಕಾರ ನಡುವಣ ಪ್ರಕರಣ].

ಅಂತಹ ಪ್ರಕರಣಗಳಲ್ಲಿ "ಕಾನೂನು ಉಲ್ಲಂಘಿಸಿ ತಪ್ಪು ಮಾಡಿದವರಿಗೆ” ಕ್ರೌರ್ಯ ಎಸಗುವ ಮತ್ತಷ್ಟು ಅವಕಾಶ ಒದಗುವುದನ್ನು ತಳ್ಳಿಹಾಕಲಾಗದು ಎಂದು ನ್ಯಾಯಮೂರ್ತಿ ಎಸ್ ಎಸ್ ಮಿಶ್ರಾ ಅವಲೋಕಿಸಿದರು.

ಹೀಗಾಗಿ ಪಿಸಿಎ ಕಾಯಿದೆಯ ಪ್ರಕರಣ ಬಾಕಿ ಇರುವಾಗ ಜಾನುವಾರುಗಳನ್ನು ರಕ್ಷಿಸಿ, ಪಾಲನೆ ಮಾಡುವ ತಟಸ್ಥ ಸಂಸ್ಥೆಗೆ ಜಾನುವಾರುಗಳನ್ನು ವಹಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ಅಂತಿಮ ವಿಲೇವಾರಿ ನಂತರ, ವಿಚಾರಣಾ ನ್ಯಾಯಾಲಯ ಕಾನೂನಿಗೆ ಅನುಸಾರವಾಗಿ ಜಾನುವಾರು ಅಥವಾ ವಾಹನದ ವಿಲೇವಾರಿ ಇಲ್ಲವೇ ವಶ ಅಥವಾ ಜಪ್ತಿ ಬಗ್ಗೆ ಸೂಕ್ತ ಆದೇಶ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.

ವಶಪಡಿಸಿಕೊಂಡ ಜಾನುವಾರುಗಳನ್ನು ಮಾಲೀಕರಿಗೆ ನೀಡುವಂತೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಧ್ಯಾನ್ ಫೌಂಡೇಶನ್ ಪ್ರಶ್ನಿಸಿತ್ತು.

ಪಿಸಿಎ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಮಾಲೀಕರು ಪ್ರಾಣಿಗಳ ವಶಕ್ಕೆ ತೆಗೆದುಕೊಳ್ಳುವುದನ್ನು ತಡೆಯಲು ಯಾವುದೇ ಕಾನೂನು ತಡೆ ಇಲ್ಲ ಎಂದು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು.

ಸರಕು ಸಾಗಣೆ ವಾಹನದಲ್ಲಿ ಅಗತ್ಯ ಆರೋಗ್ಯ ಪ್ರಮಾಣಪತ್ರವಿಲ್ಲದೆ ಮತ್ತು ಸೂಕ್ತ ಆರೈಕೆ ಅಥವಾ ನೀರು, ಆಹಾರ ಇಲ್ಲವೇ ವೈದ್ಯಕೀಯ ಸಹಾಯದ ವ್ಯವಸ್ಥೆ ಇಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಕಳೆದ ವರ್ಷ ವಶಪಡಿಸಿಕೊಳ್ಳಲಾಗಿತ್ತು.

ವಿಚಾರಣೆ ಬಳಿಕ ಸೆಷನ್ಸ್‌ ನ್ಯಾಯಾಲಯದ ಆದೇಶ ಬದಿಗೆ ಸರಿಸಿದ ಹೈಕೋರ್ಟ್‌ ಜಾನುವಾರುಗಳ ಮಾಲೀಕತ್ವ ಸಾಬೀತುಪಡಿಸಲು ಸಲ್ಲಿಸಿದ ದಾಖಲೆಗಳು ನಕಲಿ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ಹಾಗೂ ಹೈಕೋರ್ಟ್‌ ಅವಲೋಕನಗಳ ನಿಟ್ಟಿನಲ್ಲಿ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ತೀರ್ಪು ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಮರಳಿಸಿತು.

Related Stories

No stories found.
Kannada Bar & Bench
kannada.barandbench.com