ಕಾವೇರಿ ಆರತಿ: ತಾಂತ್ರಿಕ ಸಲಹೆ ಪಡೆದಿಲ್ಲ ಎಂದು ಆಕ್ಷೇಪ, ದಾಖಲೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್

ಕೃಷ್ಣರಾಜ ಸಾಗರದ ಸುತ್ತಮುತ್ತಲಿನ 20 ಕಿ.ಮೀ ಪ್ರದೇಶವನ್ನು ಹೈಕೋರ್ಟ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಸ್ಫೋಟಕ ಚಟುವಟಿಕೆಗಳಿಗೆ ನಿಷೇಧ ಹೇರಿದೆ. ಅದಾಗ್ಯೂ, ಕಾವೇರಿ ಆರತಿಗೆ ಅನುಮತಿಸಲಾಗಿದೆ ಎಂದು ಆಕ್ಷೇಪ.
ಕಾವೇರಿ ಆರತಿ: ತಾಂತ್ರಿಕ ಸಲಹೆ ಪಡೆದಿಲ್ಲ ಎಂದು ಆಕ್ಷೇಪ, ದಾಖಲೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್
Published on

ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬಳಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಆಯೋಜಿಸುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪೂರಕವಾಗಿ ಕೆಲವು ದಾಖಲೆಗಳನ್ನು ಸಲ್ಲಿಸುವುದಾಗಿ ಅರ್ಜಿದಾರರು ತಿಳಿಸಿರುವುದನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ವಿಚಾರಣೆ ಮುಂದೂಡಿತು.

ರಾಜ್ಯ ಜಲ ಸಂಪನ್ಮೂಲ ಇಲಾಖೆಯು ಆಡಳಿತಾತ್ಮಕ ಅನುಮೋದನೆ ನೀಡಿರುವ ಆದೇಶ ವಜಾಗೊಳಿಸಲು ಕೋರಿ ರೈತ ನಾಯಕಿ ಮಂಡ್ಯ ಜಿಲ್ಲೆಯ ಸುನಂದಾ ಜಯರಾಂ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ್‌ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಶುಕ್ರವಾರಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ ಅವರು “ನಾಲ್ವಡಿ ಕೃಷ್ಭರಾಜ ಒಡೆಯರ್ ಹಾಗೂ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯ ಮುಂತಾದವರು ಸೇರಿ ಕೆಆರ್‌ಎಸ್ ಜಲಾಶಯ ಕಟ್ಟಿದ್ದಾರೆ. ಶತಮಾನದ ಇತಿಹಾಸ ಹೊಂದಿರುವ ಈ ಜಲಾಶಯ ರಾಷ್ಟ್ರೀಯ ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿದೆ. ಇದೀಗ ಸರ್ಕಾರ ಈ ಜಲಾಯಶದ ಬಳಿ ಕಾವೇರಿ ಆರತಿ ಎಂಬ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇದಕ್ಕಾಗಿ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಜಲಾಶಯದ 40 ಮೀಟರ್ ಅಂತರದಲ್ಲಿ 20ರಿಂದ 25 ಸಾವಿರ ಜನರಿಗೆ ಆಗುವಷ್ಟು ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ. ಕನ್ನಂಬಾಡಿ ಕಟ್ಟೆ ಬಳಿ 5 ಸಾವಿರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಜಲಾಶಯದ ಸುರಕ್ಷತೆ ಮತ್ತು ಭದ್ರತೆಗೆ ಅಪಾಯಕಾರಿಯಾಗಿದೆ. ಅಲ್ಲದೇ ಜಲ, ಪರಿಸರ ಹಾಗೂ ವಾಯು ಮಾಲಿನ್ಯಕ್ಕೂ ಇದು ಕಾರಣವಾಗಲಿದೆ. ಸರ್ಕಾರದ ಈ ನಿರ್ಧಾರ 2021ರ ಜಲಾಶಯ ಸುರಕ್ಷತಾ ಕಾಯಿದೆಗೆ ವಿರುದ್ಧ” ಎಂದು ವಿವರಿಸಿದರು.

ಆಗ ಪೀಠವು ಕಾವೇರಿ ಆರತಿ ಯೋಜನೆಗೆ ತಾಂತ್ರಿಕ ಸಲಹೆ ಪಡೆಯಲಾಗಿಲ್ಲ ಎಂಬ ನಿಮ್ಮ ಆಕ್ಷೇಪವಾಗಿದ್ದರೆ ಅದನ್ನು ದೃಢಪಡಿಸುವ ದಾಖಲೆ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

ಕಾವೇರಿ ಆರತಿ ಆಯೋಜನೆ ಸಂಬಂಧ 2025ರ ಮೇ 3ರಂದು ಜಲ ಸಂಪನ್ಮೂಲ ಇಲಾಖೆ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಮೈಸೂರು, ಮಂಡ್ಯ, ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಬರುವ ಕಾವೇರಿ ನದಿ ಪಾತ್ರದ ಕೆರೆ ಕಾಲುವೆಗಳನ್ನು ದುರಸ್ತಿಗೊಳಿಸಿ ಹೂಳು ತೆಗೆಯುವಂತೆ ಕಾವೇರಿ ನೀರಾವರಿ ನಿಗಮಕ್ಕೆ ನಿರ್ದೇಶನ ನೀಡಬೇಕು. ಬೃಂದಾವನ ಗಾರ್ಡನ್ ಸುತ್ತಮುತ್ತ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ನಿರ್ಬಂಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕೃಷ್ಣರಾಜ ಸಾಗರದ ಸುತ್ತಮುತ್ತಲಿನ 20 ಕಿ ಮೀ ಪ್ರದೇಶವನ್ನು ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಸ್ಫೋಟ ಚಟುವಟಿಕೆಗಳಿಗೆ ನಿಷೇಧ ಹೇರಿದೆ. ಅದಾಗ್ಯೂ, ರಾಜ್ಯ ಸರ್ಕಾರವು ಗಂಗಾ ನದಿಯಲ್ಲಿ ನಡೆಸುವ ಆರತಿಯ ರೀತಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಸೌಲಭ್ಯ ಕಲ್ಪಿಸಲು 92.30 ಕೋಟಿ ಬಿಡುಗಡೆ ಮಾಡಿದೆ ಎಂದು ಆಕ್ಷೇಪಿಸಲಾಗಿದೆ.

Kannada Bar & Bench
kannada.barandbench.com