ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಗೆ ಕಾವೇರಿ ಕಾಲಿಂಗ್ ಯೋಜನೆಯ ಅಂಗವಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದಂತೆ ಸೂಚಿಸುವಂತೆ ಕೋರಲಾಗಿದ್ದ ಮನವಿಯನ್ನು ಸ್ವಯಂ ಪ್ರೇರಿತ ಅರ್ಜಿ ಎಂದು ಪರಿಗಣಿಸಲು ನಿರ್ಧರಿಸಿರುವುದಾಗಿ ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.
ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಡಿಸ್ಕವರಿ ಚಾನೆಲ್‌ಗೆ ವಕೀಲ ಅರ್ಜಿದಾರ ಎ ವಿ ಅಮರನಾಥನ್ ಕಾನೂನಾತ್ಮಕ ನೋಟಿಸ್ ಕಳುಹಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೇಲಿನ ನಿರ್ದೇಶನ ನೀಡಿದೆ. ಆದೇಶ ಹೊರಡಿಸಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಹೀಗೆ ಹೇಳಿದೆ.
“ತಾನು ಎಸಗಿರುವ ಕೃತ್ಯಕ್ಕೆ ಪಶ್ಚಾತಾಪ ವ್ಯಕ್ತಪಡಿಸುವ ಬದಲು ಅಮರನಾಥ್ ಅವರು ತಮ್ಮ ಅಫಿಡವಿಟ್ ನಲ್ಲಿ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ, ಈ ಅರ್ಜಿದಾರರನ್ನು ಈ ಅರ್ಜಿಯ ವಿಚಾರಣೆ ನಡೆಸಲು ಸಾರ್ವಜನಿಕ ಒಳಿತು ಬಯಸುವ ದಾವೆದಾರರಾಗಿ (ಪ್ರೊ-ಬೊನೊ ಲಿಟಿಗೆಂಟ್) ಮುಂದುವರೆಸಲು ಅನುಮತಿಸಲಾಗದು. ಅರ್ಜಿಯಲ್ಲಿ ಉಲ್ಲೇಖಿಸಿದ ವಿಚಾರಗಳ ಬಗ್ಗೆ ಈ ನ್ಯಾಯಾಲಯವು ಕಾಲಕಾಲಕ್ಕೆ ನೀಡಿರುವ ಆದೇಶಗಳು ಅವು ಸರಿಯಾಗಿ ತಲುಪಬೇಕು ಎನ್ನುವುದನ್ನು ಸೂಚಿಸುತ್ತವೆ. ಹಾಗಾಗಿ ಈ ಅರ್ಜಿಯನ್ನು ಸ್ವಯಂಪ್ರೇರಿತ ಮನವಿಯನ್ನಾಗಿ (ಪಿಐಎಲ್) ಪರಿಗಣಿಸಲು ನಿರ್ಧರಿಸಲಾಗಿದೆ.”
ಕರ್ನಾಟಕ ಹೈಕೋರ್ಟ್
ಡಿಸ್ಕವರಿ ಚಾನೆಲ್‌ಗೆ ಕಾನೂನಾತ್ಮಕ ನೋಟಿಸ್ ಜಾರಿಗೊಳಿಸಿ ಅವರನ್ನು ಬೆದರಿಸಿರುವುದು ಅನಿರೀಕ್ಷಿತ ಮತ್ತು ಅನವಶ್ಯಕ ಎಂದು ಅರ್ಜಿದಾರರ ವರ್ತನೆಯ ಬಗ್ಗೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಕಾರ್ಯಕ್ರಮ ಪ್ರಸಾರ ಮಾಡುವುದು ನ್ಯಾಯಾಂಗ ನಿಂದನೆಯಾಗುತ್ತದೆಯೇ ಎಂಬುದನ್ನು ಅರ್ಜಿದಾರರು ನಿರ್ಧರಿಸಲಾಗದು. ಕಾರ್ಯಕ್ರಮ ಪ್ರಸಾರ ಮಾಡುವುದು ಆಕ್ಷೇಪಾರ್ಹ ಎಂದೆನಿಸಿದರೆ ಅವರು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಬದಲಾಗಿ ಅವರು ಬೆದರಿಯ ಇಮೇಲ್ ಬರೆದಿದ್ದು, ಅಲ್ಲಿ ಎರಡು ಕಡೆ ಕಾರ್ಯಕ್ರಮ ಪ್ರಸಾರ ಮಾಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಒಳಿತು ಬಯಸುವ ದಾವೆದಾರರಿಂದ ಈ ರೀತಿ ವರ್ತಿಸುವುದು ಮತ್ತು ಚಾನೆಲ್ ಗೆ ಬೆದರಿಕೆ ಹಾಕುವುದನ್ನು ನಿರೀಕ್ಷಿಸಲಾಗದು” ಎಂದು ಪೀಠ ಹೇಳಿದೆ.
ಪ್ರಕರಣವನ್ನು ನವೆಂಬರ್ 3ಕ್ಕೆ ಮುಂದೂಡಿರುವ ಪೀಠವು ಅಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ನೇಮಿಸುವುದಾಗಿ ಹೇಳಿದೆ.
ಡಿಸ್ಕವರಿ ಚಾನೆಲ್‌ಗೆ ತಾನು ಬೆದರಿಕೆ ಹಾಕಿಲ್ಲ. ಕಾವೇರಿ ಕಾಲಿಂಗ್ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮ ಪ್ರಸಾರ ಮಾಡುವುದು ನ್ಯಾಯಾಂಗ ನಿಂದನೆಯ ನಿಬಂಧನೆಗಳಿಗೆ ಎಡೆಮಾಡಿಕೊಡಬಹುದು ಎಂದು ಹೇಳಿದ್ದಾಗಿ ವಕೀಲ ಅಮರನಾಥನ್ ಅಫಿಡವಿಟ್‌ನಲ್ಲಿ ವಿವರಿಸಿದ್ದರು.
ಇಶಾ ಫೌಂಡೇಶನ್ ಪ್ರತಿನಿಧಿಸಿರುವ ಹಿರಿಯ ವಕೀಲ ಉದಯ್ ಹೊಳ್ಳಾ ಅವರು “ನ್ಯಾಯಪೀಠವು ಇಲ್ಲಿ ಮಧ್ಯಂತರ ಆದೇಶ ಹೊರಡಿಸಿಲ್ಲ. ಆದರೆ, ಅರ್ಜಿದಾರರು ಇಂಥ ಕೀಟಲೆ ಕೆಲಸಗಳನ್ನು ಮಾಡುತ್ತಿದ್ದಾರೆ…” ಎಂದರು.
ಕಾವೇರಿ ಕಾಲಿಂಗ್ ಯೋಜನೆಯ ಭಾಗವಾಗಿ ಇಶಾ ಫೌಂಡೇಶನ್ ಸರ್ಕಾರಿ ಜಾಗದಲ್ಲಿ ಗಿಡಗಳನ್ನು ನೆಡುತ್ತಿದ್ದು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದೆ. ಯೋಜನೆಯ ಸರಿ-ತಪ್ಪುಗಳನ್ನು ತಿಳಿದುಕೊಳ್ಳದೇ ಸರ್ಕಾರಿ ಜಾಗವನ್ನು ಖಾಸಗಿ ಸಂಸ್ಥೆ ಬಳಸುವುದಕ್ಕೆ ಸರ್ಕಾರ ಹೇಗೆ ಅನುಮತಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅದು ₹10,626 ಕೋಟಿ ದೇಣಿಗೆ ಸಂಗ್ರಹಿಸುವ ಉದ್ದೇಶ ಹೊಂದಿದೆ ಎಂದು ಅರ್ಜಿದಾರ ಅಮರನಾಥನ್ ವಾದಿಸಿದ್ದಾರೆ.