![[ಕಾವೇರಿ ವಿವಾದ] ಪ್ರಾಧಿಕಾರದ ಮುಂದೆ ಕರ್ನಾಟಕ ಸಮರ್ಥ ವಾದ ಮಂಡಿಸಿಲ್ಲ ಎನ್ನುವುದು ಎಷ್ಟು ಸತ್ಯ?](http://media.assettype.com/barandbench-kannada%2F2023-09%2Fffebcbcb-16bb-4f60-96b0-0922203839a7%2FWhatsApp_Image_2023_09_22_at_18_50_48.jpeg?w=480&auto=format%2Ccompress&fit=max)
ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ಹಿಂದೆ ಸರಿದ ಬೆನ್ನಿಗೇ ಕರ್ನಾಟಕದಲ್ಲಿ ಈ ವಿಚಾರ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸರ್ಕಾರವು ಪ್ರಾಧಿಕಾರದ ಮುಂದೆಯಾಗಲಿ, ಸುಪ್ರೀಂ ಕೋರ್ಟ್ ಮುಂದೆಯಾಗಲಿ ಸಮರ್ಥವಾಗಿ ವಾದ ಮಂಡಿಸಿಲ್ಲ ಎಂದು ವಿಪಕ್ಷಗಳು ದಿನಂಪ್ರತಿ ಆರೋಪಿಸುತ್ತಿವೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.19ರಂದು ನಡೆಸಿರುವ 24ನೇ ಸಭೆಯ (ತುರ್ತು ಸಭೆ) ನಡಾವಳಿಗಳು ಬೇರೆಯದೇ ವಿಚಾರ ಹೇಳುತ್ತಿವೆ.
ವಿಪಕ್ಷ ನಾಯಕರು, ಸ್ವಯಂಘೋಷಿತ ಕಾವೇರಿ ನಿರಾವರಿ ತಜ್ಞರು ಮುಂತಾದವರು ಸಾರ್ವಜನಿಕವಾಗಿ ಹೇಳುತ್ತಿರುವ ಅಂಶಗಳೇನಿವೆ, ಈ ಚರ್ವಿತಚರ್ವಣ ಅಂಶಗಳಷ್ಟೇ ಅಲ್ಲದೆ, ಇದನ್ನೂ ಮೀರಿದ ವಿಸ್ತೃತವಾದ ಅಂಕಿಅಂಶಗಳನ್ನು ಕರ್ನಾಟಕದ ಪರವಾಗಿ ಪ್ರಾಧಿಕಾರದ ಮುಂದೆ ರಾಜ್ಯದ ಅಧಿಕಾರಿಗಳು ಸವಿವರವಾಗಿ ಮಂಡಿಸಿರುವುದು ಸಭೆಯ ನಡಾವಳಿಗಳಿಂದಲೇ ಸ್ಪಷ್ಪವಾಗಿ ತಿಳಿದುಬಂದಿದೆ. ರಾಜ್ಯದ ಅಧಿಕಾರಿಗಳ ವಾದಮಂಡನೆಯ ಅಂಶಗಳು ಹಾಗೂ ತಮಿಳುನಾಡಿನ ಅಧಿಕಾರಿಗಳ ವಾದಮಂಡನೆಯ ಅಂಶಗಳೆಲ್ಲವನ್ನೂ ಪ್ರಾಧಿಕಾರವು ತನ್ನ ಆದೇಶದಲ್ಲಿ ದಾಖಲಿಸಿದೆ.
ಈ ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳು 12,500 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಕೋರಿದ್ದರು, ಇದಕ್ಕೆ ಪ್ರತಿಯಾಗಿ ಕರ್ನಾಟಕದ ಅಧಿಕಾರಿಗಳು ವಾಸ್ತವಾಂಶಗಳನ್ನು ಮುಂದಿಟ್ಟು ತಮಗೆ ತಮಿಳುನಾಡು ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ತಾವು ಕೆಆರ್‌ಎಸ್ ಹಾಗೂ ಕಬಿನಿಯಿಂದ ಒಟ್ಟು 2500 ಕ್ಯೂಸೆಕ್ಸ್ ನೀರು ಮಾತ್ರ ಹರಿಸಬಹುದು ಎಂದಿದ್ದರು. ಅಂತಿಮವಾಗಿ ಪ್ರಾಧಿಕಾರವು ಅಂತಾರಾಜ್ಯ ಮಾಪನ ಕೇಂದ್ರವಿರುವ ಬಿಳಿಗುಂಡ್ಲುವಿನಲ್ಲಿ ಲೆಕ್ಕಕ್ಕೆ ಸಿಗುವಂತೆ ಸೆ.13ರಿಂದ ಸೆ.19ರವರೆಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲುಆರ್‌ಸಿ) ಸೆ.12ರ ಅದೇಶವನ್ನು ಎತ್ತಿಹಿಡಿದಿತ್ತು.
ರಾಜ್ಯದ ಅಧಿಕಾರಿಗಳು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಂಡಿಸಿಲ್ಲ ಎಂದು ಟೀಕೆ ಮಾಡುತ್ತಿರುವವರಿಗೆ ಒಂದೋ ರಾಜ್ಯ ಏನು ವಾದ ಮಂಡಿಸಿತ್ತು ಎನ್ನುವ ವಿಚಾರ ತಿಳಿದಂತೆ ತೋರುತ್ತಿಲ್ಲ, ಇಲ್ಲವೇ ಅದು ಗೊತ್ತಿದ್ದರೂ ರಾಜಕೀಯ ಹಿತಾಸಕ್ತಿಯ ಕಾರಣಕ್ಕೆ ಆ ಬಗ್ಗೆ ವಸ್ತುನಿಷ್ಠವಾಗಿ ಮಾತನಾಡಲು ಹೋಗುತ್ತಿಲ್ಲ. ಇದರಿಂದಾಗಿ ಕಾವೇರಿ ವಿವಾದಂತಹ ಸೂಕ್ಷ್ಮ ಕಾನೂನು ವಿಚಾರದ ಬಗ್ಗೆ ನಡೆಯಬೇಕಾಗಿದ್ದ ಗಂಭೀರ ಚರ್ಚೆಗಳು ಸಾರ್ವಜನಿಕ ಹಾಗೂ ಪ್ರಜ್ಞಾವಂತ ವಲಯದಿಂದ ಮಾಯವಾಗಿವೆ. ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯ ಇರಿಸಬೇಕಿದ್ದ ಕಾನೂನಾತ್ಮಕ, ನೀತಿನಿರೂಪಣಾತ್ಮಕ ವಿಚಾರಗಳ ಮಂಥನವೆನ್ನುವುದು ಬದಿಗೆ ಸರಿದು ರಾಜಕೀಯ ಕೆಸರೆರಚಾಟವೇ ಮುನ್ನೆಲೆಗೆ ಬಂದಿದೆ.
ಕಾವೇರಿ ವಿಚಾರವಾಗಿ ಎದುರಾಗಿರುವ ಸಂಕಷ್ಟವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮಕ ಚರ್ಚೆಗಳು ಮುನ್ನೆಲೆಗೆ ಬರಬೇಕು ಎನ್ನುವ ಕಳಕಳಿಯಿಂದ ರಾಜ್ಯದ ಅಧಿಕಾರಿಗಳು ಪ್ರಾಧಿಕಾರದ ಮುಂದೆ ಮಂಡಿಸಿರುವ ವಾದದ ಸಾರಸಂಗ್ರಹವನ್ನು 'ಬಾರ್ ಅಂಡ್ ಬೆಂಚ್' ಇಲ್ಲಿ ನೀಡಿದೆ.
ಪ್ರಾಧಿಕಾರದ ಮುಂದೆ ಕರ್ನಾಟಕದ ವಾದ:
ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವ ಉಂಟಾಗಿದ್ದು, ಶೇ.75ರಷ್ಟು ನೈರುತ್ಯ ಮುಂಗಾರು ಇದಾಗಲೇ ಪೂರ್ಣಗೊಂಡಿದೆ. ಮಳೆ ಸಾಧ್ಯತೆ ಕ್ಷೀಣಿಸಿದ್ದು, ಒಂದೊಮ್ಮೆ ಮಳೆಯಾದರೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ. ಪರಿಸ್ಥಿತಿಯು ಇನ್ನೂ ಕೆಟ್ಟ ಸ್ಥಿತಿಗೆ ಹೊರಳಬಹುದು ಎಂಬುದು ನಮ್ಮ ಆತಂಕವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಕಷ್ಟ ಹಂಚಿಕೆಗೆ ಮುಂದಾಗಬೇಕಿದೆ. ಕಾವೇರಿ ನೀರು ವಿವಾದ ನ್ಯಾಯ ಮಂಡಳಿಯ ಅಧಿಸೂಚನೆಯ ಕಲಂ VII ಜೊತೆಗೆ ಕಲಂ XIX(ಎ) ಅಡಿ ನಿರ್ದೇಶಿಸಿರುವಂತೆ ಸೂಕ್ತ ಅನುಪಾತದ ಅನ್ವಯ ನೀರು ಹಂಚಿಕೆಗೆ ಮುಂದಾಗಬೇಕು. ಈ ವಿಚಾರವನ್ನು ಸುಪ್ರೀಂ ಕೋರ್ಟ್ 2018ರ ತೀರ್ಪಿನಲ್ಲಿಯೂ ಬದಲು ಮಾಡಿಲ್ಲ.
2023ರ ಸೆಪ್ಟೆಂಬರ್ 12ರಂದು ನಡೆದ ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ಪ್ರತಿ ದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಪ್ಪಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಸಿಡಬ್ಲ್ಯುಆರ್‌ಸಿಗೆ ಪತ್ರ ಬರೆದು ಹೊಸದಾಗಿ ಪ್ರಕರಣ ಪರಿಗಣಿಸಿ, ನಿರ್ದೇಶಿಸುವಂತೆ ಕೋರಲಾಗಿದೆ.
ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕದ ಜಲಾಶಗಳಿಗೆ 104.273 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ಕಳೆದ 30 ವರ್ಷಗಳ ಸರಾಸರಿ ಮಳೆ ಪ್ರಮಾಣದ ಹೋಲಿಕೆಯಲ್ಲಿ ಶೇ. 54.42ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 228.793 ಟಿಎಂಸಿ ನೀರು ಹರಿದು ಬರುತ್ತಿತ್ತು.
ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ 46.271 ಟಿಎಂಸಿ ನೀರನ್ನು ಕಬಿನಿ ಮತ್ತು ಕೆಆರ್‌ಎಸ್ ಜಲಾಶಯದಿಂದ ಹರಿಸಲಾಗಿದೆ. ಕರ್ನಾಟಕವು ನೈರುತ್ಯ ಮುಂಗಾರಿನಿಂದ ಕೇವಲ 25.689 ಟಿಎಂಸಿ ನೀರು ಸಂಗ್ರಹಿಸಿದೆ. ತಮಿಳುನಾಡು ರಾಜ್ಯವು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಬೆಳೆಗಳಿಗೆ ಈಶಾನ್ಯ ಮಾರುತ ಆಧರಿಸಿದ್ದು, ಕ್ಯಾರಿಓವರ್ ಸ್ಟೋರೇಜ್ (ಮುಂಬಳಕೆ ಸಂಗ್ರಹ) ಅನ್ನು ದುರ್ಬಳಕೆ ಮಾಡಿ ಈಗಾಗಲೇ 100 ಟಿಎಂಸಿ ನೀರನ್ನು ಕರ್ನಾಟಕದಿಂದ ಪಡೆದಿದೆ. ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡು ನೀರು ದುರ್ಬಳಕೆ ಮಾಡಿಕೊಂಡಿರುವುದನ್ನು ಎಲ್ಲರೂ ಕಾಣಬಹುದಾಗಿದೆ.
ಮಳೆ ಕೊರತೆಯನ್ನು ನಿರ್ಧರಿಸುವಾಗ ನಿಯಂತ್ರಣ ಸಮಿತಿಯು ಕಾವೇರಿ ಪಾತ್ರದ ಒಟ್ಟು 81,155 ಚದರ ಕಿ ಮೀ ಜಲಾನಯನ ಪ್ರದೇಶವನ್ನು ಪರಿಗಣಿಸುವ ಬದಲಾಗಿ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶ 12,812 ಚದರ ಕಿ ಮೀ ಅನ್ನು ಮಾತ್ರವೇ ಪರಿಗಣಿಸುವ ಮೂಲಕ ಸ್ವೇಚ್ಛೆಯಿಂದ ನಿರ್ಧಾರ ತಳೆದಿದೆ. ಮಳೆಯ ಕೊರತೆಯನ್ನು ಆಧರಿಸಿ ಮಾತ್ರವೇ ಸಂಕಷ್ಟ ನಿರ್ಧರಿಸುವಂತಿಲ್ಲ. ಬದಲಿಗೆ ನದೀ ಮುಖಜ ಭೂಮಿಯಲ್ಲಿರುವ ಅಂತರ್ಜಲದ ಲಭ್ಯತೆಯನ್ನು ಪರಿಗಣಿಸಬೇಕು. ಅಲ್ಲದೇ, ನದೀ ಮುಖಜ ಭಾಗದಲ್ಲಿನ ಈಶಾನ್ಯ ಮಳೆಮಾರುತವನ್ನೂ ಸಹ ಪರಿಗಣಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ರಾಜ್ಯಗಳ ಕನಿಷ್ಠ ಅವಶ್ಯಕತೆ ಹಾಗೂ ವಾಸ್ತವಿಕ ಅಂಶಗಳನ್ನು ಆಧರಿಸಿ ನೀರು ಹಂಚಿಕೆ ಮಾಡುವುದು ಸೂಕ್ತವಾದ ಮಾನದಂಡವಾಗಿದೆ.
ಸಿಡಬ್ಲ್ಯುಆರ್‌ಸಿಯು ಕಳೆದ 30 ವರ್ಷಗಳ ಸರಾಸರಿ ಮಳೆ ಹಾಗೂ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗಿನ ಬೆಳೆ ಆಧರಿಸಿ ಕೊರತೆ ಅಂದಾಜಿಸಿದೆ. ಆದರೆ, ಕಾವೇರಿ ನ್ಯಾಯ ಮಂಡಳಿಯು 1938-35ರಿಂದ 1971-27ರವರೆಗಿನ ಅಂಕಿ ಅಂಶ ಆಧರಿಸಿ ಸಾಮಾನ್ಯ ಮಳೆ ವರ್ಷದಲ್ಲಿ ಕಾವೇರಿ ಕೊಳ್ಳದ ನೀರು ಲಭ್ಯತೆಯನ್ನು 740 ಟಿಎಂಸಿ ಎಂದು ನಿರ್ಧರಿಸಿತ್ತು.
ಕರ್ನಾಟಕ ಜಲಾಶಯಗಳ ಜಲಾನಯನ ಪ್ರದೇಶಗಳ ವಿಚಾರದಲ್ಲಿ, ಕರ್ನಾಟಕದ ಅಣೆಕಟ್ಟುಗಳ ಕೆಳಗಿರುವ ಹಾಗೂ ಬಿಳಿಗುಂಡ್ಲು ಅಂತರ ರಾಜ್ಯ ಗಡಿಗಿಂತ ಮೇಲಿರುವ ಸುಮಾರು 23,921 ಚ.ಕಿಮೀ ವ್ಯಾಪ್ತಿಯ ಮಧ್ಯಂತರ ಜಲಾನಯನ ಪ್ರದೇಶದಲ್ಲಿನ ಮಳೆ ಕೊರತೆಯನ್ನು ಸಿಡಬ್ಲ್ಯುಆರ್‌ಸಿಯು ಪ್ರಜ್ಞಾಪೂರ್ವಕವಾಗಿ ಮರೆಮಾಚಿದೆ. ಇದರ ವ್ಯಾಪ್ತಿಯು 23,921 ಚದರ ಕಿ ಮೀ ಆಗಿದೆ. ಈ ಪ್ರದೇಶದಲ್ಲಿನ ಮಳೆ ಕೊರತೆಯು ಕರ್ನಾಟಕದ ಅಣೆಕಟ್ಟುಗಳ ಮೇಲ್ಭಾಗದಲ್ಲಿರುವ ಜಲಾನಯನ ಪ್ರದೇಶದಲ್ಲಿ ಮಳೆಕೊರತೆ ಪ್ರಮಾಣವಾದ ಶೇ.54.42 ಕ್ಕಿಂತ ಹೆಚ್ಚಿದೆ.
ಈ ಮಧ್ಯಂತರ ಜಲಾನಯನ ಪ್ರದೇಶದ 23,921 ಚದರ ಕಿಮೀ ವ್ಯಾಪ್ತಿಯಲ್ಲಿ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರ ಅವಧಿಯಲ್ಲಿ ಅಂದಾಜು 14.286 ಟಿಎಂಸಿ ಹರಿಯುವ ನಿರೀಕ್ಷೆ ಇತ್ತು. ಆದರೆ, ಇದರಿಂದ 2 ಟಿಎಂಸಿಗೂ ಕಡಿಮೆ ಪ್ರಮಾಣದ ಕನಿಷ್ಠ ಹರಿವಾಗಿದೆ.
ಸಾಮಾನ್ಯ ವರ್ಷದಲ್ಲಿ ಸೆಪ್ಟೆಂಬರ್ ತಿಂಗಳ ಕೋಟಾ ಪ್ರಕಾರ 36.76 ಟಿಎಂಸಿ ನೀರನ್ನು ಬಿಳಿಗುಂಡ್ಲು ಮೂಲಕ ಹರಿಸಬೇಕು. 2023ರ ಸೆಪ್ಟೆಂಬರ್ 13ರಿಂದ 27ರ ಅವಧಿಯಲ್ಲಿ 18.38 ಟಿಎಂಸಿ ಬಿಡಬೇಕಿದೆ. ಆದರೆ, ಮಳೆ ಕೊರತೆಯ ಕಾರಣಕ್ಕೆ 10.002 ಟಿಎಂಸಿ ಕಳೆದು 8.378 ಟಿಎಂಸಿ ಅಥವಾ ಪ್ರತಿ ದಿನ 6400 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ನಿರ್ಧರಿಸುವ ಮೂಲಕ ಸಿಡಬ್ಲ್ಯುಆರ್‌ಸಿ ಪ್ರಮಾದ ಎಸಗಿದೆ. ಈ ಅಂದಾಜು ಸ್ವೇಚ್ಛೆಯಿಂದ ಕೂಡಿದೆ. ಏಕೆಂದರೆ ಸೆಪ್ಟೆಂಬರ್‌ನಲ್ಲಿ ನೈರುತ್ಯ ಮುಂಗಾರು ವಿಫಲವಾಗಿದೆ. ಅಲ್ಲದೆ, ಹವಾಮಾನ ಇಲಾಖೆಯ ಅಂದಾಜನ್ನು ಗಣನೆಗೆ ತೆಗೆದುಕೊಂಡರೆ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಇನ್ನೂ ಹೆಚ್ಚಿರಲಿದೆ. ಈ ನೆಲೆಯಲ್ಲಿ 2023ರ ಸೆಪ್ಟೆಂಬರ್ 27ರವರೆಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸುವ ಮೂಲಕ ಸಿಡಬ್ಲ್ಯುಆರ್‌ಸಿ ತರ್ಕದಲ್ಲಿ ವಿಫಲವಾಗಿದೆ.
ನದಿ ಮುಖಜ ಭಾಗದಲ್ಲಿನ ಅಂತರ್ಜಲ ಲಭ್ಯತೆಯನ್ನು ಸಿಡಬ್ಲ್ಯುಆರ್‌ಸಿ ಅನುಕೂಲಕ್ಕೆ ತಕ್ಕಂತೆ ಅವಗಣನೆ ಮಾಡಿದೆ. ಈಶಾನ್ಯ ಮಾರುತವು ತಮಿಳುನಾಡಿನ ಕೊರತೆಯನ್ನು ತುಂಬುವ ಸಾಧ್ಯತೆ ಇದೆ. ಇದನ್ನು ಸಿಡಬ್ಲ್ಯುಆರ್‌ಸಿ ಪರಿಗಣಿಸಿಲ್ಲ. ಬಾಕಿ ಇರುವ ತಿಂಗಳ ಅವಧಿಗೆ (ಮುಂದಿನ ಜೂನ್‌ವರೆಗೆ) ಕರ್ನಾಟಕಕ್ಕೆ ಕನಿಷ್ಠ ಅಗತ್ಯವಾಗಿ 106 ಟಿಎಂಸಿ ನೀರು ಬೇಕಿದೆ ಎಂಬುದನ್ನು ಸಿಡಬ್ಲ್ಯುಆರ್‌ಸಿ ಗಣನೆಗೆ ತೆಗೆದುಕೊಳ್ಳುವಲ್ಲಿ ಎಡವಿದೆ. ಕರ್ನಾಟಕದ ಜಲಾಶಯಗಳಲ್ಲಿ ಸದ್ಯ 54.114 ಟಿಎಂಸಿ ನೀರು ಇದ್ದು, ಸರಾಸರಿ ಮಳೆಯ ಪ್ರಮಾಣಕ್ಕೆ ಶೇ.54 ಮಳೆ ಕೊರತೆಯನ್ನು ಸೇರಿಸಿದರೆ ಒಳಹರಿವು 44.78 ಟಿಎಂಸಿ ಮಾತ್ರ ಇರುವ ಸಾಧ್ಯತೆ ಇದೆ. ಈ ಲೆಕ್ಕದಲ್ಲಿ ಒಟ್ಟ ನೀರು ಲಭ್ಯತೆಯ ಪ್ರಮಾಣ 98.854 ಟಿಎಂಸಿ ಮಾತ್ರ ಆಗಲಿದೆ. ಆದರೆ, ನಾವು ಕಳೆದ ಮೂವತ್ತು ವರ್ಷಗಳ ಅತಿ ಹೆಚ್ಚು ಮಳೆ ಕೊರತೆಯ ವರ್ಷಗಳಲ್ಲಿನ ಪ್ರತಿ ತಿಂಗಳ ಕನಿಷ್ಠ ಒಳಹರಿವನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಸೆಪ್ಟೆಂಬರ್ ತಿಂಗಳ ಉಳಿಕೆ ಅವಧಿಯ 10 ಟಿಎಂಸಿಯೂ ಸೇರಿದಂತೆ ಡಿಸೆಂಬರ್ ವರೆಗಿನ ನೀರು ಲಭ್ಯತೆಯ ಪ್ರಮಾಣ ಒಟ್ಟು 20 ಟಿಎಂಸಿ ದಾಟುವುದಿಲ್ಲ. ಈ ನೆಲೆಯಲ್ಲಿ ಗಮನಿಸಿದರೆ ಕರ್ನಾಟಕಕ್ಕೆ ಲಭ್ಯವಾಗುವ ನೀರಿನ ಪ್ರಮಾಣ 74.114 ಟಿಎಂಸಿ ಮೀರುವ ಸಾಧ್ಯತೆ ಇಲ್ಲ. ಹಾಗಾಗಿ, ಕರ್ನಾಟಕದ ಅಗತ್ಯ ಬಳಕೆಗೆ ಮಿತಿಗೊಳಿಸಲಾದ 106 ಟಿಎಂಸಿ ನೀರಿನ ಪ್ರಮಾಣವು ಸಹ ಲಭ್ಯವಾಗದೆ ಹೋಗಬಹುದು.
ಸಿಡಬ್ಲ್ಯುಆರ್‌ಸಿಯು ಬಿಳಿಗುಂಡ್ಲುವಿನಲ್ಲಿ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ 7.799 ಟಿಎಂಸಿ ಕೊರತೆಯಾಗಿದೆ ಎಂದು ಅಂದಾಜಿಸಿರುವುದು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಬರುವ ತಿಂಗಳುಗಳಲ್ಲಿ ಸಿಡಬ್ಲ್ಯುಆರ್‌ಸಿ ಅಂದಾಜಿಸಿರುವ ಕೊರತೆಯು ಶೇ. 45.58 ಮಾತ್ರವಲ್ಲ. ಇದು ಇನ್ನೂ ಹೆಚ್ಚಾಗಲಿದೆ.
ಈಶಾನ್ಯ ಮಳೆಮಾರುತವು ತಮಿಳುನಾಡಿನಲ್ಲಿ ಸಾಧಾರಣವಾಗಿ 45 ದಿನ ಇರಲಿದೆ. ತಮಿಳುನಾಡಿನಲ್ಲಿ ಅಂತರ್ಜಲವು 20ರಿಂದ 30 ಟಿಎಂಸಿ ಇದ್ದು, ಹಾಲಿ ನೀರು ಸಂಗ್ರಹ ಮತ್ತು ಅಂದಾಜು 60 ಟಿಎಂಸಿ ನೀರು ಮಧ್ಯಂತರ ಜಲಾನಯನ ಪ್ರದೇಶದಿಂದ ಹರಿದು ಬರುವುದರಿಂದ ತಮಿಳುನಾಡು ಪರಿಸ್ಥಿತಿಯನ್ನು ನಿರ್ವಹಿಸಬಹುದಾಗಿದೆ. ಕರ್ನಾಟಕದ ರೈತರಿಗೆ ಅಗತ್ಯವಾಗಿರುವ ಕನಿಷ್ಠ ನೀರಾವರಿ ಅಗತ್ಯತೆ ಹಾಗೂ ಕುಡಿಯುವ ನೀರಿನ ಅಗತ್ಯತೆಯ ದೃಷ್ಟಿಯಿಂದ ನೀರು ಬಿಡುಗಡೆ ಮಾಡಲಾಗದು. ವಿಶೇಷವಾಗಿ ಜಗತ್ತಿನ ತಂತ್ರಜಾನ ಹಬ್ ಆಗಿರುವ ಬೆಂಗಳೂರು ವಾರ್ಷಿಕ 100 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಗಳಿಕೆ ಮಾಡುತ್ತಿದ್ದು, ಇದರ ಕುಡಿಯುವ ನೀರಿನ ಅವಶ್ಯಕತೆಯ ದೃಷ್ಟಿಯಿಂದ ನೀರು ಹರಿಸಲಾಗದು.
ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದು, ಕಾವೇರಿ ಪ್ರದೇಶದಲ್ಲಿ ಬರುವ 15 ತಾಲ್ಲೂಕುಗಳು ಬರಪೀಡಿತವಾಗಿವೆ. ಇದನ್ನು ಸಹ ಪ್ರಾಧಿಕಾರವು ಪರಿಣಿಸಬೇಕಿದೆ.
ತಮಿಳುನಾಡಿನಲ್ಲಿ ನೀರಾವರಿ ಪ್ರದೇಶ ವಿಸ್ತರಿಸಲಾಗಿದೆ ಮತ್ತು ದೊಡ್ಡ ಮಟ್ಟದಲ್ಲಿ ಫಸಲು ಬೆಳೆಯಲಾಗುತ್ತಿದೆ ಎಂಬ ಕರ್ನಾಟಕದ ವಾದದಲ್ಲಿ ಸತ್ಯವಿಲ್ಲ.
ನೀರು ಸಂಗ್ರಹಕ್ಕೆ ಸೌಲಭ್ಯ ಇದ್ದರೂ ತಮಿಳುನಾಡು ಸಮರ್ಥವಾಗಿ ನೀರು ಬಳಕೆ ಮಾಡುತ್ತಿಲ್ಲ ಎಂಬ ವಾದ ಸರ್ವಥಾ ಸರಿಯಲ್ಲ. ಕುರುವೈಗೆ ನ್ಯಾಯಮಂಡಳಿಯ ಬೆಳೆ ನೀರು ಅಗತ್ಯದ (ಸಿಡಬ್ಲುಆರ್) ಪ್ರಕಾರ ಜೂನ್-ಆಗಸ್ಟ್‌ನಲ್ಲಿ 30 ಟಿಎಂಸಿ ಬೇಕಿದೆ. ಜುಲೈ-ಆಗಸ್ಟ್‌ನಲ್ಲಿ ಸಾಂಬಾ ಬೆಳೆಗೆ 32 ಟಿಎಂಸಿ ನೀರು ಬೇಕಿದೆ. ಭೂಮಿ ಹದಗಳಿಸಲು ಮತ್ತು ಬಿತ್ತನೆಗೆ ಹೆಚ್ಚಿನ ನೀರು ಬೇಕಿದೆ. ಒಟ್ಟಾರೆ 95 ಟಿಎಂಸಿ ನೀರು ಬೇಕಿದ್ದು, ಜೂನ್ 12ರಿಂದ 31ರವರೆಗೆ ಮೆಟ್ಟೂರಿನಲ್ಲಿ 68.357 ಟಿಎಂಸಿ ಮಾತ್ರ ನೀರಿದೆ.
ಈಶಾನ್ಯ ಮಳೆಮಾರುತದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗುವುದಿಲ್ಲ. ಈ ವೇಳೆ ಚಂಡಮಾರುತದಿಂದಾಗಿ ಬೆಳೆಗೆ ಹಾನಿ ಉಂಟಾಗಿದ್ದೂ ಇದೆ. ನೈರುತ್ಯ ಮಾನ್ಸೂನ್ ವಿಫಲವಾಗಿರುವುದರಿಂದ ಈಶಾನ್ಯ ಮಾನ್ಸೂನ್ ಸಹ ವಿಫಲವಾಗುವ ಸಾಧ್ಯತೆ ಇದೆ.
ಪ್ರಸಕ್ತ ವರ್ಷದಲ್ಲಿ ಕರ್ನಾಟಕ 1.701 ಲಕ್ಷ ಎಕರೆ ಪ್ರದೇಶದಲ್ಲಿ ಫಸಲು ಮಾಡಿದೆ ಎಂದು ಹೇಳಿದೆ. 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕವು 25.662 ಟಿಎಂಸಿ ನೀರನ್ನು ನಾಲ್ಕು ಪ್ರಮುಖ ಜಲಾಶಯಗಳಿಂದ ಕಾಲುವೆಗಳ ಮೂಲಕ ಹರಿಸಿಕೊಂಡಿದೆ. ಇದರ ಜೊತೆಗೆ ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳ ಕಾಲುವೆಗಳ ಮೂಲಕ ಹರಿಸಿರುವ ನೀರಿನ ಮಾಹಿತಿಯನ್ನು ಕರ್ನಾಟಕ ನೀಡಿಲ್ಲ.
2023ರ ಜೂನ್‌ನಿಂದ 2024ರ ಜನವರಿಯವರೆಗೆ ನಾಲ್ಕು ಜಲಾಶಯಗಳಿಂದ 72 ಟಿಎಂಸಿ ಕರ್ನಾಟಕಕ್ಕೆ ಬೇಕಿದೆ. ಆದರೆ, ಕರ್ನಾಟಕವು ಈಗಾಗಲೇ ಶೇ. 50ರಷ್ಟು ನೀರುಬಳಕೆ ಮಾಡಿದೆ.
ತಮಿಳುನಾಡು ವಾದವನ್ನು ಪರಿಗಣಿಸದೇ ಸೆಪ್ಟೆಂಬರ್ 13ರಿಂದ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಅರ್‌ಸಿ ಆದೇಶಿಸಿದೆ. ಪ್ರೊ-ರಾಟಾ ತತ್ವದ ಅಡಿ ವಿಮುಖವಾಗಿರುವುದು ಮತ್ತು 12,500 ಕ್ಯೂಸೆಕ್ಸ್‌ನಿಂದ 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ತಮಿಳುನಾಡಿನ ಅಧಿಕಾರಿಗಳು ವಾದಿಸಿದ್ದಾರೆ.