“ಸುಪ್ರೀಂ ಕೋರ್ಟ್ ಆದೇಶವನ್ನು ಕರ್ನಾಟಕ ಪಾಲಿಸುವವರೆಗೆ ಕರ್ನಾಟಕದ ಪರ ವಾದಿಸುವುದಿಲ್ಲ ಎಂದು ನಿಸ್ಸಂದಿಗ್ಧವಾಗಿ ಹೇಳುವೆ…”
ಹಿರಿಯ ವಕೀಲ, ನ್ಯಾಯಿಕ ಲೋಕದ ದಂತಕತೆ ಫಾಲಿ ನಾರಿಮನ್ ಅವರು ಫೆಬ್ರವರಿ 2016ರ ಸೆಪ್ಟೆಂಬರ್ 30ರಂದು ಈ ಮಾತುಗಳನ್ನಾಡಿದಾಗ ಕರ್ನಾಟಕ ಸರ್ಕಾರ ಸ್ತಂಭೀಭೂತವಾಗಿದ್ದು ಅತಿಶಯೋಕ್ತಿಯಲ್ಲ. ಏಕೆಂದರೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ದಶಕಗಳಿಗೂ ಅಧಿಕ ಕಾಲ ಕರ್ನಾಟಕದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಅವರೇ ಹೀಗೆ ಹೇಳಿದ್ದರು.
ವಿಷಯ ಸರಳವಾಗಿತ್ತು. 6000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಗಳನ್ನು ಕರ್ನಾಟಕ ಸರ್ಕಾರ ಪಾಲಿಸಲು ಹಿಂದೆ ಮುಂದೆ ನೋಡಿತ್ತು. ಇದು ಸ್ವಾಭಾವಿಕವಾಗಿಯೇ ನಾರಿಮನ್ ಅವರಿಗೆ ಅಸಮಾಧಾನ ತರಿಸಿತ್ತು. ತಾನು ವಾದಿಸುವುದಿಲ್ಲ ಎಂದು ಮಗುವಿನಂತೆ ಅವರು ಹಟ ತೊಟ್ಟಿದ್ದರು.
ಇತ್ತ ನಾರಿಮನ್ ನಡೆಗೆ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತ್ತು. ವಕೀಲ ಸಮುದಾಯದ ಅತ್ಯುನ್ನತ ಪರಂಪರೆಯನ್ನು ಅವರು ಉಸಿರಾಡುತ್ತಿದ್ದಾರೆ ಎಂದು ಭಾವಿಸುತ್ತೇವೆ ಎಂಬುದಾಗಿ ಅದು ಹೇಳಿತ್ತು. ಈ ಬೆಳವಣಿಗೆಗಳ ನಡುವೆ ನಾರಿಮನ್ ಅವರ ಬದಲಿಗೆ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರನ್ನು ನಾರಿಮನ್ ಅವರ ಸ್ಥಾನಕ್ಕೆ ನೇಮಕ ಕೂಡ ಮಾಡಲಾಯಿತು.
ಆದರೆ ನಾರಿಮನ್ ಅಂತರರಾಷ್ಟ್ರೀಯ ಜಲತಜ್ಞ ಎಂದೇ ಹೆಸರಾದವರು. ಕೆಲ ದಿನಗಳ ನಂತರ ಅಂದಿನ ರಾಜ್ಯ ಸರ್ಕಾರ ನಾರಿಮನ್ ಅವರ ಮನವೊಲಿಸಲು ಹೊರಟಿತ್ತು. ಆಗ ಜಲಸಂಪನ್ಮೂಲ ಸಚಿವರಾಗಿದ್ದವರು ಎಂ. ಬಿ. ಪಾಟೀಲರು. ಮನವೊಲಿಕೆ ಕಾರ್ಯ ಸುಲಭವಾಗಿರಲಿಲ್ಲ ಎಂದು ಪಾಟೀಲರು ಅಭಿಪ್ರಾಯಪಟ್ಟಿದ್ದರು. “ನಿಮಗೆ ನಮ್ಮ ಮನೆ ಕದ ಮುಚ್ಚಿದೆ. ನಾನು ಕರ್ನಾಟಕದ ಜನತೆಯನ್ನು ಪ್ರೀತಿಸುತ್ತೇನೆ. ನೀವು ಬಯಸಿದರೆ ನಮ್ಮ ಮನೆಗೆ ಬಂದು ಒಂದು ಕಪ್ ಕಾಫಿ ಕುಡಿದುಕೊಂಡು ಹೋಗಬಹುದು ಆದರೆ ವಾದ ಮುಂದುವರಿಸಿ ಎಂದು ಹೇಳದಿರಿ. ರಾಜ್ಯ ಸರ್ಕಾರ ಉತ್ತಮ ವಕೀಲರನ್ನು ಹುಡುಕಿಕೊಳ್ಳಬಹುದು” ಎಂದು ಕಡ್ಡಿ ತುಂಡಾದಂತೆ ಪಾಟೀಲರಿಗೆ ಹೇಳಿದ್ದರಂತೆ. ಅದಾದ ಮೇಲೆ ನಾರಿಮನ್ ವಾದ ಮುಂದುವರಿಸಲು ಒಪ್ಪಿದ್ದು ಈಗ ಇತಿಹಾಸ. ಅದಕ್ಕಾಗಿ ಹೋರಾಡಿದ್ದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಅಂದಿನ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು.
ಕಾವೇರಿ ಜಲವಿವಾದ ಕುರಿತು ಕರ್ನಾಟಕ ಪರ ವಾದ ಮಂಡಿಸುತ್ತಿದ್ದ ವಕೀಲರ ತಂಡದಲ್ಲಿದ್ದ ಅನಿಲ್ ದಿವಾನ್, ಎಸ್ ಎಸ್ ಜವಳಿ ಮತ್ತಿತರರನ್ನು ಕರ್ನಾಟಕ ಸರ್ಕಾರ ಬದಲಿಸಲು ಹೊರಟಾಗಲೂ ಫಾಲಿ ನಾರಿಮನ್ ಅಡ್ಡಗೋಡೆಯಾಗಿ ನಿಂತಿದ್ದರು. ಕಡೆಗೆ ರಾಜ್ಯ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದಿತ್ತು.
ನಾರಿಮನ್ ಅವರು ರಾಜ್ಯದ ಪರವಾಗಿ ಹೋರಾಡಿದ್ದು ಕೇವಲ ಕಾವೇರಿ ವಿಚಾರಕ್ಕೆ ಮಾತ್ರವೇ ಅಲ್ಲ. ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ಸಂಘರ್ಷ ಹುಟ್ಟುಹಾಕಿದ್ದ ಕೃಷ್ಣಾ ಜಲವಿವಾದ ಹಾಗೂ ಗೋವಾ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದ ಮಹದಾಯಿ ಯೋಜನೆಯನ್ನು ಅವರು ನ್ಯಾಯಾಲಯದಲ್ಲಿ ನಿರ್ವಹಿಸಿದ ರೀತಿ ಅಮೋಘವಾದದು ಎಂದೇ ನ್ಯಾಯಿಕ ವಲಯ ಸದಾ ನೆನೆಯುತ್ತದೆ.
ಅವರು ಇಲ್ಲವಾದ ಈ ಹೊತ್ತಿನಲ್ಲಿ ಕರ್ನಾಟಕದ ಗಣ್ಯರು ಅವರನ್ನು ಸ್ಮರಿಸಿರುವುದು ಹೀಗೆ “…ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಗೌರವಾದರಗಳಿಗೆ ಪಾತ್ರರಾಗಿದ್ದ ನಾರಿಮನ್ ಅವರಂತಹವರು ನ್ಯಾಯವಾದಿಯಾಗಿ ಸಿಕ್ಕಿದ್ದು ಕರ್ನಾಟಕದ ಪಾಲಿನ ಭಾಗ್ಯವಾಗಿತ್ತು. ವಕೀಲಿ ವೃತ್ತಿಯಿಂದ ಬಂದ ನನಗೆ ಅವರ ಬಗ್ಗೆ ವಿಶೇಷವಾದ ಅಭಿಮಾನ ಇತ್ತು… ಹೋಗಿ ಬನ್ನಿ ನಾರಿಮನ್ ಸಾಬ್, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರಾಗಿರುತ್ತದೆ.” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಟ್ವೀಟ್ ಮಾಡಿ “ 50 ವರ್ಷಗಳ ನನ್ನ ಸ್ನೇಹಿತ, ಖ್ಯಾತ ನ್ಯಾಯಶಾಸ್ತ್ರಜ್ಞ, ಫಾಲಿ ನಾರಿಮನ್ ಅವರು ನಿಧನರಾಗಿದ್ದಾರೆ ಎಂದು ತಿಳಿದು ನಾನು ತುಂಬಾ ದುಃಖಿತನಾಗಿದ್ದು ವಿಚಲಿತನಾಗಿದ್ದೇನೆ. ಅವರು ನನ್ನ ಸ್ನೇಹಿತ ಮಾತ್ರವಲ್ಲ, ಕರ್ನಾಟಕದ ಒಬ್ಬ ಮಹಾನ್ ಸ್ನೇಹಿತ ಮತ್ತು ಭಾರತದ ಹೆಮ್ಮೆಯ ಮಗ. ನಾನು ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ” ಎಂದಿದ್ದಾರೆ. ಅಲ್ಲದೆ ಅವರ ನಿಧನದ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತು ಸಂತಾಪ ನಿರ್ಣಯ ಕೈಗೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.
ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಕಾನೂನು ಹೋರಾಟದಲ್ಲಿ ಅವರ ಪಾತ್ರ ಸ್ಮರಣೀಯವಾದದ್ದು ಎಂದು ಸಚಿವ ಎಂ ಬಿ ಪಾಟೀಲ ಸ್ಮರಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಕೂಡ ಅಪಾರ ದುಃಖ ವ್ಯಕ್ತಪಡಿಸಿದ್ದಾರೆ.