ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸ್‌: ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಿದ ಹೈಕೋರ್ಟ್‌

ಯತ್ನಾಳ್‌ ಪರ ವಕೀಲ ವೆಂಕಟೇಶ್‌ ದಳವಾಯಿ ಅವರು ತಮ್ಮ ಅರ್ಜಿಯಲ್ಲಿ ಲೋಕಾಯುಕ್ತವನ್ನು ಪ್ರತಿವಾದಿಯನ್ನಾಗಿಸಲು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ.
ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸ್‌: ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಿದ ಹೈಕೋರ್ಟ್‌

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದು ಲೋಕಾಯುಕ್ತ ತನಿಖೆ ನೀಡಿರುವ ಹೊರತಾಗಿಯೂ ಸಿಬಿಐ ಡಿ ಕೆ ಶಿವಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡುತ್ತಿದೆ ಎಂದು ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಯತ್ನಾಳ್‌ ಪರ ವಕೀಲ ವೆಂಕಟೇಶ್‌ ದಳವಾಯಿ ಅವರು ತಮ್ಮ ಅರ್ಜಿಯಲ್ಲಿ ಲೋಕಾಯುಕ್ತವನ್ನು ಪ್ರತಿವಾದಿಯನ್ನಾಗಿಸಲು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿತು. ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು ಅರ್ಜಿಯ ಪ್ರತಿಯನ್ನು ಅಡ್ವೊಕೇಟ್‌ ಜನರಲ್‌ ಹಾಗೂ ಶಿವಕುಮಾರ್‌ ಅವರ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ಜೊತೆ ಹಂಚಿಕೊಳ್ಳಲು ನಿರ್ದೇಶಿಸಿದ ನ್ಯಾಯಾಲಯ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು.  

ವಿಚಾರಣೆ ವೇಳೆ ಹಿರಿಯ ವಕೀಲ ಉದಯ್‌ ಹೊಳ್ಳ, ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌, ಲೋಕಾಯುಕ್ತ ಪರ ವಕೀಲ ಬಿ ಬಿ ಪಾಟೀಲ್‌ ಹಾಜರಿದ್ದರು.

ಪ್ರಕರಣದ ಹಿನ್ನೆಲೆ: 2019ರಲ್ಲಿ ಬಿಜೆಪಿ ಸರ್ಕಾರವು ಡಿ ಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ಗಳಿಕೆ ಪ್ರಕರಣದ ತನಿಖೆಗೆ ಸಿಬಿಐಗೆ ಅನುಮತಿಸಿತ್ತು. ಇದನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ನವೆಂಬರ್ 28ರಂದು ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಮೇಲ್ಮನವಿ ಹಿಂಪಡೆದಿದ್ದರು. ಹೀಗಾಗಿ, ವಿಭಾಗೀಯ ಪೀಠವು ಅರ್ಜಿ ಇತ್ಯರ್ಥಪಡಿಸಿತ್ತು. ಇದಕ್ಕೆ ಆಕ್ಷೇಪಿಸಿ ಬಿಜೆಪಿ ಶಾಸಕ ಯತ್ನಾಳ್ ಅವರು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಸಿಬಿಐ ಸಹ ಹೈಕೋರ್ಟ್ ಕದತಟ್ಟಿತು.

Also Read
ಡಿಕೆಶಿ ವಿರುದ್ದದ ಸಿಬಿಐ ತನಿಖೆಗೆ ಅನುಮತಿ ಹಿಂಪಡೆತ: ಯತ್ನಾಳ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ; ಕಾಲಾವಕಾಶ ಕೋರಿದ ಎಜಿ

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತ ಪೀಠ ವಿಚಾರಣೆ ನಡೆಸುವುದು ಸೂಕ್ತ ಎಂದು ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇರಿಸಬೇಕು ರಿಜಿಸ್ಟ್ರಿಗೆ ಸೂಚಿಸಿತ್ತು. ಅದರಂತೆ ಅರ್ಜಿಯನ್ನು ನ್ಯಾಯಮೂರ್ತಿ ಕೆ ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com