.jpeg?w=480&auto=format%2Ccompress&fit=max)
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಇಂಡಿಯಾ ಅಧಿಕಾರಿಗಳ ವಿರುದ್ದ ತನಿಖೆ ಆರಂಭಿಸಿರುವ ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆಗೆ ಸಂಬಂಧಿಸಿದಂತೆ ಮೂರನೇ ವರದಿ ಸಲ್ಲಿಸಿದ್ದು, ಅಗತ್ಯ ನಿರ್ದೇಶನಗಳನ್ನು ಫೆಬ್ರವರಿ 27ರಂದು ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬಿಜೆಪಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ತನಿಖೆಗೆ ಸಂಬಂಧಿಸಿದ ಮೂರನೇ ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಕೆಲವು ನಿರ್ದೇಶನಗಳನ್ನು ನ್ಯಾಯಾಲಯದಿಂದ ಬಯಸಿದ್ದೇವೆ” ಎಂದರು.
ಆಗ ಪೀಠವು “ಸಿಬಿಐ ಸಲ್ಲಿಸಿರುವ ತನಿಖಾ ವರದಿ ಪರಿಶೀಲಿಸಿ, ಫೆಬ್ರವರಿ 27ರಂದು ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು” ಎಂದಿತು.
ವಾಲ್ಮೀಕಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ಬೇರೆ ಏಜೆನ್ಸಿಗಳ ಕಸ್ಟಡಿಯಲ್ಲಿವೆ. ಈ ಸಂಬಂಧ ಸಿಐಡಿ, ಜಾರಿ ನಿರ್ದೇಶನಾಲಯ, ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕಿದೆ ಎಂದು ಸಿಬಿಐ ಕೋರಿದೆ.