ಸಿಬಿಎಸ್‌ಇ ಪೂರಕ ಪರೀಕ್ಷೆ: ಸೆ.24ರವರೆಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡದಂತೆ ಯುಜಿಸಿಗೆ ಸುಪ್ರೀಂ ಕೋರ್ಟ್ ಆದೇಶ

“ಸಿಬಿಎಸ್‌ಇ ಅಕ್ಟೋಬರ್ ಅಂತ್ಯಕ್ಕೆ ಫಲಿತಾಂಶ ಪ್ರಕಟಿಸಿದರೆ ನೀವು ನವೆಂಬರ್ ಮೊದಲ ವಾರದಲ್ಲಿ ಪ್ರವೇಶಾತಿ ಪೂರ್ಣಗೊಳಿಸಬಹುದು” ಎಂದು ನ್ಯಾಯಾಯಲವು ಯುಜಿಸಿಗೆ ಸಲಹೆ ನೀಡಿದೆ.
CBSE and Supreme Court
CBSE and Supreme Court
Published on

ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಪೂರಕ ಪರೀಕ್ಷೆ ತಡವಾಗಿರುವ ಕಾರಣ ಕಾಲೇಜು ಪ್ರವೇಶಾತಿಗೆ ವಿಧಿಸಲಾಗಿರುವ ಗಡುವನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 24ರ ವರೆಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ನಿರ್ದೇಶಿಸಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಂಜೀವ್ ಖನ್ನಾ ಅವರಿದ್ದ ವಿಭಾಗೀಯ ಪೀಠವು ಪ್ರಕರಣವನ್ನು ಆಲಿಸಿತು. ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಣೆಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿಯನ್ನು ಸಿಬಿಎಸ್‌ಸಿ ತಿಳಿಸಲಿದೆ. ಅಲ್ಲಿಯವರೆಗೆ ಶೈಕ್ಷಣಿಕ ಕ್ಯಾಲೆಂಡ್ ಬಿಡುಗಡೆ ಮಾಡದಂತೆ ಯುಜಿಸಿಗೆ ನ್ಯಾಯಾಲಯ ಸೂಚಿಸಿದೆ.

ಸಿಬಿಎಸ್ಇ ಪೂರಕ ಪರೀಕ್ಷೆ ಇಂದಿನಿಂದ ಆರಂಭವಾಗಿ ಸೆಪ್ಟೆಂಬರ್ 29ರಂದು ಪೂರ್ಣಗೊಳ್ಳಲಿದೆ. ಫಲಿತಾಂಶ ಪ್ರಕಟವಾಗುವ ವೇಳೆಗೆ ಕಾಲೇಜು ಪ್ರವೇಶಾತಿ ಪ್ರಕ್ರಿಯೆ ಮುಗಿದಿದ್ದರೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಂಚಿತರಾಗಲಿದ್ದಾರೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಟಂಖಾ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಖಾನ್ವಿಲ್ಕರ್ ಅವರು ಯುಜಿಸಿಗೆ ಹೀಗೆ ಹೇಳಿದರು.

“ಇದೊಂದು ವಿಚಿತ್ರ ಸನ್ನಿವೇಶವಾಗಿದ್ದು, ನೀವು ಈ ವಿದ್ಯಾರ್ಥಿಗಳನ್ನು ಒಳಗೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಇದೊಂದು ಅಸಾಧಾರಣ ವರ್ಷವಾಗಿರುವುದರಿಂದ ನೀವು ಈ ಅವಕಾಶ ಮಾಡಿಕೊಡಬೇಕಿದೆ. 2 ಲಕ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಹೊಡೆತ ನೀಡಲಾಗದು. ಸಿಬಿಎಸ್‌ಇ ಅಕ್ಟೋಬರ್ ಅಂತ್ಯಕ್ಕೆ ಫಲಿತಾಂಶ ಪ್ರಕಟಿಸಿದರೆ ನೀವು ನವೆಂಬರ್ ಮೊದಲ ವಾರದಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿ.”
ನ್ಯಾ. ಎ ಎಂ ಖಾನ್ವಿಲ್ಕರ್

ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಅಂತಿಮಗೊಳಿಸಲಾಗಿದ್ದು, ನಿನ್ನೆಯೇ ಅದನ್ನು ಬಿಡುಗಡೆ ಮಾಡಬೇಕಿತ್ತು. ಅಕ್ಟೋಬರ್ ಅಂತ್ಯದ ವೇಳೆಗೆ ಪ್ರವೇಶಾತಿ ಪೂರ್ಣಗೊಳ್ಳಲಿದೆ ಎಂದು ಯುಜಿಸಿ ಪರ ವಕೀಲ ಕುರುಪ್ ನ್ಯಾಯಾಲಯಕ್ಕೆ ವಿವರಿಸಿದರು.

“ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಗುರುವಾರದವರೆಗೆ ಪ್ರಕಟಿಸಬಾರದು. ಸಿಬಿಎಸ್‌ಇ ಫಲಿತಾಂಶ ಪ್ರಕಟಣೆಯ ಬಗ್ಗೆ ನಮಗೆ ತಿಳಿಸಿದ ನಂತರ ನೀವಿಬ್ಬರೂ ಸಮನ್ವಯ ಸಾಧಿಸಿ. 2 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಸಣ್ಣದೇನಲ್ಲ. ಈ ವಿಶೇಷವಾದ ವರ್ಷದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಸಿಬಿಎಸ್‌ಇ ಜೊತೆಗೆ ನೀವು ಒಟ್ಟಾಗಿ ಕೆಲಸ ಮಾಡಬೇಕಿದೆ.”
ನ್ಯಾ. ಎ ಎಂ ಖಾನ್ವಿಲ್ಕರ್
Also Read
ಯುಜಿಸಿ ನಿಯಮಾವಳಿಯಂತೆ ಸೆಪ್ಟೆಂಬರ್ 30ರ ಒಳಗೆ ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

16 ಭಾಷೆಗಳಲ್ಲಿ ಉತ್ತರ ಪತ್ರಿಕೆ ಪರಿಶೀಲಿಸಬೇಕಿರುವುದರಿಂದ ಫಲಿತಾಂಶ ಪ್ರಕಟಿಸಲು 3ರಿಂದ 4 ವಾರಗಳು ಬೇಕಿದೆ ಎಂದು ಸಿಬಿಎಸ್‌ಇ ಪರ ವಕೀಲ ರೂಪೇಶ್ ಕುಮಾರ್ ಹೇಳಿದರು. ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಯ ದಿನಾಂಕದ ಬಗ್ಗೆ ಸಿಬಿಎಸ್‌ಇ ನ್ಯಾಯಾಲಯಕ್ಕೆ ಗುರುವಾರ ಮಾಹಿತಿ ನೀಡಲಿರುವುದರಿಂದ ಸೆಪ್ಟೆಂಬರ್ 24ಕ್ಕೆ ವಿಚಾರಣೆ ಮುಂದೂಡಲಾಗಿದೆ.

Kannada Bar & Bench
kannada.barandbench.com