ಪ್ರಸಕ್ತ ಸಾಲಿನ ಹತ್ತು ಮತ್ತು ಹನ್ನೆರಡನೇ ತರಗತಿ ಪರೀಕ್ಷಾ ಫಲಿತಾಂಶ ಲೆಕ್ಕಾಚಾರ ಮಾಡುವಾಗ ಟರ್ಮ್ ಪರೀಕ್ಷೆಯ ಅಂಕಗಳಿಗೆ ನೀಡಬೇಕಾದ ಮನ್ನಣೆ ಬಗ್ಗೆ ಕೊನೆಯವರೆಗೂ ವಿದ್ಯಾರ್ಥಿಗಳನ್ನು ಕತ್ತಲೆಯಲ್ಲಿಟ್ಟ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ನಡೆಯಲ್ಲಿ ಸ್ಪಷ್ಟ ಲೋಪಗಳು ಕಂಡು ಬಂದಿವೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ [ದೇವಶ್ರೀ ಬಾಲಿ ಮತ್ತು ಸಿಬಿಎಸ್‌ಇ ಇನ್ನಿತರರ ನಡುವಣ ಪ್ರಕರಣ].
ಹತ್ತು ಮತ್ತು ಹನ್ನರಡನೇ ತರಗತಿಗಳ ಅಂತಿಮ ಫಲಿತಾಂಶವನ್ನು ನೀಡುವ ವೇಳೆ ಕ್ರಮವಾಗಿ ಒಂದು ಮತ್ತು ಎರಡನೇ ಟರ್ಮ್ ಪರೀಕ್ಷೆಗಳಿಂದ ಶೇ 30, ಶೇ 70 ಅಂಕಗಳನ್ನು ಪರಿಗಣಿಸುವ ಮನ್ನಣೆ ಸೂತ್ರದ ಮಾನದಂಡ ಅನುಮೋದಿಸುವಾಗ ಸಿಬಿಎಸ್‌ಇ ನ್ಯೂನತೆಯ ವಿಧಾನ ಅಳವಡಿಸಿಕೊಂಡಿದೆ ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಹೇಳಿದರು.
ಸಿಬಿಎಸ್ಇ ಅಧ್ಯಕ್ಷರು ಅಥವಾ ಇತರ ಯಾವುದೇ ಸಕ್ಷಮ ಪ್ರಾಧಿಕಾರ ಹೊಸ ಮನ್ನಣೆ ಸೂತ್ರದ ಬಗ್ಗೆ ಶಿಫಾರಸುಗಳನ್ನು ಸ್ವೀಕರಿಸಿ, ಜಾರಿಗೊಳಿಸಿ ಮತ್ತು ಸೂಚಿಸುವ ಮೂಲಕ ಆದೇಶ ರವಾನಿಸಿದ್ದಾರೆ ಎಂದು ತಿಳಿಸುವ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಫಲಿತಾಂಶದ ಘೋಷಣೆಗೆ ಕೇವಲ ಒಂದು ದಿನದ ಮೊದಲು ಸಭೆ ನಡೆಸಿದ ಫಲಿತಾಂಶ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರ ಟರ್ಮ್-1 ಗೆ 30% ಟರ್ಮ್-II ಗೆ 70% ಮನ್ನಣೆ (ಥಿಯರಿ ಪೇಪರ್‌ಗಳಿಗಾಗಿ) ನೀಡುವ ಮೂಲಕ XII ಮತ್ತು X ತರಗತಿಯ ಅಂತಿಮ ಫಲಿತಾಂಶವನ್ನು ಸಿದ್ಧಪಡಿಸಲು ನಿರ್ಧರಿಸಿತು. ಜೊತೆಗೆ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳ ಫಲಿತಾಂಶವನ್ನು ಮರುದಿನವೇ ಸಿದ್ಧಪಡಿಸಿ ಪ್ರಕಟಿಸಲಾಯಿತು ಎಂದು ನ್ಯಾಯಾಲಯ ಹೇಳಿದೆ.
ಇದು ಸ್ಪರ್ಧೆ ಮುಗಿದ ಮೇಲೆ ಅದರ ನಿಯಮಾವಳಿ ಬದಲಿಸಲು ಹೊರಟಂತಿದ್ದು ಅತಿರೇಕದಿಂದ ಕೂಡಿದ ಮನಸೋ ಇಚ್ಛೆಯ ನಿರ್ಧಾರವಾಗಿದೆ ಎಂದು ನ್ಯಾಯಮೂರ್ತಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. “ಇದೆಲ್ಲವೂ ಆಶಾದಾಯಕ ಬೆಳವಣಿಗೆಗಳಲ್ಲ. ಸಿಬಿಎಸ್‌ಇಯ ಈ ಸ್ಥಿತಿ ಚಿಂತೆಗೀಡುಮಾಡುತ್ತದೆ. ತನ್ನ ನಡೆ ಮತ್ತು ಸಾರ್ವಜನಿಕವಾಗಿ ಹೊರಡಿಸಿದ ಸುತ್ತೋಲೆಗಳ ಮೂಲಕ ಅರ್ಜಿದಾರೆ ಸೇರಿದಂತೆ ವಿದ್ಯಾರ್ಥಿಗಳ ನ್ಯಾಯಸಮ್ಮತ ಆಕಾಂಕ್ಷೆಗಳಿಗೆ ಸಿಬಿಎಸ್‌ಇ ಧಕ್ಕೆ ತಂದಿದೆ” ಎಂದು ನ್ಯಾಯಾಲಯ ಹೇಳಿದೆ.
ಜುಲೈ 2021ರ ಸುತ್ತೋಲೆಯಲ್ಲಿ ಹೇಳಿರುವಂತೆ ಟರ್ಮ್ I ಮತ್ತು ಟರ್ಮ್ IIನಲ್ಲಿ ಗಳಿಸಿದ ಥಿಯರಿ ಪೇಪರ್‌ಗಳಿಗೆ ಸಮಾನ ಅಂಕ (ಶೇ 50-50) ನಿಗದಿಪಡಿಸಿದ್ದ ಸಿಬಿಎಸ್‌ಇಯ ಹಿಂದಿನ ಸೂತ್ರ ಬಳಸಿಕೊಂಡು ತನ್ನ ಅಂಕಗಳನ್ನು ಲೆಕ್ಕಹಾಕಬೇಕು ಎಂದು ಒತ್ತಾಯಿಸಿ ಹನ್ನೆರಡನೇ ತರಗತಿಯ ವಿದ್ಯಾರ್ಥಿನಿ ದೇವಶ್ರೀ ಬಾಲಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ವಿದ್ಯಾರ್ಥಿಗಳ ಬಹುಸಂಖ್ಯೆಯ ಹಿತದೃಷ್ಟಿಯಿಂದ ಮತ್ತು ನ್ಯಾಯವೆನ್ನುವುದೇ ಸ್ವತಃ ಅವ್ಯವಸ್ಥೆಯ ಪ್ರತಿನಿಧಿ ಆಗದಂತೆ ನೋಡಿಕೊಳ್ಳುವ ಸಲುವಾಗಿ ಪರಿಷ್ಕೃತ ಯೋಜನೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಆದರೆ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಪೀಠ ಜುಲೈ 2021ರಲ್ಲಿ ಘೋಷಿಸಲಾದ ಶೇ 50- 50 ಅಂಕದ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲು ಸಿಬಿಎಸ್‌ಇಗೆ ಸೂಚಿಸಿತು. ಈ ವಿಧಾನದಲ್ಲಿ ಲೆಕ್ಕಹಾಕಲಾದ ಅಂಕಗಳುಳ್ಳ ಅಂಕಪಟ್ಟಿಯನ್ನು ಆದಷ್ಟು ಶೀಘ್ರವಾಗಿ, ಸಾಧ್ಯವಾದಷ್ಟು ಎರಡು ದಿನಗಳೊಳಗೆ ಅಪ್‌ಲೋಡ್ ಮಾಡಿ ವಿದ್ಯಾರ್ಥಿನಿಗೆ ಸಿಗುವ ಹಾಗೆ ಡಿಜಿಲಾಕರ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಪೀಠ ಹೇಳಿತು.