ಅಮೆಜಾನ್‌ಗೆ ₹202 ಕೋಟಿ ದಂಡ ವಿಧಿಸಿದ ಸಿಸಿಐ; ಅಮೆಜಾನ್‌-ಫ್ಯೂಚರ್‌ ಒಪ್ಪಂದ ತಾತ್ಕಾಲಿಕವಾಗಿ ಅಮಾನತು

ಒಪ್ಪಂದದ ವಾಸ್ತವಿಕ ವ್ಯಾಪ್ತಿ ಮತ್ತು ಉದ್ದೇಶವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನವನ್ನು ಅಮೆಜಾನ್‌ ಮಾಡಿದೆ ಎಂದು 57 ಪುಟಗಳ ಆದೇಶದಲ್ಲಿ ಹೇಳಿದ ಸಿಸಿಐ.
CCI, Amazon

CCI, Amazon

Published on

ಫ್ಯೂಚರ್‌ ಕೂಪನ್ಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ (ಎಫ್‌ಸಿಪಿಎಲ್‌) ಶೇ. 49ರಷ್ಟು ಪಾಲು ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಮಾಹಿತಿ ಹಂಚಿಕೊಳ್ಳಲು ಅಮೆಜಾನ್‌.ಕಾಂ ಎನ್‌ ವಿ ಇನ್ವೆಸ್ಟ್‌ಮೆಂಟ್‌ ಹೋಲ್ಡಿಂಗ್ಸ್‌ ಎಲ್‌ಎಲ್‌ಸಿ (ಅಮೆಜಾನ್) ವಿಫಲವಾಗಿದೆ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಹೇಳಿದ್ದು, ಅಮೆಜಾನ್‌ಗೆ ಶುಕ್ರವಾರ ಒಟ್ಟು ₹202 ಕೋಟಿ ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಎರಡು ತಿಂಗಳಲ್ಲಿ ಪಾವತಿಸಲು ಸಿಸಿಐ ಆದೇಶಿಸಿದೆ.

ಒಪ್ಪಂದದ ವಾಸ್ತವಿಕ ವ್ಯಾಪ್ತಿ ಮತ್ತು ಉದ್ದೇಶವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನವನ್ನು ಅಮೆಜಾನ್‌ ಮಾಡಿದೆ ಎಂದು 57 ಪುಟಗಳ ಆದೇಶದಲ್ಲಿ ಸಿಸಿಐ ಹೇಳಿದ್ದು ಇದಕ್ಕಾಗಿ ₹2 ಕೋಟಿ ದಂಡ ವಿಧಿಸಿದೆ. ಒಪ್ಪಂದದ ಭಾಗವಾಗಿ ಸ್ಪರ್ಧಾ ಕಾಯಿದೆ 2002ರ ಸೆಕ್ಷನ್‌ 6(2)ರ ಪ್ರಕಾರ, ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ ಷೇರುದಾರರ ಒಪ್ಪಂದವನ್ನು ಗುರುತಿಸುವ, ಮಾಹಿತಿ ನೀಡುವ ವಿಷಯದಲ್ಲಿ ಅಮೆಜಾನ್‌ ವಿಫಲವಾಗಿರುವುದಕ್ಕೆ ₹200 ಕೋಟಿ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ಕಾಯಿದೆಯಲ್ಲಿ ಹೇಳಲಾಗಿರುವಂತೆ ಫಾರ್ಮ್‌ ಎರಡರಲ್ಲಿ 60 ದಿನಗಳ ಒಳಗಾಗಿ ಉದ್ದೇಶಿತ ಒಪ್ಪಂದದ ಕುರಿತು ಸಿಸಿಐಗೆ ಅಮೆಜಾನ್‌ ಮಾಹಿತಿ ನೀಡುವವರೆಗೆ ಒಪ್ಪಂದವನ್ನು ಅಮಾನತಿನಲ್ಲಿ ಇಡಲಾಗುವುದು. ಈ ಪ್ರಕ್ರಿಯೆ ಅನುಸರಿಸಿದ ಬಳಿಕ ಸಿಸಿಐ ಅದನ್ನು ವಿಲೇವಾರಿ ಮಾಡಲಿದೆ ಎಂದು ಹೇಳಲಾಗಿದೆ.

Kannada Bar & Bench
kannada.barandbench.com