

ಗ್ರಾಹಕರ ಹಕ್ಕುಗಳು ಮತ್ತು ಕಾನೂನು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗ್ರಾಹಕರ ಬಿಲ್‌ನಲ್ಲಿಯೇ ಸೇವಾ ಶುಲ್ಕ ಸೇರಿಸಿದ್ದ, ಮುಂಬೈನಲ್ಲಿ ಬೋರಾ ಬೋರಾ ಹೋಟೆಲ್ ನಡೆಸುವ ಚೈನಾ ಗೇಟ್ ರೆಸ್ಟರಂಟ್ ಪ್ರೈವೇಟ್ ಲಿಮಿಟೆಡ್ ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ₹50,000 ದಂಡ ವಿಧಿಸಿದೆ.
ಹೀಗೆ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯಿದೆ, 2019ರ ಅಡಿಯಲ್ಲಿ ಅನ್ಯಾಯದ ವ್ಯಾಪಾರ ಪದ್ದತಿ ಎಂದು ಪ್ರಾಧಿಕಾರ ಹೇಳಿದ್ದು, ಸೇವಾ ಶುಲ್ಕವನ್ನು ಹಾಗೆ ಸೇರಿಸದಂತೆ ಬಿಲ್ಲಿಂಗ್ ಸಾಫ್ಟ್‌ವೇರ್ ಅನ್ನು ತಕ್ಷಣವೇ ಪರಿಷ್ಕರಿಸಬೇಕು ಎಂದು ರೆಸ್ಟರಂಟ್ ಮಾಲೀಕರಿಗೆ ನಿರ್ದೇಶನ ನೀಡಿದೆ.
ಗಮನಾರ್ಹವಾಗಿ, 2022ರ ಸಿಸಿಪಿಎ ಮಾರ್ಗಸೂಚಿಗಳನ್ನು ದೆಹಲಿ ಹೈಕೋರ್ಟ್ ಕಳೆದ ಮಾರ್ಚ್‌ನಲ್ಲಿ ಎತ್ತಿ ಹಿಡಿದಿತ್ತು. ಆ ಮಾರ್ಗಸೂಚಿಗಳ ಪ್ರಕಾರ, ಹೋಟೆಲ್‌ಗಳು ಮತ್ತು ರೆಸ್ಟರಂಟುಗಳು ಆಹಾರ ಬಿಲ್‌ಗಳಿಗೆ ಸೇವಾ ಶುಲ್ಕವನ್ನು ಸ್ವಯಂಚಾಲಿತವಾಗಿ ಸೇರಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ರು.
ಈ ಮಾರ್ಗಸೂಚಿಗಳನ್ನು ನ್ಯಾಷನಲ್ ರೆಸ್ಟರಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ದೆಹಲಿಯ ಫೆಡರೇಶನ್ ಆಫ್ ಹೋಟೆಲ್ ಅಂಡ್ ರೆಸ್ಟರಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಈ ಮಾರ್ಗಸೂಚಿಗಳಿಗೆ 2022ರ ಜುಲೈ 20ರಂದು ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು. ಆದರೆ, ನಂತರ ಪ್ರಕರಣದಲ್ಲಿ ಹೈಕೋರ್ಟ್ ಅಂತಿಮ ತೀರ್ಪು ನೀಡಿದ ಬಳಿಕ, ಆ ಮಾರ್ಗಸೂಚಿಗಳು ಮತ್ತೆ ಜಾರಿಗೆ ಬಂದಿದ್ದವು.
ಮುಂಬೈನ ಚೈನಾ ಗೇಟ್ (ಬೋರಾ ಬೋರಾ) ರೆಸ್ಟರಂಟ್ ವಿರುದ್ಧ ಗ್ರಾಹಕನೊಬ್ಬ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ನೀಡಿದ್ದರು. ಬಿಲ್ ಮೊತ್ತದ ಮೇಲೆ ಹಾಗೂ ಜಿಎಸ್‌ಟಿ ಮೇಲೂ ಹೆಚ್ಚುವರಿಯಾಗಿ ಶೇ 10ರಷ್ಟು ಸೇವಾ ಶುಲ್ಕ ವಿಧಿಸಲಾಗಿದ್ದು ಅದನ್ನು ತೆಗೆದುಹಾಕಲು ನಿರಾಕರಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ಸ್ವಯಂಪ್ರೇರಿತವಾಗಿ ತನಿಖೆ ನಡೆಸಿದ್ದ ಸಿಸಿಪಿಎ, ದೆಹಲಿ ಹೈಕೋರ್ಟ್ 2025ರ ಮಾರ್ಚ್ 28ರಂದು ತೀರ್ಪು ನೀಡಿದ್ದರೂ ರೆಸ್ಟರಂಟ್ ಸೇವಾ ಶುಲ್ಕವನ್ನು ಸೇರಿಸುತ್ತಿದ್ದುದನ್ನು ಪತ್ತೆಹಚ್ಚಿತು.
ಬಿಲ್‌ಗಳು ಸಾಫ್ಟ್‌ವೇರ್ ಮೂಲಕ ತಯಾರಾಗುತ್ತಿದ್ದು, ಇದರಿಂದ ಎಲ್ಲಾ ಗ್ರಾಹಕರ ಮೇಲೂ ಸೇವಾ ಶುಲ್ಕ ಸ್ವಯಂಚಾಲಿತವಾಗಿ ಅನ್ವಯವಾಗುತ್ತಿತ್ತು ಎಂಬುದು ಪತ್ತೆಯಾಗಿತ್ತು.
ರೆಸ್ಟರಂಟ್, ಸೇವಾ ಶುಲ್ಕವನ್ನು ಗ್ರಾಹಕರ ಒಪ್ಪಿಗೆ ಪಡೆದೇ ವಸೂಲಿ ಮಾಡಲಾಗಿದೆ ಎಂದು ವಾದಿಸಿತು. ಜೊತೆಗೆ ಗ್ರಾಹಕನಿಗೆ ₹624 ಮರುಪಾವತಿಗೂ ಮುಂದಾಯಿತು.
ಆದರೆ ತನಿಖೆಯಲ್ಲಿ, ಸೇವಾ ಶುಲ್ಕದ ಮೇಲೆ ಜಿಎಸ್‌ಟಿ ವಿಧಿಸಿರುವುದು, ಗ್ರಾಹಕರ ದೂರುಗಳಿಗೆ ಸ್ಪಂದಿಸದಿರುವುದು, ಸಾರ್ವಜನಿಕ ಇಮೇಲ್ ವಿಳಾಸ ಕಾರ್ಯನಿರ್ವಹಿಸದಿರುವುದು ಹಾಗೂ ತನಿಖೆಗೆ ಸಹಕರಿಸದಿರುವುದು ಬೆಳಕಿಗೆ ಬಂದಿತ್ತು. ಇದನ್ನು ಗ್ರಾಹಕ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಯಿತು.
2025ರ ಏಪ್ರಿಲ್ 30ರಿಂದ ಸೇವಾ ಶುಲ್ಕ ನಿಲ್ಲಿಸಿರುವುದಾಗಿ ಹಾಗೂ ಹೊಸ ಮೆನು ಕಾರ್ಡ್‌ಗಳನ್ನು ಜಾರಿಗೆ ತಂದಿರುವುದಾಗಿ ರೆಸ್ಟರಂಟ್ ತಿಳಿಸಿತು. ಆದರೆ , ಸೇವಾ ಶುಲ್ಕ ಗ್ರಾಹಕರ ಇಚ್ಛೆಯ ಮೇರೆಗೆ ವಿಧಿಸಲಾಗಿದೆ ಎಂಬ ವಾದವನ್ನು ಸಿಸಿಪಿಎ ಅಂತಿಮವಾಗಿ ತಿರಸ್ಕರಿಸಿತು.
ಅಂತಿಮವಾಗಿ, ಸಿಸಿಪಿಎ ರೆಸ್ಟರಂಟ್ ತನ್ನಿಂತಾನೇ ಸೇವಾ ಶುಲ್ಕ ಸೇರಿಸುವ ವ್ಯವಸ್ಥೆಯನ್ನು ತೆಗೆದುಹಾಕಬೇಕು. ₹50,000 ದಂಡ ಪಾವತಿಸಬೇಕು ಹಾಗೂ ಸಮರ್ಪಕ ದೂರು ಪರಿಹಾರ ವ್ಯವಸ್ಥೆ ಮತ್ತು ಸಕ್ರಿಯ ಸಾರ್ವಜನಿಕ ಇಮೇಲ್ ವಿಳಾಸವನ್ನು ಕಾಯ್ದುಕೊಳ್ಳಬೇಕು ಹಾಗೂ 15 ದಿನಗಳೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶಿಸಿತು.