ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ನಡುವಿನ ಕೃಷ್ಣಾ ಜಲ ವಿವಾದ ಪರಿಹಾರಕ್ಕಾಗಿ ಸೃಷ್ಟಿಸಲಾಗಿರುವ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ಹೆಚ್ಚಿನ ವರದಿ ಸಲ್ಲಿಸುವ ಅವಧಿಯನ್ನು 2024ರ ಮಾರ್ಚ್ 31ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯವು ಅಧಿಸೂಚನೆ ಪ್ರಕಟಿಸಿದೆ.
ಅಂತರರಾಜ್ಯ ಜಲ ವಿವಾದಗಳ ಕಾಯಿದೆ 1956ರ ಸೆಕ್ಷನ್ 5, ಉಪ ಸೆಕ್ಷನ್ (3)ರ ಅಡಿ ನ್ಯಾಯಾಧಿಕರಣ ಹೆಚ್ಚುವರಿ ವರದಿ ಸಲ್ಲಿಸುವ ಅವಧಿಯನ್ನು ಆಂಧ್ರಪ್ರದೇಶ ಮರು ವಿಂಗಡಣಾ ಕಾಯಿದೆ 2014ರ ಸೆಕ್ಷನ್ 89ರ ಕಲಂ (ಎ) ಮತ್ತು (ಬಿ)ರ ಪ್ರಕಾರ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ತೆಲಂಗಾಣದ ಕೋರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.
ಈ ಹಿಂದೆ ಸಮಗ್ರ ಆಂಧ್ರಪ್ರದೇಶಕ್ಕೆ ಹಂಚಿಕೆ ಮಾಡಿದ್ದ ಕೃಷ್ಣಾ ನದಿಯ ನೀರನ್ನು ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ನಡುವೆ ಹಂಚಿಕೆ ಮಾಡುವ ಕುರಿತು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೃಷ್ಣಾ ಜಲ ವಿವಾದ ನ್ಯಾಯ ಮಂಡಳಿ-1 ಹಿಂದಿನ ಆಂಧ್ರ ಪ್ರದೇಶಕ್ಕೆ 811 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಇದನ್ನು ಈ ಎರಡು ರಾಜ್ಯಗಳ ನಡುವೆ ಹಂಚಿಕೆ ಮಾಡುವ ಬಗ್ಗೆ ನ್ಯಾಯಾಧಿಕರಣ ನಿರ್ಧರಿಸಲಿದೆ. ಅದೇ ರೀತಿ, ಗೋದಾವರಿಯಿಂದ ಕೃಷ್ಣಾ ನದಿಗೆ ಪೊಲಾವರಂ ಯೋಜನೆ ಮೂಲಕ ಹರಿಸುವ ನೀರಿನ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಮಾಡಬೇಕಾದ ಹಂಚಿಕೆಯ ಬಗ್ಗೆಯೂ ನ್ಯಾಯಾಧಿಕರಣ ನಿರ್ಧರಿಸಲಿದೆ.
2004ರ ಏಪ್ರಿಲ್‌ನಲ್ಲಿ ಕೃಷ್ಣ ಜಲ ವಿವಾದ ನ್ಯಾಯಾಧಿಕರಣ ರಚಿಸಲಾಗಿದ್ದು, ಇದು ತನ್ನ ನಿರ್ಧಾರವನ್ನು ಒಳಗೊಂಡ ವರದಿಯನ್ನು 2010ರ ಡಿಸೆಂಬರ್ 30ರಂದು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಆದರೆ, ಪಕ್ಷಕಾರ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ನ್ಯಾಯ ಮಂಡಳಿಯಿಂದ ಹೆಚ್ಚಿನ ಸ್ಪಷ್ಟತೆ ಕೋರಿದ್ದವು. ಈ ನಡುವೆ ಆಂಧ್ರಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ವಿರುದ್ಧ ಅರ್ಜಿ ಸಲ್ಲಿಸಿತ್ತು. ಈ ಮಧ್ಯೆ, 2013ರ ನವೆಂಬರ್‌ನಲ್ಲಿ ನ್ಯಾಯ ಮಂಡಳಿಯು ಮೂರು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ವರದಿ ನೀಡಿತ್ತು. ಇದಕ್ಕೂ ಮುನ್ನ 2011ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯ ಮಂಡಳಿ ಆದೇಶಕ್ಕೆ ತಡೆ ನೀಡಿದ್ದರಿಂದ ಆನಂತರ ನ್ಯಾಯ ಮಂಡಳಿ ನೀಡಿರುವ ನೀರು ಹಂಚಿಕೆ ವರದಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗಿಲ್ಲ.
ಕೇಂದ್ರ ಸರ್ಕಾರವು 2014ರ ಆಗಸ್ಟ್‌ನಿಂದ ಹಲವು ಬಾರಿ ನ್ಯಾಯ ಮಂಡಳಿಯ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸುತ್ತಾ ಬಂದಿದೆ.