Supreme Court and Marital Rape
Supreme Court and Marital Rape

ವೈವಾಹಿಕ ಅತ್ಯಾಚಾರ ಪ್ರಕರಣದ ಕುರಿತು ಕೇಂದ್ರವು ರಾಜ್ಯಗಳಿಂದ ಅಭಿಪ್ರಾಯ ಕೇಳಿದೆ: ಸುಪ್ರೀಂಗೆ ಎಸ್‌ಜಿ ಮೆಹ್ತಾ ಮಾಹಿತಿ

ಉತ್ತರ ಸಲ್ಲಿಸಲು ಫೆಬ್ರವರಿ 15ರವರೆಗೆ ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್ ಮಾರ್ಚ್ 21 ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಲಿದೆ.
Published on

ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯಗಳ ಅಭಿಪ್ರಾಯ ಕೇಳಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಕಾನೂನಾತ್ಮಕ ಪರಿಣಾಮಗಳಷ್ಟೇ ಅಲ್ಲದೆ ಪ್ರಕರಣ ಸಾಮಾಜಿಕ ಪರಿಣಾಮಗಳನ್ನು ಹೊಂದಿರುವುದರಿಂದ ಪ್ರತಿಕ್ರಿಯೆ ಸಲ್ಲಿಸಲು ಅನುಮತಿ ಕೋರಲಾಗುತ್ತಿದೆ ಎಂದು ಮೆಹ್ತಾ ಹೇಳಿದ್ದಾರೆ.

ಪತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ʼಆಕೆಯ ಪ್ರಕರಣವು ಕರ್ನಾಟಕ ಹೈಕೋರ್ಟ್‌ನಲ್ಲಿದ್ದಾಗ ಕೇಂದ್ರ ಸರ್ಕಾರ ಉತ್ತರ ಸಲ್ಲಿಸದಿರಲು ನಿರ್ಧರಿಸಿತ್ತು” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ, ಈ ಬಗ್ಗೆ ತಿಳಿಸಿದ ಮೆಹ್ತಾ, ʼದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣದ (ವೈವಾಹಿಕ ಅತ್ಯಾಚಾರದ ಕುರಿತು ಸಾಮಾಜಿಕ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ವಿವರಿಸಿತ್ತು' ಎಂದು ತಿಳಿಸಿದರು. ಅಲ್ಲದೆ ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ರಾಜ್ಯಗಳಿಂದ ಅಭಿಪ್ರಾಯ ಕೇಳಿತ್ತು ಎಂಬುದಾಗಿ ವಿವರಿಸಿದರು.

ಉತ್ತರ ಸಲ್ಲಿಸಲು ಫೆಬ್ರವರಿ 15ರವರೆಗೆ ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಮಾರ್ಚ್ 21ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಲಿದೆ.

ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 375 ವಿನಾಯಿತಿ 2ರ ಕುರಿತು ದೆಹಲಿ ಹೈಕೋರ್ಟ್‌ ನೀಡಿದ್ದ ಭಿನ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್‌ ವೈವಾಹಿಕ ಅತ್ಯಾಚಾರಕ್ಕೆ ನೀಡಿದ್ದ ವಿನಾಯಿತಿಯನ್ನು ರದ್ದುಗೊಳಿಸಿದರೆ ನ್ಯಾ. ಸಿ ಹರಿಶಂಕರ್  ಅದನ್ನು ಎತ್ತಿ ಹಿಡಿದಿದ್ದರು.

ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಪತಿಯು ಸಂಭೋಗ ನಡೆಸುವುದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಹೀಗಾಗಿ ಅದನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾ. ಶಕ್ದೆರ್‌ ತಿಳಿಸಿದ್ದರು.

ಆದರೆ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ. ಶಂಕರ್‌, “ನಾನು ಇದನ್ನು ಒಪ್ಪುವುದಿಲ್ಲ. ವಿನಾಯಿತಿ 14, 19 ಅಥವಾ 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎನ್ನಲು ಯಾವುದೇ ಆಧಾರ ಇಲ್ಲ. ಇದರಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ಅರ್ಜಿಯನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ಭಾವಿಸುವೆ” ಎಂದಿದ್ದರು.

ಗಮನಾರ್ಹ ಅಂಶವೆಂದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ʼವೈದ್ಯಕೀಯ ಗರ್ಭಪಾತ ಕಾಯಿದೆಯ ಉದ್ದೇಶಗಳಿಗೆ ಸೀಮಿತವಾಗಿ ಮಹಿಳೆಯು ಬಲವಂತವಾಗಿ ಗರ್ಭ ಧರಿಸುವುದರಿಂದ ರಕ್ಷಣೆ ನೀಡುವುದಕ್ಕಾಗಿ ವೈವಾಹಿಕ ಅತ್ಯಾಚಾರವನ್ನು ʼಅತ್ಯಾಚಾರದʼ ಅರ್ಥವ್ಯಾಪ್ತಿಗೆ ತರಬೇಕಾಗುತ್ತದೆʼ ಎಂದಿತ್ತು.

ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಲೈಂಗಿಕ ಗುಲಾಮಳನ್ನಾಗಿ ಬಳಸುತ್ತಿದ್ದ ಆರೋಪಿಯೊಬ್ಬನ ವಿರುದ್ಧ ಐಪಿಸಿ ಸೆಕ್ಷನ್‌ 376ರ ಅಡಿ ಹೂಡಿದ್ದ ಅತ್ಯಾಚಾರ ಆರೋಪ ರದ್ದುಗೊಳಿಸಲು ನಿರಾಕರಿಸಿ ಕರ್ನಾಟಕ ಹೈಕೋರ್ಟ್‌ ಮಾರ್ಚ್ 23ರಂದು ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಕಳೆದ ಜುಲೈನಲ್ಲಿ ತಡೆ ನೀಡಿತ್ತು.

Kannada Bar & Bench
kannada.barandbench.com