ಕೇಂದ್ರ ಸರ್ಕಾರವು ಸ್ಥೂಲ ನಿರ್ಬಂಧ ಆದೇಶ ಹೊರಡಿಸಲಾಗದು: ಹೈಕೋರ್ಟ್ ಮುಂದೆ ಟ್ವಿಟರ್ ವಾದ
ಸಾಮಾಜಿಕ ಮಾಧ್ಯಮದಲ್ಲಿನ ಖಾತೆಗಳನ್ನು ನಿರ್ಬಂಧಿಸುವ ಕುರಿತು ಕೇಂದ್ರ ಸರ್ಕಾರವು ನಿರ್ದಿಷ್ಟವಲ್ಲದ ಸಾಮಾನ್ಯೀಕರಣಗೊಳಿಸುವಂತಹ (ಸ್ಥೂಲ) ಆದೇಶ ಹೊರಡಿಸಲಾಗದು ಎಂದು ಸೋಮವಾರ ಟ್ವಿಟರ್ ಕರ್ನಾಟಕ ಹೈಕೋರ್ಟ್ ಮುಂದೆ ಬಲವಾಗಿ ವಾದಿಸಿತು.
ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69ಎ ಅಡಿಯಲ್ಲಿ ನಿಗದಿಪಡಿಸಿದ ಆಧಾರಗಳಿಗೆ ಅನುಗುಣವಾಗಿ ವಿಷಯದ ಸ್ವರೂಪ ಇದ್ದಾಗ ಮಾತ್ರ ನಿರ್ಬಂಧ ಆದೇಶ ಹೊರಡಿಸಬಹುದು” ಎಂದು ಟ್ವಿಟರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರವಿಂದ್ ದಾತಾರ್ ವಾದಿಸಿದರು.
ನಿರ್ಬಂಧ ವಿಚಾರಗಳಿಗೆ ಸಂಬಂಧಿಸಿದಂತೆ ವಿಶ್ವದ ವಿವಿಧ ಕಡೆ ಯಾವ ರೀತಿಯಲ್ಲಿ ನೋಡಲಾಗಿದೆ ಎಂಬುದರ ತುಲನಾತ್ಮಕ ವಿಶ್ಲೇಷಣೆ ನೀಡುವಂತೆ ಅರ್ಜಿದಾರರ ವಕೀಲರಿಗೆ ನ್ಯಾ. ದೀಕ್ಷಿತ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕಾ, ಇಂಗ್ಲೆಂಡ್, ಪಾಶ್ಚಿಮಾತ್ಯ ಒಕ್ಕೂಟ ಮತ್ತು ಆಸ್ಟ್ರೇಲಿಯಾದಲ್ಲಿನ ಸ್ಥಿತಿಗತಿ ಕುರಿತು ದಾತಾರ್ ಅವರು ವರದಿ ಸಲ್ಲಿಸಿದರು.
ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿರುವುದರಿಂದ ಅಮೆರಿಕಾದಲ್ಲಿ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆಸ್ಟ್ರೇಲಿಯಾದಲ್ಲಿ ಕಾನೂನು ಕ್ಲಿಷ್ಟವಾಗಿದ್ದು, ಇಂಥ ವಿಚಾರಗಳಿಗಾಗಿಯೇ ಇ-ಸುರಕ್ಷತೆ ಆಯುಕ್ತರನ್ನು ನೇಮಕ ಮಾಡಲಾಗಿದೆ ಎಂದರು.
ಇದಕ್ಕೆ ನ್ಯಾ. ದೀಕ್ಷಿತ್ ಅವರು ಆಯುಕ್ತರು ನ್ಯಾಯೋಚಿತ ಕಾರ್ಯವಿಧಾನಕ್ಕೆ ಬದ್ಧವಾಗಿರಬೇಕೆಂದೇನೂ ಇಲ್ಲ ಅಲ್ಲವೇ ಎಂದರು. ಆಗ ದಾತಾರ್ ಅವರು ಆಯುಕ್ತರ ನಿರ್ಧಾರವು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ. ಅದು ಬಳಕೆದಾರರಿಂದ ಅಸಹ್ಯಕರ, ಹಿಂಸಾತ್ಮಕ ನಡವಳಿಕೆ ಇರುವ ಸಂದರ್ಭಗಳಿಗೆ ಸೀಮಿತವಾಗಿದೆ. ಭಾರತದಲ್ಲೂ ಟ್ವಿಟರ್ ಅಸಹ್ಯಕರ, ಹಿಂಸಾತ್ಮಕ ವಿಚಾರಗಳನ್ನು ತೆಗೆಯುತ್ತದೆ ಎಂದರು.
ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು “ಪ್ರಾಧಿಕಾರ ಮತ್ತು ಸಾಮಾಜಿಕ ಮಾಧ್ಯಮ ಮಧ್ಯವರ್ತಿ ವೇದಿಕೆಗಳ ನಡುವೆ ಗೌಪ್ಯತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಟ್ವಿಟರ್ ಖಾತೆಯ ನಿರ್ಬಂಧವು ಅತಿ ಗಂಭೀರ ಪರಿಸ್ಥಿತಿಯಲ್ಲಿ ನಿರ್ಧರಿಸುವ ಕ್ರಮವಾಗಿದೆ… ಬಳಕೆದಾರರೊಬ್ಬರು ಪದೇಪದೇ ಪ್ರಮಾದ ಎಸಗಿದಾಗ ಮಾತ್ರವಾಗಿದೆ… ಎಲ್ಲಾ ಪ್ರಕರಣಗಳಲ್ಲೂ ನಿರ್ಬಂಧದ ಆದೇಶ ಮಾಡಲಾಗುವುದಿಲ್ಲ. ಅನುಪಾತ ಸಿದ್ಧಾಂತ ಇಲ್ಲಿಯೂ ಅನ್ವಯಿಸುತ್ತದೆ” ಎಂದರು.
ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಖಾತೆಯನ್ನು ಟ್ವಿಟ್ವರ್ ಅಮಾನತುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಹೆಗ್ಡೆ ಅವರ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ಮಧ್ಯಪ್ರವೇಶ ಕೋರಿಕೆ ಸಲ್ಲಿಸಿರುವುದಾಗಿ ತಿಳಿಸಿದರು. ಇದನ್ನು ಒಪ್ಪದ ಪೀಠವು ಅರ್ಜಿಯನ್ನು ತಿರಸ್ಕರಿಸಿತು.


