ಸಾರ್ವಜನಿಕ ಹಣಕಾಸು ನಿರ್ವಹಣೆ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಸಂವಿಧಾನೇತರ ಅಧಿಕಾರ ಬಳಸಿಕೊಳ್ಳುವಂತಿಲ್ಲ ಎಂದು ಕೇರಳ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಕೇರಳ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಕೇರಳದ ಸಾಲ ಪಡೆಯುವ ಸಾಮರ್ಥ್ಯಕ್ಕೆ ಕಡಿವಾಣ ಹಾಕುವುದಕ್ಕಾಗಿ ಕೇಂದ್ರ ಸರ್ಕಾರ ಕೇರಳದ ಆರ್ಥಿಕ ಸೂಚಕಗಳನ್ನು ಅವಲಂಬಿಸಿರುವುದು ತಪ್ಪು, ಉತ್ಪ್ರೇಕ್ಷೆಯಿಂದ ಕೂಡಿದ್ದು ಇದು ಖಂಡಿತಾ ನ್ಯಾಯಸಮ್ಮತವಲ್ಲ ಎಂದು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇರಳ ಸರ್ಕಾರದ ಆಕ್ಷೇಪಗಳು
ಸಾರ್ವಜನಿಕ ಹಣಕಾಸು ನಿರ್ವಹಣೆಯ ನೆಪದಲ್ಲಿ ಕೇಂದ್ರ ಸರ್ಕಾರ ಸಾಂವಿಧಾನಿಕ ನಿಯಮಾವಳಿ ಉಲ್ಲಂಘಿಸುವಂತಹ ಸಂವಿಧಾನೇತರ ಅಧಿಕಾರ ಚಲಾಯಿಸುವಂತಿಲ್ಲ.
ಅನಿವಾರ್ಯತೆಯ ಸಿದ್ಧಾಂತವನ್ನು ಮುಂದು ಮಾಡಿಯಾಗಲಿ, ರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದಾಗಲಿ ಅಥವಾ ರಾಜ್ಯಗಳು ಅಧಿಕಾರದ ದುರಪಯೋಗ ಮಾಡಿಕೊಳ್ಳುತ್ತವೆ ಎಂದಾಗಲಿ ರಾಜ್ಯಗಳಿಗೆಂದೇ ಮೀಸಲಾದ ಶಾಸಕಾಂಗ ಮತ್ತು ಕಾರ್ಯಾಂಗ ಕ್ಷೇತ್ರಗಳನ್ನು ಕೇಂದ್ರ ಸರ್ಕಾರ ಅತಿಕ್ರಮಿಸುವುದನ್ನು ಸಮರ್ಥಿಸಲಾಗದು.
ತನ್ನದೇ ಸಾಲ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ದಾಖಲೆ ನಿರಾಶಾದಾಯಕವಾಗಿದೆ.
ರಾಷ್ಟ್ರೀಯ ಸಾಲದ ಬಿಕ್ಕಟ್ಟಿಗೆ ರಾಜ್ಯಗಳನ್ನು ಹೊಣೆಗಾರರನ್ನಾಗಿ ಮಾಡಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರ, ಕಾಲ್ಪನಿಕ ಭೂತವನ್ನು ಚಿತ್ರಿಸಲು ಯೋಜಿತ ಮತ್ತು ಉತ್ಪ್ರೇಕ್ಷಿತ ಭಯ ಹುಟ್ಟುಹಾಕುತ್ತಿದೆ.
ಕೇರಳದ ವಿತ್ತೀಯ ಮತ್ತು ಆದಾಯ ಕೊರತೆ ಗುರಿಗಳು 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಮಿತಿಯಲ್ಲೇ ಇವೆ.
ಸಾಲ ಪಡೆಯುವ ಮತ್ತು ನಿಯಂತ್ರಿಸುವ ತನ್ನ ಅಧಿಕಾರದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ದೂರಿ ಕೇರಳ ಸರ್ಕಾರ ಈ ಹಿಂದೆ ಸಲ್ಲಿಸಿದ್ದ ಮೂಲ ದಾವೆಗೆ ಸಂಬಂಧಿಸಿದಂತೆ ಪ್ರಸ್ತುತ ಅಫಿಡವಿಟ್ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರದ ವಿಧಿಸಿರುವ ಸಾಲದ ಮಿತಿಯಿಂದಾಗಿ ಹಲವು ವರ್ಷಗಳಿಂದ ಪಾವತಿಯಾಗದ ಬಾಕಿಯ ಮೊತ್ತ ಬೆಳೆಯುತ್ತಿದ್ದು ಗಂಭೀರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ಮೂಲ ಅರ್ಜಿಯಲ್ಲಿ ಕೇರಳ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಬಜೆಟ್‌ಗೆ ಹೊರತಾದ ಭಾರೀ ಸಾಲ ಮತ್ತು ರಾಜಿಯಾದ ಹಣಕಾಸು ವ್ಯವಸ್ಥೆಯಿಂದಾಗಿ ಕೇರಳದ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ ಎಂದು ದೂರಿತ್ತು.
ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರನೆಯನ್ನು ಫೆಬ್ರವರಿ 13ರಂದು ನಡೆಸಲಿದೆ.