ಗುಜರಾತ್, ಗುವಾಹಟಿ, ತ್ರಿಪುರ ಹಾಗೂ ರಾಜಸ್ಥಾನ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಭಾನುವಾರ ಅಧಿಸೂಚನೆ ಹೊರಡಿಸಿದೆ.
ಕಾನೂನು ಮತ್ತು ನ್ಯಾಯ ಸಚಿವಾಲಯದ ಜಾಲತಾಣದಲ್ಲಿ ಈ ಕುರಿತಂತೆ ಅಧಿಸೂಚನೆ ಪ್ರಕಟಿಸಲಾಗಿದೆ.
ಸಂವಿಧಾನದ 217ನೇ ವಿಧಿಯ ಷರತ್ತು (1)ರ ಮೂಲಕ ನೀಡಲಾದ ಅಧಿಕಾರ ಚಲಾಯಿಸುವ ಮೂಲಕ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸೋನಿಯಾ ಗಿರಿಧರ್ ಗೋಕನಿ, ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿ ನೋಂಗ್‌ಮೈಕಪಮ್ ಕೋಟೀಶ್ವರ್ ಸಿಂಗ್, ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ಒರಿಸ್ಸಾ ಹೈಕೋರ್ಟ್‌ನ ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಅವರನ್ನು ಕ್ರಮವಾಗಿ ಗುಜರಾತ್, ಗುವಾಹಟಿ, ತ್ರಿಪುರ ಹಾಗೂ ರಾಜಸ್ಥಾನ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆ ವಿವರಿಸಿದೆ.
ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅರವಿಂದ್ ಕುಮಾರ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಇತ್ತೀಚೆಗೆ ನೇಮಕಗೊಂಡಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ನ್ಯಾ. ಸೋನಿಯಾ ಅವರನ್ನು ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು. ಈಗ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸುವ ಮೂಲಕ ನ್ಯಾ. ಸೋನಿಯಾ ಅವರು ಗುಜರಾತ್ ಹೈಕೋರ್ಟ್ ಅಸ್ತಿತ್ವಕ್ಕೆ ಬಂದ 63 ವರ್ಷಗಳ ಇತಿಹಾಸದಲ್ಲೇ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.
ಇನ್ನು ನ್ಯಾ. ಎನ್ ಕೆ ಸಿಂಗ್ ಅವರನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಡಿಸೆಂಬರ್ 13, 2022ರಂದು ಶಿಫಾರಸು ಮಾಡಿತ್ತು. ನ್ಯಾ. ಸಿಂಗ್ ಅವರು ಮೂರು ಬಾರಿ ಗುವಾಹಟಿ, ಮಣಿಪುರ ಹೈಕೋರ್ಟ್‌ಗಳ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಮೆಹ್ತಾ ಅವರನ್ನು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಫೆಬ್ರವರಿ 8ರಂದು ಶಿಫಾರಸು ಮಾಡಿತ್ತು.
ಕೊಲಿಜಿಯಂ ಈ ಹಿಂದೆ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರನ್ನು ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ನಿರ್ಧರಿಸಿತ್ತು. ಆದರೂ, ಪ್ರತ್ಯೇಕ ನಿರ್ಣಯದ ಮೂಲಕ ಈ ತೀರ್ಮಾನ ಹಿಂಪಡೆಯಲಾಯಿತು. ನ್ಯಾ ಚಂದ್ರನ್ ಅವರನ್ನು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಯಿತು. ಪರಿಣಾಮ ನ್ಯಾ, ಮೆಹ್ತಾ ಗುವಾಹಟಿ ಸಿಜೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ತ್ರಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ವಂತ್ ಸಿಂಗ್ ಅವರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಜನವರಿ 25ರಂದು ಶಿಫಾರಸು ಮಾಡಿತ್ತು. ನ್ಯಾಯಮೂರ್ತಿ ಸಿಂಗ್ ಅವರನ್ನು ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಕೊಲಿಜಿಯಂ ಈ ಹಿಂದೆ ಶಿಫಾರಸು ಮಾಡಿತ್ತು. ಆದರೆ ಜ. 25ರಂದು ಹೇಳಿಕೆಯೊಂದನ್ನು ನೀಡಿದ ಕೊಲಿಜಿಯಂ ಆ ನಿರ್ಧಾರ ಹಿಂಪಡೆಯಿತು. ಬಳಿಕ ತ್ರಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅವರಿಗೆ ಪದೋನ್ನತಿ ನೀಡುವಂತೆ ಶಿಫಾರಸು ಮಾಡಲಾಯಿತು.