ಕಾರ್ಯಾಂಗವೇ 73 ವರ್ಷಗಳಿಂದಲೂ ಚುನಾವಣಾ ಆಯುಕ್ತರನ್ನು ನೇಮಿಸುತ್ತಿದೆ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಸಮರ್ಥನೆ

ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟ ಸಿಇಸಿ ಕಾಯಿದೆ- 2023 ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಅಫಿಡವಿಟ್‌ ಸಲ್ಲಿಸಿದೆ.
ಚುನಾವಣೆ
ಚುನಾವಣೆ

ಭಾರತದಲ್ಲಿ ಚುನಾವಣಾ ಆಯುಕ್ತರನ್ನು 73 ವರ್ಷಗಳಿಂದ ಕಾರ್ಯಾಂಗವೇ ಪ್ರತ್ಯೇಕವಾಗಿ ನೇಮಿಸುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟು ಇತ್ತೀಚೆಗೆ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಿರುವುದನ್ನು ಸಮರ್ಥಿಸಿಕೊಂಡಿದೆ.

ವಿಶೇಷವೆಂದರೆ, ಸಿಜೆಐ ಇಲ್ಲದೆ ಇರುವ ಆಯ್ಕೆ ಸಮಿತಿ ಈ ನೇಮಕಾತಿ ಮಾಡಿರುವುದರಿಂದ ವಿವಾದ ಉಂಟಾಗಿದ್ದು ಈ ಆಯ್ಕೆ ಪ್ರಕ್ರಿಯೆ 2023ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದ ಮಾನದಂಡಕ್ಕೆ ವಿರುದ್ಧವಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಉಳಿದ ಚುನಾವಣಾ ಆಯುಕ್ತರ (ನೇಮಕಾತಿ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ- 2023ರ (ಸಿಇಸಿ ಕಾಯಿದೆ) ಅಡಿಯಲ್ಲಿ ರಚಿಸಲಾದ ಸಮಿತಿ ಈ ಎರಡು ನೇಮಕಾತಿಗಳನ್ನು ಮಾಡಿದೆ. 2023ರಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ತೀರ್ಪಿನ ಬಳಿಕ ಈ ಕಾಯಿದೆ ಜಾರಿಗೆ ಬಂದಿದ್ದು ಅದರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಇನ್ನು ಬಾಕಿ ಇದೆ.

ಸಿಇಸಿ ಕಾಯ್ದೆ ಜಾರಿಗೆ ಬರುವ ಮೊದಲೇ, 1950 ರಿಂದ 2023 ರವರೆಗೆ 73 ವರ್ಷಗಳ ಕಾಲ, ಚುನಾವಣಾ ಆಯುಕ್ತರ ನೇಮಕಾತಿಯನ್ನು ಕಾರ್ಯಾಂಗ ಪ್ರತ್ಯೇಕವಾಗಿ ಮಾಡುತ್ತಿತ್ತು ಎಂದು ಕೇಂದ್ರ ಸರ್ಕಾರ ನ್ಯಾಯಾಲಯದ ಗಮನ ಸೆಳೆದಿದೆ.

ಈ ಅಧಿಕಾರಿಗಳ ನೇಮಕಾತಿಗೆ ಮುಂಚಿತವಾಗಿ ಸಿಇಸಿ ಕಾಯಿದೆಯಡಿ ಉನ್ನತ ಮಟ್ಟದ ಸಮಿತಿ ಚರ್ಚೆ ನಡೆಸಿದೆ. ಇತ್ತೀಚೆಗೆ ನೇಮಕಗೊಂಡ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರ ಕಾರ್ಯಕ್ಷಮತೆಯನ್ನು ಯಾವುದೇ ಹಂತದಲ್ಲಿ ಪ್ರಶ್ನಿಸಲಾಗಿಲ್ಲ ಎಂದು ಅದು ಹೇಳಿದೆ.

ಅರುಣ್ ಗೋಯೆಲ್ ಮಾರ್ಚ್ 8ರಂದು ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮುನ್ನ ಅಂದರೆ ಫೆಬ್ರವರಿ 15ರಂದು ಮತ್ತೊಬ್ಬ ಚುನಾವಣಾ ಆಯುಕ್ತ ಅನೂಪ್ ಪಾಂಡೆ ನಿವೃತ್ತರಾಗಿದ್ದರು. ಬಳಿಕ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಒಬ್ಬರೇ ಸದಸ್ಯರಾಗಿ ಉಳಿದಿದ್ದರು.

ಖಾಲಿ ಇರುವ ಆಯುಕ್ತರ ಎರಡು ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ 2023ರ ಕಾಯಿದೆ ಬಳಸದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಬೇಕು ಎಂದು ಕೋರಿ ಕಾಂಗ್ರೆಸ್‌ ನಾಯಕಿ ಡಾ. ಜಯಾ ಠಾಕೂರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮಾರ್ಚ್ 14ರಂದು, ಕೇಂದ್ರ ಸರ್ಕಾರ ಸಿಇಸಿ ಕಾಯಿದೆಯಡಿ ನಿಗದಿಪಡಿಸಿದ ಮಾನದಂಡ ಅನುಸರಿಸಿ ಎರಡು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿತ್ತು. ಮಾರ್ಚ್ 15ರಂದು, ಸುಪ್ರೀಂ ಕೋರ್ಟ್ ಈ ನೇಮಕಾತಿಗಳಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಆದರೆ ವಿವಾದಾತ್ಮಕ ಕಾಯಿದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿತ್ತು.

ಇಬ್ಬರು ಹೊಸ ಇಸಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಅದಾಗಲೇ ಈ ಕಾನೂನನ್ನು ಇದೇ ಅರ್ಜಿದಾರರು ಪ್ರಶ್ನಿಸಿದ್ದರು. ಅನೂಪ್ ಬರನ್ವಾಲ್ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ವಿವರಿಸಿದ್ದ ಆಯ್ಕೆ ಪ್ರಕ್ರಿಯೆಯ ಪ್ರಕಾರ ನೇಮಕಾತಿ ನಡೆಯದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಅವರನ್ನು ಸಮಿತಿ ಒಳಗೊಂಡಿರಬೇಕು ಎಂದು ನ್ಯಾಯಾಲಯಅನೂಪ್ ಬರನ್ವಾಲ್ ಪ್ರಕರಣದ ತೀರ್ಪಿನಲ್ಲಿ ಹೇಳಿದ್ದರೂ, ಸಿಇಸಿ ಕಾಯಿದೆ ಸಿಜೆಐ ಬದಲಿಗೆ ಕ್ಯಾಬಿನೆಟ್ ಸಚಿವರನ್ನು ಸಮಿತಿ ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸಿದೆ.

ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ 'ಸಿಇಸಿ ಕಾಯಿದೆಯನ್ನು ಪ್ರಶ್ನಿಸಿದವರು ಯಾವುದೇ ಮಧ್ಯಂತರ ಆದೇಶ ಕೋರಿದರೆ ಅದು ಕಾಯಿದೆಗೆ ತಡೆ ನೀಡುವಂತೆ ಮಾಡುವ ಮನವಿಯಾಗಲಿದ್ದು ಇದಕ್ಕೆ ಅನುಮತಿ ನೀಡಲಾಗದು ಇದು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯನ್ನು ಮೀರಿದ್ದು' ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com