ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

"ಚುನಾವಣಾ ಆಯೋಗ ಕಾರ್ಯಾಂಗದ ಹಿಡಿತದಲ್ಲಿದೆ ಎಂದು ನೀವು ಹೇಳಲಾಗದು" ಎಂಬುದಾಗಿ ನ್ಯಾಯಾಲಯ ಅರ್ಜಿದಾರರಿಗೆ ಬುದ್ಧಿವಾದ ಹೇಳಿತು.
ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್
ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ಹುದ್ದೆಗಳನ್ನು ನೇಮಕ ಮಾಡಲು ಪ್ರಧಾನಿ, ಕೇಂದ್ರ ಸಂಪುಟದ ಸಚಿವ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಅವರನ್ನು ಒಳಗೊಂಡ ಆಯ್ಕೆ ಸಮಿತಿಗೆ ಅವಕಾಶ ನೀಡುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ- 2023ಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ (ಡಾ. ಜಯಾ ಠಾಕೂರ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಇಬ್ಬರು ನೂತನ ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ನಿರಾಕರಿಸಿತು.

"ತಡೆಯಾಜ್ಞೆ ಕೋರಿರುವ ಅರ್ಜಿಯನ್ನು ನಾವು ವಜಾಗೊಳಿಸುತ್ತಿದ್ದೇವೆ. ನಾವು ಇದಕ್ಕೆ ಕಾರಣಗಳನ್ನು (ನಂತರ) ನೀಡುತ್ತೇವೆ" ಎಂದು ನ್ಯಾಯಾಲಯ ಆದೇಶಿಸಿದೆ.

ಕಾಯಿದೆ ಜಾರಿಗೆ ಬರುವ ಮೊದಲು ಕೂಡ ಚುನಾವಣಾ ಆಯುಕ್ತರ ನೇಮಕಾತಿಯನ್ನು ಕಾರ್ಯಾಂಗವೇ ಮಾಡುತ್ತಿತ್ತು. ಚುನಾವಣಾ ಸಂಸ್ಥೆಯ ಸ್ವಾತಂತ್ರ್ಯವನ್ನು ಪ್ರಶ್ನಿಸುವುದು ಸೂಕ್ತವಲ್ಲ ಎಂದು ಪೀಠ ಹೇಳಿದೆ.

"ಟಿ ಎನ್ ಶೇಷನ್ ಪ್ರಕರಣ ಮತ್ತು ನಂತರವೂ, ಚುನಾವಣಾ ಆಯುಕ್ತರನ್ನು ಕಾರ್ಯಾಂಗ ನೇಮಿಸಿದ್ದು ಅದನ್ನು ಈ ನ್ಯಾಯಾಲಯ ಎತ್ತಿಹಿಡಿದಿದೆ" ಎಂದು ನ್ಯಾ. ಖನ್ನಾ ಹೇಳಿದರು.

ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸಲಾಗುತ್ತಿದ್ದು ಕಾರ್ಯಾಂಗದ ಹಿಡಿತಕ್ಕೆ ಚುನಾವಣಾ ಆಯೋಗ ಬರುತ್ತಿದೆ ಎಂದು ಅರ್ಜಿದಾರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು.

"ಚುನಾವಣಾ ಆಯೋಗ ಕಾರ್ಯಾಂಗದ ಹಿಡಿತದಲ್ಲಿದೆ ಎಂದು ನೀವು ಹೇಳಲಾಗದು" ಎಂಬುದಾಗಿ ನ್ಯಾ. ಖನ್ನಾ ಅರ್ಜಿದಾರರಿಗೆ ಹೇಳಿದರು.

ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಕಾಯಿದೆಗೆ ತಡೆ ನೀಡುವುದು ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ಕೂಡ ಪೀಠ ನುಡಿದಿದೆ.

"ನಾವೀಗ ಕಾಯಿದೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ. ಇದು ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತದೆ. ಅತಿದೊಡ್ಡ ವಿರೋಧ ಪಕ್ಷದ ನಾಯಕ ಕೂಡ ಸಮಿತಿಯ ಸದಸ್ಯರಾಗಿದ್ದಾರೆ" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಡೆಯಾಜ್ಞೆ ಮನವಿಗೆ ಆಕ್ಷೇಪಿಸಿದರು.

ನಂತರ ನ್ಯಾಯಾಲಯ ತಡೆಯಾಜ್ಞೆ ನಿರಾಕರಿಸಿ ಆದೇಶ ಹೊರಡಿಸಿತು. ಆದರೂ, ಸಿಇಸಿ ಕಾಯಿದೆಯ ಸಿಂಧುತ್ವ ಪ್ರಶ್ನಿಸಿದ್ದ ಮನವಿಯ ಬಗ್ಗೆ ಆರು ವಾರಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್‌ ನೀಡಿದೆ.

ಚುನಾವಣಾ ಆಯೋಗ ಕಾರ್ಯಾಂಗದ ಹಿಡಿತದಲ್ಲಿದೆ ಎಂದು ನೀವು (ಅರ್ಜಿಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಎಡಿಆರ್‌) ಹೇಳಲಾಗದು
ಸುಪ್ರೀಂ ಕೋರ್ಟ್‌
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ, ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ, ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸಲು ಇತ್ತೀಚೆಗೆ ಜಾರಿಗೆ ತಂದ ಕಾನೂನನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಜಯಾ ಠಾಕೂರ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಅನೂಪ್ ಬರನ್ವಾಲ್ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ವಿವರಿಸಿದ್ದ ಆಯ್ಕೆ ಪ್ರಕ್ರಿಯೆಯ ಪ್ರಕಾರ ನೇಮಕಾತಿ ನಡೆಯದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ವಕೀಲ ಕಾಳೀಶ್ವರಂ ರಾಜ್ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com