ರಾಜೀವ್‌ ಗಾಂಧಿ ಹತ್ಯೆ ಅಪರಾಧಿಗಳ ಬಿಡುಗಡೆ: ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಕೇಂದ್ರ

ತನ್ನನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಲಾಗಿಲ್ಲ ಹಾಗೂ ತನ್ನ ನಿಲುವನ್ನು ಕೇಳಲಾಗಿಲ್ಲ. ದಾಖಲೆಯಲ್ಲಿರುವ ಹಲವು ಗಂಭೀರ ತಪ್ಪುಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿಲ್ಲ ಎಂದು ಕೇಂದ್ರವು ಮರುಪರಿಶೀಲನಾ ಅರ್ಜಿಯಲ್ಲಿ ಹೇಳಿದೆ.
Rajiv Gandhi assassination, Supreme Court
Rajiv Gandhi assassination, Supreme Court

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿನ ಆರು ಮಂದಿ ದೋಷಿಗಳನ್ನು ಬಿಡುಗಡೆ ಮಾಡಿ ಸರ್ವೋಚ್ಚ ನ್ಯಾಯಾಲಯವು ನವೆಂಬರ್‌ 11ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

ತನ್ನನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಲಾಗಿಲ್ಲ ಹಾಗೂ ತನ್ನ ನಿಲುವನ್ನು ಕೇಳಲಾಗಿಲ್ಲ. ದಾಖಲೆಯಲ್ಲಿ ಹಲವು ಗಂಭೀರ ಪ್ರಮಾದಗಳು ಇದ್ದು ಅವುಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿಲ್ಲ ಎಂದು ವಕೀಲ ಅರವಿಂದ್‌ ಕುಮಾರ್‌ ಶರ್ಮಾ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಸರ್ಕಾರ ವಿವರಿಸಿದೆ.

“… ಕೇಂದ್ರ ಸರ್ಕಾರ ವಾದ ಮಂಡಿಸದಿರುವುದರಿಂದ, ದೋಷಿಗಳು/ಅರ್ಜಿದಾರರ ಪ್ರಕ್ರಿಯೆಯಲ್ಲಿನ ಲೋಪದಿಂದಾಗಿ ಹಾಲಿ ಪ್ರಕರಣವನ್ನು ಅಂತಿಮವಾಗಿ ವಿಚಾರಣೆ ನಡೆಸಿ, ನಿರ್ಧಾರ ಮಾಡುವುದಕ್ಕೂ ಮುನ್ನ ಕೆಲವು ಪ್ರಮುಖ ಸಾಕ್ಷ್ಯಗಳನ್ನು ಪರಿಶೀಲಿಸುವುದರಿಂದ ಈ ಘನ ನ್ಯಾಯಾಲಯವನ್ನು ಹೊರಗಿಡಲಾಗಿದೆ. ಇದರಿಂದಾಗಿ ಅಂತಿಮ ತೀರ್ಪಿನಲ್ಲಿ ದೋಷಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ… ಸ್ವಾಭಾವಿಕ ನ್ಯಾಯದ ತತ್ವಗಳು ಸ್ಪಷ್ಟವಾಗಿ ಉಲ್ಲಂಘನೆಯಾಗಿರುವುದು ಗೋಚರಿಸುತ್ತದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್‌, ಪಿ ರವಿಚಂದ್ರನ್‌, ಜಯಕುಮಾರ್‌, ರಾಬರ್ಟ್‌ ಪಯಸ್‌, ಸಂತನ್‌ ಮತ್ತು ಮುರುಗನ್‌ ಅವರನ್ನು ಸುಪ್ರೀಂ ಕೋರ್ಟ್‌ ಅವಧಿ ಪೂರ್ಣವಾಗಿ ಬಿಡುಗಡೆ ಮಾಡಿತ್ತು. ಸನ್ನಡತೆ ತೋರಿದ ಹಿನ್ನೆಲೆಯಲ್ಲಿ ದೋಷಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿತ್ತು.

ಪೆರಾರಿವಾಲನ್‌ ಪ್ರಕರಣದಲ್ಲಿನ ವಿಚಾರಗಳು ಇತರೆ ದೋಷಿಗಳಿಗೆ ಅನ್ವಯಿಸುವುದಿಲ್ಲ. ಕೆಲವು ಆಘಾತಕಾರಿ ವಿಚಾರಗಳು ಮತ್ತು ಪರಿಸ್ಥಿತಿಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿಲ್ಲ. ಬಿಡುಗಡೆ ಮಾಡಲಾದ ಆರು ಮಂದಿಯ ಪೈಕಿ ನಾಲ್ವರು ಶ್ರೀಲಂಕಾ ಪ್ರಜೆಗಳಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಉಂಟು ಮಾಡಲಿದೆ ಎಂದು ಕೇಂದ್ರ ವಾದಿಸಿದೆ.

Also Read
ರಾಜೀವ್‌ ಗಾಂಧಿ ಹತ್ಯೆ ಪ್ರಕರಣ: ದೋಷಿಗಳಾದ ನಳಿನಿ, ರವಿಚಂದ್ರನ್‌ ಅವರನ್ನು ಅವಧಿ ಪೂರ್ವವಾಗಿ ಬಿಡುಗಡೆ ಮಾಡಿದ ಸುಪ್ರೀಂ

“ದೇಶದ ಮಾಜಿ ಪ್ರಧಾನಿಯನ್ನು ಹತ್ಯೆ ಮಾಡಿದ್ದರಿಂದ ನೆಲದ ಕಾನೂನಿನ ಅನ್ವಯ ದೋಷಿಗಳಾಗಿರುವ ವಿದೇಶಿ ಭಯೋತ್ಪಾದಕರಿಗೆ ಕ್ಷಮದಾನ ನೀಡುವುದು ಅಂತಾರಾಷ್ಟ್ರೀಯ ಪರಿಣಾಮ ಉಂಟು ಮಾಡಲಿದ್ದು, ಇದು ದೇಶದ ಸಾರ್ವಭೌಮತ್ವ ಅಧಿಕಾರದ ವ್ಯಾಪ್ತಿಗೆ ಒಳಪಡುತ್ತದೆ” ಎಂದಿರುವ ಕೇಂದ್ರ ಸರ್ಕಾರವು, "ಇದರಲ್ಲಿ ತನ್ನನ್ನು ಪಕ್ಷಕಾರರನ್ನಾಗಿಸುವುದು ಅಗತ್ಯ. ಈ ಪ್ರಕರಣವು ಸಾರ್ವಜನಿಕ ಸುರಕ್ಷತೆ, ಶಾಂತಿ, ನೆಮ್ಮದಿ ಮತ್ತು ಭಾರತೀಯ ಕ್ರಿಮಿನಲ್‌ ನ್ಯಾಯದಾನ ವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ” ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com