

ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಅಡಿ ತುರ್ತು ಮತ್ತು ನಿರ್ಣಾಯಕ ಆರೈಕೆ ಸಂದರ್ಭಗಳಲ್ಲಿ ನಗದು ರಹಿತ ವೈದ್ಯಕೀಯ ಕಾರ್ಯವಿಧಾನ ಜಾರಿಗೊಳಿಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಚಿಕಿತ್ಸೆಗಾಗಿ ಮಾಡಿದ್ದ ಖುರ್ಚು ಮರು ಪಾವತಿಗೆ ನಿರ್ದೇಶನ ನೀಡುವಂತೆ ಕೋರಿ ನಿವೃತ್ತ ಐಎಎಸ್ ಅಧಿಕಾರಿ ಐವಿ ಮಿಲ್ಲರ್ ಚಾಹಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ವೈದ್ಯಕೀಯ ಸೇವೆ ಪಡೆಯುವ ವೇಳೆ ಸೇವೆಯಲ್ಲಿರುವ ಅಥವಾ ನಿವೃತ್ತರಾದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕೌಟುಂಬಿಕ ಸದಸ್ಯರು ಮೊದಲು ವೆಚ್ಚ ಭರಿಸಿ ತದನಂತರ ಮರುಪಾವತಿ ವಿಳಂಬ ಎದುರಿಸಬೇಕಾದ ಸಂದರ್ಭಗಳನ್ನು ತಡೆಯಲು ನಗದು ರಹಿತ ಚಿಕಿತ್ಸಾ ವಿಧಾನ ಜಾರಿಗೊಳಿಸುವುದು ಸೂಕ್ತ ಎನಿಸುತ್ತದೆ ಎಂದು ಹೇಳಿರುವ ನ್ಯಾಯಾಲಯವು ಅರ್ಜಿದಾರರಿಗೆ 2023ರ ಅಕ್ಟೋಬರ್‌ನಿಂದ ಅನ್ವಯವಾಗುವಂತೆ 15.3 ಲಕ್ಷ ರೂಪಾಯಿಗಳನ್ನು ಶೇ.12ರಷ್ಟು ಬಡ್ಡಿ ಸಹಿತ 30 ದಿನಗಳಲ್ಲಿ ಪಾವತಿಸುವಂತೆ ಆದೇಶಿಸಿದೆ.
“ಜೀವಕ್ಕೆ ಅಪಾಯವುಂಟುಮಾಡುವಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳು ಅಥವಾ ಅವರ ಸಹಾಯಕರು ಸಿಜಿಎಚ್‌ಎಸ್ ಚೌಕಟ್ಟಿನ ಅಡಿಯಲ್ಲಿ ಚಿಕಿತ್ಸಾ ಶಿಷ್ಟಾಚಾರ ನಿರ್ಣಯಿಸುತ್ತಾರೆ ಅಥವಾ ಮರುಪಾವತಿ ಅರ್ಹತೆ ಮೌಲ್ಯಮಾಪನ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.
“ನಿವೃತ್ತ ಉದ್ಯೋಗಿಗಳ ವಿಷಯದಲ್ಲಿ ಇಂತಹ ಕ್ರಮಗಳು ವಿಶೇಷವಾಗಿ ಅಸಮಾನವಾಗಿರುತ್ತವೆ. ಅವರ ಗಳಿಕೆಯ ಸಾಮರ್ಥ್ಯ ಮತ್ತು ಆರ್ಥಿಕ ಭದ್ರತೆ ಸೀಮಿತವಾಗಿರುತ್ತದೆ. ಈ ಪ್ರಕರಣದಲ್ಲಿ, ರೋಗಿ ಅಥವಾ ಕುಟುಂಬದ ಸದಸ್ಯರು ಅಲ್ಪಾವಧಿಯಲ್ಲಿ ಹಣ ಹೊಂದಿಸಿ, ನಂತರ ಮರುಪಾವತಿ ಕೋರಿದ್ದಾರೆ. ಆದರೆ, ಅಧಿಕಾರಿಗಳು ಕಾರ್ಯವಿಧಾನದ ಪರಿಶೀಲನೆಯನ್ನು ನಡೆಸಲು ವಿಳಂಬ ಮಾಡುವುದರಿಂದ ವ್ಯಾಜ್ಯಗಳಿಗೆ ಕಾರಣವಾಗುತ್ತದೆ” ಎಂದು ಪೀಠ ತಿಳಿಸಿದೆ.
“ವಿಶೇಷವಾಗಿ ತುರ್ತು ಮತ್ತು ಜೀವ ಉಳಿಸುವ ಕಾರ್ಯವಿಧಾನಗಳಿಗೆ ನಗದುರಹಿತ ಚಿಕಿತ್ಸಾ ಕಾರ್ಯವಿಧಾನ ಜಾರಿಯಿಂದ ಮರುಪಾವತಿಯಲ್ಲಿನ ವಿಳಂಬ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಂತಹ ವ್ಯವಸ್ಥೆಯು ಸಂವಿಧಾನದ ಸೆಕ್ಷನ್ 21ರ ಅಡಿಯಲ್ಲಿ ಆರೋಗ್ಯದ ಹಕ್ಕಿಗೆ ಅರ್ಥಪೂರ್ಣ ಪರಿಣಾಮ ನೀಡುತ್ತದೆ. ಸಂವಿಧಾನದ 14ನೇ ವಿಧಿಯಡಿ ವೈದ್ಯಕೀಯ ಆರೈಕೆ ಲಭ್ಯತೆ ಖಚಿತಪಡಿಸುತ್ತದೆ ಮತ್ತು ಕಲ್ಯಾಣ ಉದ್ಯೋಗದಾತರಾದ ಸರ್ಕಾರದ ಬಾಧ್ಯತೆ ಬಲಪಡಿಸುತ್ತದೆ” ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನಲ್ಲಿ ವಾಸಿಸುವ ಮಧ್ಯಪ್ರದೇಶ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಮಿಲ್ಲರ್ ಚಾಹಲ್ ಅವರು ತಮ್ಮ ಪತಿ ಹಾಗೂ ಮಧ್ಯಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಗುರ್ಮೈಲ್ ಸಿಂಗ್ ಚಾಹಲ್ ಅವರ ಚಿಕಿತ್ಸೆಯ ಸಂದರ್ಭದಲ್ಲಿ ಮಾಡಿದ ವೆಚ್ಚವನ್ನು ಮರುಪಾವತಿಸಲು ನಿರ್ದೇಶನ ನೀಡುವಂತೆ ನ್ಯಾಯಾಲಯ ಮೆಟ್ಟಿಲೇರಿದ್ದರು.
ಗುರ್ಮೈಲ್ ಸಿಂಗ್ 2023ರ ಏಪ್ರಿಲ್‌ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿ, ಅದೇ ವರ್ಷದ ಅಕ್ಟೋಬರ್‌ನಲ್ಲಿ ಅವರು ಸಿಆರ್‌ಟಿ-ಡಿ (ಡಿಫಿಬ್ರಿಲೇಟರ್‌ನೊಂದಿಗೆ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ಥೆರಪಿ) ಇಂಪ್ಲಾಂಟ್ ಅನ್ನು ಪಡೆದಿದ್ದರು. ಈ ಕಾರ್ಯವಿಧಾನ ಮತ್ತು ಇಂಪ್ಲಾಂಟ್‌ಗೆ ₹15,30,093 ವೆಚ್ಚವಾಗಿದ್ದು, 2024ರ ಮಾರ್ಚ್ 18ರಂದು ಅವರು ನಿಧನರಾಗಿದ್ದರು. ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯಡಿ ಚಿಕಿತ್ಸಾ ವೆಚ್ಚವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.