490 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ನೀಡಿದ್ದ ಆದೇಶ ಮರುಪರಿಶೀಲನೆಗಾಗಿ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಅರ್ಜಿ

ಆಮ್ಲಜನಕ ಪೂರೈಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂಬ ಅಂಶವನ್ನು ಶನಿವಾರ ನೀಡಿದ್ದ ಆದೇಶದಿಂದ ತೆಗೆದುಹಾಕುವಂತೆ ಮೆಹ್ತಾ ಕೋರಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ ʼಅದು ಕೊನೆಯ ಆಯ್ಕೆ…ʼ ಎಂದಿತು.
490 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ನೀಡಿದ್ದ ಆದೇಶ ಮರುಪರಿಶೀಲನೆಗಾಗಿ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಅರ್ಜಿ

ರಾಷ್ಟ್ರದ ರಾಜಧಾನಿಗೆ 490 ಮೆಟ್ರಿಕ್‌ ಟನ್‌ ಆಮ್ಲಜನಕ ಪೂರೈಸಲು ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಕೋರಿದೆ. ಭಾನುವಾರವೂ ನಡೆದ ವಿಚಾರಣೆ ವೇಳೆ ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಆಮ್ಲಜನಕ ಸರಬರಾಜಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೆಲಸ ಮಾಡಬೇಕಿದ್ದು ಕೇವಲ ಕೇಂದ್ರವನ್ನು ಹೊಣೆಗಾರನನ್ನಾಗಿ ಮಾಡಬಾರದು ಎಂದು ವಿನಂತಿಸಿದರು.

“ಆಮ್ಲಜನಕ ಸಾಗಣೆಗೆ ಟ್ಯಾಂಕರ್‌ಗಳನ್ನು ಒದಗಿಸುವುದು ದೆಹಲಿ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಎಂಟು ಕಂಟೇನರ್‌ಗಳನ್ನು ಪಡೆಯುವ ಕುರಿತಂತೆ ಆಯೋಜಿಸಲಾಗಿದ್ದ ವರ್ಚುವಲ್‌ ಸಭೆಯಲ್ಲಿ ದೆಹಲಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿ ಭಾಗವಹಿಸಿಲ್ಲ. ಅದನ್ನು ಅವರ ನಿರ್ಲಕ್ಷ್ಯ ಎಂದು ಹೇಳುತ್ತಿಲ್ಲ…. ಆದರೆ ಹೊಣೆಗಾರಿಕೆ ಬದಲಿಸುವುದನ್ನು ನಾವು ಆಕ್ಷೇಪಿಸುತ್ತಿದ್ದೇವೆ” ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠಕ್ಕೆ ಮೆಹ್ತಾ ವಿವರಿಸಿದರು.

ದೆಹಲಿಯಲ್ಲಿ ನಾಯಕತ್ವದ ಕೊರತೆಯಿಂದಾಗಿ ವ್ಯವಸ್ಥೆ ವಿಫಲವಾಗಿದೆ ಎಂದ ಅವರು ಇದನ್ನು ರಾಜಕೀಯವಾಗಿ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆಸ್ಪತ್ರೆಗಳು ಆಮ್ಲಜನಕ ಖಾಲಿಯಾಗುವುದನ್ನು ಮೊದಲೇ ತಿಳಿಸಿದರೆ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲ. ಆಮ್ಲಜನಕ ಸರಬರಾಜನ್ನು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಿದರೆ ಅದನ್ನು ನ್ಯಾಯಬದ್ಧವಾಗಿ ಬಳಸಿಕೊಂಡರೆ ಕೊನೆ ಕ್ಷಣದ ಆತಂಕವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.

Also Read
[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ಇಂದು ನಿರ್ವಹಿಸಿದ ಪ್ರಕರಣಗಳ ವಿವರ

ಅಲ್ಲದೆ ಆಮ್ಲಜನಕ ಪೂರೈಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂಬ ಅಂಶವನ್ನು ಶನಿವಾರ ನೀಡಿದ್ದ ಆದೇಶದಿಂದ ತೆಗೆದುಹಾಕುವಂತೆ ಮೆಹ್ತಾ ಕೋರಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ "ಅದು ಕೊನೆಯ ಆಯ್ಕೆ. ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆಂದು ನಮಗೆ ತಿಳಿದಿದೆ…” ಎಂದಿತು.

ದೆಹಲಿ ಸರ್ಕಾರದ ಪರವಾಗಿ ರಾಹುಲ್‌ ಮೆಹ್ರಾ ವಾದಿಸಿದರು. ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ಪೀಠ ಸೂಚಿಸಿದೆ. ಪ್ರಕರಣದಲ್ಲಿ ಉದ್ಭವಿಸಬಹುದಾದ ಕಾನೂನು ತೊಡಕುಗಳ ಕುರಿತು ಸೂಚನೆಯೊಂದನ್ನು ನೀಡಬೇಕು ಅದಕ್ಕೆ ಪರಿಹಾರವನ್ನು ಸೂಚಿಸಬೇಕು ಎಂದು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವ ವಕೀಲ (ಅಮಿಕಸ್‌ ಕ್ಯೂರಿ) ರಾಜಶೇಖರ್‌ ರಾವ್‌ ಅವರಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಮೇ 6ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com