ಕೇಂದ್ರ ಮೀಸಲಾತಿ ವಿರೋಧಿಯಲ್ಲ: ಪರಿಶಿಷ್ಟ ಸಮುದಾಯಗಳ ಒಳ ವರ್ಗೀಕರಣ ಬೆಂಬಲಿಸುವುದಾಗಿ ಸುಪ್ರೀಂಗೆ ತಿಳಿಸಿದ ಎಸ್‌ಜಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ವರ್ಗೀಕರಣದ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಎಸ್ ಜಿ ತುಷಾರ್ ಮೆಹ್ತಾ ಮತ್ತು ಸುಪ್ರೀಂ ಕೋರ್ಟ್
ಎಸ್ ಜಿ ತುಷಾರ್ ಮೆಹ್ತಾ ಮತ್ತು ಸುಪ್ರೀಂ ಕೋರ್ಟ್

ಭಾರತದಲ್ಲಿ ಶೋಷಿತ ವರ್ಗಗಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಒಳ ವರ್ಗೀಕರಣ ಮಾಡುವುದರ ಪರ ತಾನಿರುವುದಾಗಿ ತಿಳಿಸಿತು [ಪಂಜಾಬ್‌ ಸರ್ಕಾರ ಇನ್ನಿತರರು ಮತ್ತು ದೇವಿಂದರ್‌ ಸಿಂಗ್‌ ಇನ್ನಿತರರ ನಡುವಣ ಪ್ರಕರಣ]

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿತ್ತಲ್‌, ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠದೆದುರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಚಾರ ತಿಳಿಸಿದರು.

ಎಸ್‌ಸಿ ಮತ್ತು ಎಸ್‌ಟಿಯಂತಹ ಮೀಸಲಾತಿ ಪಡೆದ ಸಮುದಾಯಗಳನ್ನು ಒಳ-ವರ್ಗೀಕರಿಸುವ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಪರಿಶಿಷ್ಟ ಸಮುದಾಯಗಳ ಒಳ ವರ್ಗೀಕರಣಕ್ಕಾಗಿ  2006 ಲ್ಲಿ ಪಂಜಾಬ್ ವಿಧಾನಸಭೆ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯಿದೆ ಯನ್ನು ಜಾರಿಗೆ ತಂದಿತ್ತು. ಆದರೆ ಅದನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಮೇಲ್ಮನವಿಯನ್ನು ಆರಂಭದಲ್ಲಿ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಮತ್ತು ನಂತರ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿತು.

ಒಳ ವರ್ಗೀಕರಣ ಅಸಾಂವಿಧಾನಿಕ ಎಂದು ಇ ವಿ ಚಿನ್ನಯ್ಯ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಪೀಠ ಒಪ್ಪದ ಹಿನ್ನೆಲೆಯಲ್ಲಿ ಆಗಸ್ಟ್ 2020 ರಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿತ್ತು.

ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮೀಸಲಾತಿ ಪಡೆದ ಜಾತಿಗಳ ಒಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ರೂಪಿಸಿರುವ ಕಾಯಿದೆಯು ಕಾನೂನಿನ ಸಡಿಲಿಕೆಗಳಿಂದಾಗಿ ಈಗಾಗಲೇ ಪ್ರಯೋಜನ ಪಡೆದ ಸಮುದಾಯಗಳನ್ನು ಹೊರಗಿಡುವ ಗುರಿ ಹೊಂದಿರಬಹುದು ಎಂದು ಮೌಖಿಕವಾಗಿ ತಿಳಿಸಿತ್ತು.

2ನೇ ದಿನ ಎಸ್ಸಿ, ಎಸ್ಟಿ ಉಪವರ್ಗಗಳ ವಿಚಾರಣೆ ಪೀಠ
2ನೇ ದಿನ ಎಸ್ಸಿ, ಎಸ್ಟಿ ಉಪವರ್ಗಗಳ ವಿಚಾರಣೆ ಪೀಠ

ಬುಧವಾರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮೆಹ್ತಾ ಅವರು ಒಳ ವರ್ಗೀಕರಣವನ್ನು ಸಕ್ರಿಯಗೊಳಿಸುವುದರಿಂದ ಮೀಸಲಾತಿ ಸೌಲಭ್ಯಗಳನ್ನು ಈ ಸವಲತ್ತುಗಳ ಅಗತ್ಯವಿರುವ ವ್ಯಕ್ತಿಗಳಿಗೆ ವಿಸ್ತರಿಸಿದಂತಾಗುತ್ತದೆ ಎಂದು ವಾದಿಸಿದರು.

ಎಸ್‌ಸಿ- ಎಸ್‌ಟಿ ಸಮುದಾಯಗಳ ಒಳ ವರ್ಗೀಕರಣ ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಎಸ್‌ಜಿ ಮೆಹ್ತಾ ಹೇಳಿದರು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ , ಪರಿಶಿಷ್ಟ ಜಾತಿಗಳನ್ನು ಯಾವುದೇ ವಾಸ್ತವಿಕ ಬೆಂಬಲವಿಲ್ಲದ ಏಕರೂಪದ ಗುಂಪು ಎಂದು ಪರಿಗಣಿಸಿದ್ದರಿಂದ ಚಿನ್ನಯ್ಯ ಪ್ರಕರಣದಲ್ಲಿ ನೀಡಿದ ತೀರ್ಪು ದೋಷದಿಂದ ಕೂಡಿದೆ ಎಂದು ವಾದಿಸಿದರು.

"ಪದನಾಮವು ಸಂವಿಧಾನದ ಉದ್ದೇಶಗಳಿಗಾಗಿ ಇದ್ದು ಮೀಸಲಾತಿಗೆ ಸಂಬಂಧಿಸಿಲ್ಲ" ಎಂದು ಸಿಜೆಐ ಅಭಿಪ್ರಾಯಪಟ್ಟರು. ಇದಕ್ಕೆ ಸಿಬಲ್ ಸಮ್ಮತಿ ಸೂಚಿಸಿದರು. ಪಂಜಾಬ್‌ ಜನಸಂಖ್ಯೆಯ ಶೇಕಡಾ 32 ರಷ್ಟು ದಲಿತರಿದ್ದಾರೆ ಎಂದು ಸಿಬಲ್‌ ಇದೇ ವೇಳೆ ಗಮನಸೆಳೆದರು.

ಬಳಿಕ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಸಂಸತ್ತು (ರಾಜ್ಯ ವಿಧಾನಸಭೆಗಳಲ್ಲ) ಮಾತ್ರ ಮೀಸಲಾತಿ ಸಮುದಾಯಗಳನ್ನು ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬಹುದು ಇಲ್ಲವೇ ಹೊರಗಿಡಬಹುದು ಎಂದು ಹೇಳಿದರು. ಇದಕ್ಕೆ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ರಾಜ್ಯಗಳಿಗೆ ಅಂತಹ ಅಧಿಕಾರ ಇಲ್ಲ ಎಂದು ಶಂಕರನಾರಾಯಣನ್‌ ಪ್ರತಿಪಾದಿಸಿದರು.

ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಅವರು ಚಿನ್ನಯ್ಯ ಪ್ರಕರಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯನ್ನು ಪ್ರತಿನಿಧಿಸಿ ವಾದ ಮಂಡಿಸಿದರು.

"ವಿಧಿ 14 ಸಂವಿಧಾನವನ್ನು ಹಿಡಿದಿರಿಸಿರುವ ಸುವರ್ಣ ಸೂತ್ರವಾಗಿದೆ. ಯಾವುದೇ ಒಳ ವರ್ಗೀಕರಣವಿಲ್ಲದಿದ್ದಾಗ, ದುರ್ಬಲರಲ್ಲಿ ದುರ್ಬಲರು ನೆಲಕ್ಕೆ ಬೀಳುತ್ತಾರೆ ಮತ್ತು ಅದರಲ್ಲಿ ಬಲಶಾಲಿಗಳು ಸಿಂಹಪಾಲು ಪಡೆಯುತ್ತಾರೆ, ಇದರಿಂದಾಗಿ ಮೀಸಲಾತಿಗೆ ಏಕೆ ಆದ್ಯತೆ ನೀಡಲಾಗಿತ್ತು ಎಂಬ ಕಾರಣವನ್ನು ಅಲ್ಲಗಳೆದಂತಾಗುತ್ತದೆ" ಎಂದು ಅವರು ಹೇಳಿದರು.

ಚಿನ್ನಯ್ಯ ಪ್ರಕರಣದ ತೀರ್ಪು, ಇತರ ಹಿಂದುಳಿದ ವರ್ಗಗಳಲ್ಲಿ ಒಳ ವರ್ಗಗಳಿಗೆ ಅವಕಾಶ ನೀಡಿದ್ದ ಇಂದ್ರಾ ಸಾಹ್ನಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲ ಶೇಖರ್ ನಾಫಡೆ ಹೇಳಿದರು. ಹಿರಿಯ ವಕೀಲರಾದ ನಿಧೇಶ್ ಗುಪ್ತಾ, ಸಲ್ಮಾನ್ ಖುರ್ಷಿದ್, ವಿಜಯ್ ಹನ್ಸಾರಿಯಾ ಮತ್ತು ದಾಮಾ ಶೇಷಾದ್ರಿ ನಾಯ್ಡು ಈ ವಾದಕ್ಕೆ ತಲೆದೂಗಿದರು.

ಇಡಬ್ಲ್ಯೂಎಸ್‌ ತೀರ್ಪುನಲ್ಲಿ ಅಂತರಸಂಪರ್ಕದ ಬಿಂದುವನ್ನು ನಿರ್ಣಯಿಸುವ ಅಧಿಕಾರವನ್ನು ರಾಜ್ಯಗಳು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ವಕೀಲ ಶಿವಂ ಸಿಂಗ್ ವಾದಿಸಿದರು.

ತೆಲಂಗಾಣ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ , ಮೀಸಲಾತಿ ವರ್ಗದಲ್ಲಿ ಶೇಕಡಾ 70 ರಷ್ಟು ಜನಸಂಖ್ಯೆಯಿದ್ದರೂ, ಮಾದಿಗ ಸಮುದಾಯ ಮೀಸಲಾತಿಯೊಳಗೆ ಕೇವಲ ಶೇ 20ರಷ್ಟು ಸೌಲಭ್ಯ ಪಡೆಯುತ್ತಿದೆ ಎಂದರು.

ಆಂಧ್ರಪ್ರದೇಶ ಸರ್ಕಾರದ ಪರವಾಗಿ ಹಾಜರಾದ ನಿವೃತ್ತ ನ್ಯಾಯಮೂರ್ತಿ ಮತ್ತು ಹಿರಿಯ ವಕೀಲ ಡಾ. ಎಸ್‌ ಮುರಳೀಧರ್ ಅವರು, ಚಿನ್ನಯ್ಯ ಪ್ರಕರಣದ ತೀರ್ಪಿನ ನಂತರ ರಾಜ್ಯ ಸರ್ಕಾರ ಯಾವುದೇ ಒಳ ವರ್ಗೀಕರಣ ಮಾಡಿಲ್ಲ ಎಂದು ಹೇಳಿದರು.

ಇಂದಿರಾ ಸಾಹ್ನಿ ಪ್ರಕರಣದ ತೀರ್ಪು ಮೀಸಲಾತಿ ಜಾರಿಗೆ ಚೌಕಟ್ಟನ್ನು ರೂಪಿಸಿದೆ ಎಂದು ವಕೀಲ ಕನು ಅಗರ್‌ವಾಲ್‌ ವಾದಿಸಿದರು. ಇಂದು ಕೂಡ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

Related Stories

No stories found.
Kannada Bar & Bench
kannada.barandbench.com