ಐ ಟಿ ನಿಯಮಾವಳಿಗೆ ತಿದ್ದುಪಡಿ: ಹೇಗಿರಲಿದೆ ದೂರು ಮೇಲ್ಮನವಿ ಸಮಿತಿಯ ಸ್ವರೂಪ?

ಹೊಸ ನಿಯಮದ ಪ್ರಕಾರ ಕುಂದು ಕೊರತೆ ಅಧಿಕಾರಿ ನೀಡಿದ ತೀರ್ಪಿನಿಂದ ಬಾಧಿತರಾದವರು ಮೂವತ್ತು ದಿನಗಳ ಒಳಗಾಗಿ ದೂರು ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಬಹುದಾಗಿದೆ.
ಐ ಟಿ ನಿಯಮಾವಳಿಗೆ ತಿದ್ದುಪಡಿ: ಹೇಗಿರಲಿದೆ ದೂರು ಮೇಲ್ಮನವಿ ಸಮಿತಿಯ ಸ್ವರೂಪ?
Published on

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ಕ್ಕೆ  ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು ದೂರು ಪರಿಹಾರ ವ್ಯವಸ್ಥೆಗೆ ಗಮನಾರ್ಹ ಬದಲಾವಣೆ ತಂದಿದೆ.

ತಿದ್ದುಪಡಿ ಮಾಡುವ ಮೂಲಕ ಹೊಸದಾಗಿ ಜಾರಿಗೆ ತಂದಿರುವ  3ಎ ನಿಯಮಾವಳಿ
ದೂರು ಮೇಲ್ಮನವಿ ಸಮಿತಿಯನ್ನು ಸ್ಥಾಪಿಸಲು ಅವಕಾಶ ಒದಗಿಸಿದೆ.

ಕೇಂದ್ರ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ತಂದ ದಿನದಿಂದ ಮೂರು ತಿಂಗಳೊಳಗೆ ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ದೂರು ಮೇಲ್ಮನವಿ ಸಮಿತಿಗಳನ್ನು ಸ್ಥಾಪಿಸಬೇಕು ಎಂದು 3ಎ ನಿಯಮಾವಳಿ ಹೇಳುತ್ತದೆ.

ನಿಯಮ 3ಎ (2) ರ ಪ್ರಕಾರ, ಪ್ರತಿಯೊಂದು ದೂರು ಮೇಲ್ಮನವಿ ಸಮಿತಿಯು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಮತ್ತು ಇಬ್ಬರು ಪೂರ್ಣಾವಧಿ ಸದಸ್ಯರನ್ನು ಒಳಗೊಂಡಿರಬೇಕಿದ್ದು ಅದರಲ್ಲಿ ಒಬ್ಬರು ಪದನಿಮಿತ್ತ ಸದಸ್ಯರು ಮತ್ತು ಇಬ್ಬರು ಸ್ವತಂತ್ರ ಸದಸ್ಯರಿರಬೇಕು.

ಹೊಸ ನಿಯಮದ ಪ್ರಕಾರ ಕುಂದು ಕೊರತೆ ಅಧಿಕಾರಿ ನೀಡಿದ ತೀರ್ಪಿನಿಂದ ಬಾಧಿತರಾದವರು ಮೂವತ್ತು ದಿನಗಳ ಒಳಗಾಗಿ ದೂರು ಮೇಲ್ಮನವಿ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಪ್ರಕರಣದ ಸಲುವಾಗಿ ಸಮಿತಿಗೆ ಅಗತ್ಯವೆನಿಸಿದರೆ ಸೂಕ್ತ ಅರ್ಹತೆ, ಅನುಭವ ಮತ್ತು ವಿಷಯದಲ್ಲಿ ಪರಿಣತಿ ಹೊಂದಿರುವ ಯಾವುದೇ ವ್ಯಕ್ತಿಯ ಸಹಾಯವನ್ನು ಪಡೆಯಬಹುದಾಗಿದೆ.

ಸಮಿತಿ ಆನ್‌ಲೈನ್‌ ವ್ಯಾಜ್ಯ ಪರಿಹಾರ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮೇಲ್ಮನವಿ ಸಲ್ಲಿಸುವುದರಿಂದ ಹಿಡಿದು ತೀರ್ಪು ನೀಡುವವರೆಗೆ ಇಡೀ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್‌ ವಿಧಾನದಲ್ಲಿರಬೇಕು. ಸಮಿತಿ ನೀಡಿದ ಎಲ್ಲಾ ತೀರ್ಪುಗಳನ್ನು ಸಾಮಾಜಿಕ ಮಾಧ್ಯಮ ಮಧ್ಯವರ್ತಿ ವೇದಿಕೆಯು ಪಾಲಿಸಿ ಆ ಕುರಿತ ವರದಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಬೇಕು.

ಐಟಿ ನಿಯಮಾವಳಿ 2021ರ ಅಡಿಯಲ್ಲಿ ನೀಡಲಾದ ಎಚ್ಚರಿಕೆಗಳನ್ನು ಬಳಕೆದಾರರು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ತಿದ್ದುಪಡಿ ಮಾಡಲಾದ ನಿಯಮಗಳು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ ಮೇಲೆ ಹೊಣೆ ಹೊರಿಸುತ್ತವೆ.

[ಅಧಿಸೂಚನೆಯ ಪ್ರತಿಯನ್ನು ಇಲ್ಲಿ ಓದಿ]

Attachment
PDF
Notificatin.pdf
Preview
Kannada Bar & Bench
kannada.barandbench.com