ಉನ್ನತ ನ್ಯಾಯಾಂಗಕ್ಕೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಸಂಬಂಧ ಉಂಟಾಗುತ್ತಿರುವ ವಿಳಂಬ ಪ್ರಕ್ರಿಯೆ ತಡೆಯುವ ಸಲುವಾಗಿ ಸರ್ಕಾರ ಮತ್ತು ಗುಪ್ತಚರ ದಳ ಅನುಸರಿಸಬೇಕಾದ ಗಡುವನ್ನು ಸುಪ್ರೀಂಕೋರ್ಟ್ ಮಂಗಳವಾರ ನಿಗದಿಪಡಿಸಿದೆ. (ಪಿಎಲ್‌ಆರ್ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡದ್ ಮತ್ತು ಮಹಾನಂದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ ನಡುವಣ ಪ್ರಕರಣ).
ರಾಜ್ಯ ಸರ್ಕಾರ ಮತ್ತು ಗುಪ್ತಚರ ಇಲಾಖೆಯ ಮಾಹಿತಿ ಪಡೆದ ಬಳಿಕ ಕೇಂದ್ರ ಸರ್ಕಾರ 8ರಿಂದ 12 ವಾರಗಳಲ್ಲಿ ಕೊಲಿಜಿಯಂಗೆ ಕಡತ ರವಾನಿಸುವುದು ಅಪೇಕ್ಷಣೀಯ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಸೂರ್ಯ ಕಾಂತ್ ಅವರಿದ್ದ ಪೀಠ ಹೇಳಿದೆ. ಮುಖ್ಯವಾಗಿ, ಕೊಲಿಜಿಯಂ ಒಂದು ಪ್ರಸ್ತಾವನೆ ಕುರಿತು ಪುನರುಚ್ಚರಿಸಿದ 3 ರಿಂದ 4 ವಾರಗಳಲ್ಲಿ ಕೇಂದ್ರ ಸರ್ಕಾರ ನೇಮಕಾತಿ ಕುರಿತು ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 4 ರಿಂದ 6 ವಾರಗಳಲ್ಲಿ ಗುಪ್ತಚರ ದಳ ತನ್ನ ವರದಿ/ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ರಾಜ್ಯ ಸರ್ಕಾರ ಮತ್ತು ಗುಪ್ತಚರ ಇಲಾಖೆಯ ಮಾಹಿತಿ ಪಡೆದ ಬಳಿಕ ಕೇಂದ್ರ ಸರ್ಕಾರ 8ರಿಂದ 12 ವಾರಗಳಲ್ಲಿ ಕೊಲಿಜಿಯಂಗೆ ಕಡತ ರವಾನಿಸುವುದು ಅಪೇಕ್ಷಣೀಯ. ಆ ಬಳಿಕ ಸರ್ಕಾರ ನೇಮಕಾತಿಯನ್ನು ತಕ್ಷಣವೇ ಪರಿಗಣಿಸಲು ಮುಂದಾಗಬೇಕು ಮತ್ತು ಅರ್ಹತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಕುರಿತಂತೆ ಯಾವುದೇ ಆಕ್ಷೇಪಗಳಿದ್ದಲ್ಲಿ ಅದೇ ಅವಧಿಯಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂಗೆ ಕಳುಹಿಸಬೇಕು ಎಂದು ತಿಳಿಸಿದೆ. ಮೇಲಿನ ಮಾಹಿತಿಗಳನ್ನು ಪರಿಗಣಿಸಿದ ಬಳಿಕ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸನ್ನು ಸರ್ವಾನುಮತದಿಂದ ಪುನರುಚ್ಚರಿಸಿದರೆ ಅಂತಹ ನೇಮಕಾತಿಯನ್ನು ಮೂರರಿಂದ ನಾಲ್ಕು ವಾರಗಳಲಿ ಪೂರೈಸಬೇಕು ಎಂದು ಅದು ವಿವರಿಸಿದೆ.
ಹೈಕೋರ್ಟ್‌ಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಹೀಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹುದ್ದೆಗಳನ್ನು ಒಮ್ಮೆಲೇ ಭರ್ತಿ ಮಾಡದಿದ್ದರೂ ಅವುಗಳನ್ನು ಆದಷ್ಟು ಬೇಗ ಭರ್ತಿ ಮಾಡಲು ಶಿಫಾರಸು ಮಾಡಬೇಕು ಎಂದು ಸಲಹೆ ನೀಡಿದೆ.